ಉಚ್ಚಿಲದಲ್ಲಿ ಮೈನವಿರೇಳಿಸಿದ ಪೊಣ್ಣು ಪಿಲಿಕುಲು !

| Published : Sep 28 2025, 02:00 AM IST

ಸಾರಾಂಶ

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ ವತಿಯಿಂದ ಶನಿವಾರ ಉಚ್ಚಿಲ ಉಡುಪಿ ದಸರಾದಲ್ಲಿ ನಡೆದ ಪೊಣ್ಣು ಪಿಲಿ ನಲಿಕೆ- 2025ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಚ್ಚಿಲಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರದ ದಸರಾಕ್ಕೆ ವರ್ಷದಿಂದ ವರ್ಷಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ, ಇದು ಈ ಕ್ಷೇತ್ರವು ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಹೇಳಿದರು.ಅವರು ಅಧ್ಯಕ್ಷರಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ ವತಿಯಿಂದ ಶನಿವಾರ ಉಚ್ಚಿಲ ಉಡುಪಿ ದಸರಾದಲ್ಲಿ ನಡೆದ ಪೊಣ್ಣು ಪಿಲಿ ನಲಿಕೆ- 2025ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಸ್ಪರ್ಧೆಯನ್ನು ಉದ್ಘಾಟಿಸಿದರು. ದ.ಕ. ಜಿಲ್ಲಾ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಉದ್ಯಮಿ ಶ್ಯಾಮಿಲಿ ನವೀನ್, ಸಮಾಜ ಸೇವಕಿ ನಿರುಪಮಾ ಶೆಟ್ಟಿ, ನೃತ್ಯಕಲಾವಿದೆ ದೀಕ್ಷಾ ಬ್ರಹ್ಮಾವರ, ದೇವಳದ ಆಡಳಿತ ಮಂಡಳಿಯ ಪ್ರಮುಖರಾದ ಸತೀಶ್ ಕುಂದರ್, ವಿನಯ ಕರ್ಕೇರ, ವಾಸುದೇವ ಸಾಲ್ಯಾನ್, ಅಜಿತ್ ಕೊಡವೂರು, ಸಂಧ್ಯಾದೀಪ ಸುನಿಲ್ ಮುಂತಾದವರಿದ್ದರು.ಸ್ಪರ್ಧೆಯ ನಂತರ ಈ ದಸರಾದ ರೂವಾರಿ ನಾಡೋಜ ಡಾ. ಜಿ. ಶಂಕರ್, ವಿಜೇತರಿಗೆ ಮಹಾಲಕ್ಷ್ಮೀ ಕೋಪರೇಟಿವ್ ಬ್ಯಾಂಕ್ ಪ್ರಾಯೋಜಿತ ಬಹುಮಾನಗಳನ್ನು ವಿತರಿಸಿದರು.ಗುಣಮಟ್ಟದ ಹುಲಿಕುಣಿತ

ಈ ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯಲ್ಲಿ 20 ತಂಡಗಳು ಭಾಗವಹಿಸಿದ್ದವು. ತಾಸೆಡೋಲಿನ ಸದ್ದಿಗೆ ಈ ಸ್ಪರ್ಧಿಗಳು ಪುರುಷ ಸ್ಪರ್ಧಿಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ ಕುಣಿದು ಕಪ್ಪಳಿಸಿದರು. ಸ್ಪರ್ಧಿಗಳು ಸಾಕಷ್ಟು ತಯಾರಿ ಮಾಡಿ ಬಂದಿದ್ದರಿಂದ ಕುಣಿತ ಗುಣಮಟ್ಟ ಚೆನ್ನಾಗಿತ್ತು, ಸಾಂಪ್ರದಾಯಿಕವಾಗಿಯೂ ಇತ್ತು, ತೀರ್ಪುಗಾರರಾದ ಹಳೆಯ ಹುಲಿಕುಣಿತಗಾರ ಸುಧಾಕರ ಬೈಲಕರೆ ಮತ್ತು ಖ್ಯಾತ ಕೊಳಲುವಾದಕ ಪಾಂಡುರಂಗ ಪಡ್ಡಾಮ ಅವರು ವಿಜೇತರ ಆಯ್ಕೆ ಕಠಿಣವಾಗಿತ್ತು ಎಂದರು. ಗುಂಪು ವಿಭಾಗ - ಪ್ರಥಮ: ದರ್ಪಣ ಟೀಮ್ ಉಡುಪಿ, ದ್ವಿತೀಯ: ಡಿಡಿ ಗ್ರೂಪ್ ನಿಟ್ಟೂರು, ತೃತೀಯ: ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ

ವೈಯುಕ್ತಿಕ - ಪ್ರಥಮ: ಸೌಮ್ಯ ಸುರೇಂದ್ರ, ದ್ವಿತೀಯ: ತನಿಷ್ಕಾ ಭಂಡಾರಿ, ತೃತೀಯ: ರಮ್ಯಾ ರೂಪೇಶ್‌.