ಸಾರಾಂಶ
ಈರಪ್ಪ ನಾಯ್ಕರ
ಹುಬ್ಬಳ್ಳಿ:oಂದು ಕಾಲದಲ್ಲಿ ಮತ್ತೊಬ್ಬರ ಮನೆಯಲ್ಲಿ ಜೀತಕ್ಕಿದ್ದ ವ್ಯಕ್ತಿಯೊಬ್ಬ ಇದೀಗ ಸ್ವಂತ ಉದ್ಯೋಗ ಮಾಡುವ ಜೊತೆಗೆ ತನ್ನ ನೆಚ್ಚಿನ ಎತ್ತುಗಳಿಗೆ ಲಕ್ಷಗಟ್ಟಲೇ ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣ ತೊಡಿಸಿ ಉಳವಿ ಜಾತ್ರೆಗೆ ಹೋಗಿ ಸಂಭ್ರಮಿಸುತ್ತಿದ್ದಾರೆ!
ಇದು ಕಲಘಟಗಿ ತಾಲೂಕಿನ ಮಿಶ್ರಿಕೋಟಿಯ ಈರಪ್ಪ ಅರಳಿಕಟ್ಟಿ ಎಂಬ ರೈತನ ಯಶೋಗಾಥೆ.ಈರಪ್ಪ ಜೀತಕ್ಕೆ ಇದ್ದ ವೇಳೆ ಹಾವು ಕಚ್ಚಿತ್ತು. ಅಲ್ಲಿಂದ ಜೀತಮುಕ್ತರಾಗಿದ್ದಾರೆ. ಬಳಿಕ ಎರಡು ಎಕರೆ ಜಮೀನನ್ನು ಲಾವಣಿಗೆಂದು ಪಡೆದು ಒಂದೆರಡು ವರ್ಷ ಕೃಷಿ ಮಾಡಿ ಅಲ್ಪಸ್ವಲ್ಪ ಲಾಭ ಗಳಿಸಿದರು. ಬಳಿಕ ಎತ್ತುಗಳನ್ನು ಖರೀದಿಸಿದ್ದರು. ಆದರೆ, ನಂತರದ ವರ್ಷ ಭೀಕರ ಬರದಿಂದಾಗಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟಕರವಾಗಿತ್ತು. ಇನ್ನು ಎತ್ತುಗಳಿಗೆ ಅದ್ಹೇಗೆ ಹೊಟ್ಟೆ ತುಂಬಿಸುತ್ತಾರೆ? ಹೀಗಾಗಿ ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಿದರು.
ಆ ಎತ್ತುಗಳ ಮಾರಾಟದಿಂದ ಆಗಲೇ ₹ 500 ಲಾಭ ಬಂದಿತ್ತು. ಮತ್ತಷ್ಟು ಸಾಲ ಮಾಡಿ ಎತ್ತುಗಳನ್ನು ಖರೀದಿಸಿ ಕೆಲ ದಿನ ಸಾಕಿ ನಂತರ ಮಾರಾಟ ಮಾಡಲು ಶುರು ಮಾಡಿದರು. ಅದೇ ಅವರ ಕೈ ಹಿಡಿಯಿತು. ಆಗಿನಿಂದ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಅದರಲ್ಲೇ ಸಾಕಷ್ಟು ಗಳಿಸಿದರು. ಹೊಲ ಮನೆ ಎಲ್ಲವನ್ನೂ ಮಾಡಿಕೊಂಡರು.ಎತ್ತುಗಳಿಗೆ ಚಿನ್ನಾಭರಣ:
ಬಸ್ಸಿನಲ್ಲಿ ಉಳವಿ ಜಾತ್ರೆಗೆ ಹೋಗಿ ಬರುತ್ತಿದ್ದ ಈರಪ್ಪ ಅಲ್ಲಿನ ಚಕ್ಕಡಿಗಳನ್ನು ನೋಡಿ ತಾನೂ ಚಕ್ಕಡಿಯೊಂದಿಗೆ ಉಳವಿಗೆ ಬರುವ ಸಂಕಲ್ಪ ಮಾಡಿದರು. ವರ್ಷದಿಂದ ವರ್ಷಕ್ಕೆ ವ್ಯಾಪಾರ ಚೆನ್ನಾಗಿ ಆಗಿದ್ದರಿಂದ ತಮ್ಮದೇ ಎತ್ತುಗಳಿಂದ ಚಕ್ಕಡಿ ಕಟ್ಟಿಕೊಂಡು ಉಳವಿಗೆ ಪ್ರತಿವರ್ಷ ಹೋಗುತ್ತಿದ್ದಾರೆ. ಕಳೆದ 18 ವರ್ಷದಿಂದ ಇವರು ತಮ್ಮ ಚಕ್ಕಡಿ ತೆಗೆದುಕೊಂಡು ಹೋಗುತ್ತಿದ್ದಾರೆ.ತಾವು ತೆಗೆದುಕೊಂಡು ಹೋಗುವ ಎತ್ತುಗಳಿಗೆ ಅರ್ಧ ಕೆಜಿ ಬೆಳ್ಳಿಯಲ್ಲಿ 4 ಕಡಗ, 15 ತೊಲ ಬೆಳ್ಳಿಯಲ್ಲಿ 4 ಕೋಡೆಣಸ್ ಹಾಗೂ ಎತ್ತಿನ ಕೋಡುಗಳಿಗೆ 21 ತೊಲೆಯಲ್ಲಿ 4 ಚಿನ್ನದ ಕೋಡೆಣಸ್ ಮಾಡಿಸಿದ್ದಾರೆ. ಅವುಗಳನ್ನು ಹಾಕಿಕೊಂಡು ಅದ್ಧೂರಿಯಾಗಿ ಉಳವಿ ಜಾತ್ರೆಗೆ ತೆರಳುತ್ತಾರೆ. ಕಳೆದ ಹಲವು ವರ್ಷಗಳಿಂದ ಈ ರೀತಿ ಎತ್ತುಗಳಿಗೆ ಬಂಗಾರ ಹಾಗೂ ಬೆಳ್ಳಿ ಆಭರಣ ಹಾಕಿಕೊಂಡು ಹೋಗುತ್ತಿದ್ದಾರೆ.
ಪ್ರತಿವರ್ಷವೂ ಉಳವಿ ಜಾತ್ರೆಗೆ ಹೋಗುವ ಮುನ್ನ ಊರಿಗೆಲ್ಲ ಅನ್ನಸಂತರ್ಪಣೆ ಮಾಡಿ ತೆರಳುವುದು ರೂಢಿ ಮಾಡಿಕೊಂಡಿದ್ದಾರೆ. ಇದೀಗ ಫೆ.12ರಂದು ಉಳವಿ ಜಾತ್ರೆಗೆ ಚಕ್ಕಡಿಯೊಂದಿಗೆ ಹೊರಟಿದ್ದಾರೆ ಈರಪ್ಪ.