ಸಾರಾಂಶ
ಯಾವುದೇ ಜಮೀನುಗಳಿಗೆ ತೆರಳಲು ರಸ್ತೆ ಕಲ್ಪಿಸಲೇ ಬೇಕು ಎಂದು ಆದೇಶವಿದ್ದರೂ ಸಹ ಇಲ್ಲಿಯ ಅಧಿಕಾರಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ತಾಲೂಕು ಕಚೇರಿ, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಕಂದಾಯ ಸಚಿವರು, ಮುಖ್ಯಮಂತ್ರಿಗಳು ಮತ್ತು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜವಾಗಿಲ್ಲ ಎಂದು ತಂಡಗ ರಂಗಸ್ವಾಮಿ ಕಣ್ಣೀರು ಹಾಕುತ್ತಾರೆ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಈ ರೈತನ ಗೋಳನ್ನು ಕೇಳುವ ಕಿವಿಗಳಿಲ್ಲ. ಕಳೆದ ೪೫೦ ದಿನಗಳಿಂದಲೂ ತನಗಾಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಬೇಡಿಕೊಳ್ಳದ ಅಧಿಕಾರಿಗಳಿಲ್ಲ. ತಾಲೂಕು ಕಚೇರಿಗೆ ಸುತ್ತಿ ಆತನ ಚಪ್ಪಲಿಗಳು ಸವೆದು ಹೋಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹತ್ತಾರು ವರ್ಷಗಳಿಂದ ಬೆಳೆಸಿರುವ ತೆಂಗು, ಅಡಿಕೆ, ಮೆಣಸು, ಬಾಳೆ ಬೆಳೆಗಳು ಇಂದು ಹಾಳಾಗಿ ಹೋಗುತ್ತಿವೆ. ತಾನೇ ಶ್ರಮಪಟ್ಟು ಬೆಳೆಸಿದ ಗಿಡಮರಗಳು ತನ್ನ ಕಣ್ಣೆದುರೇ ಒಣಗಿ ಹೋಗುತ್ತಿರುವುದನ್ನು ಕಂಡು ಮಮ್ಮಲ ಮರುಗುತ್ತಿದ್ದಾನೆ. ಇತ್ತ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾನೆ.ಹೌದು. ಇದು ತುರುವೇಕೆರೆ ತಾಲೂಕು ತಂಡಗದ ಮಾಜಿ ಯೋಧ ರಂಗಸ್ವಾಮಿಯವರ ಸ್ಥಿತಿಗತಿ. ರಂಗಸ್ವಾಮಿಯವರು ಓರ್ವ ಪ್ರಗತಿಪರ ರೈತರಾಗಿದ್ದಾರೆ. ಇರುವ ಮೂರ್‍ನಾಲ್ಕು ಎಕರೆ ಜಮೀನಿನಲ್ಲಿ ಸಾಕಷ್ಟು ಕೃಷಿ ಪ್ರಯೋಗಗಳಿಂದ ಯಶಸ್ವಿಯೂ ಆಗಿದ್ದಾರೆ. ಆದರೆ ಈಗ ಯಾಕಾದರೂ ಕೃಷಿ ಮಾಡಿದ್ದೇನೋ ಎಂದು ಪರಿತಪಿಸುತ್ತಿದ್ದಾರೆ. ಇದಕ್ಕೆ ಕಾರಣ ಸಾರ್ವಜನಿಕರು ಓಡಾಡುವ ರಸ್ತೆಗೆ ಓರ್ವ ಖಾಸಗಿ ವ್ಯಕ್ತಿ ಈ ಜಮೀನು ತನ್ನದೆಂದು ಹೇಳಿ ಬೇಲಿ ಹಾಕಿಕೊಂಡು ರಸ್ತೆಯನ್ನು ಬಂದ್ ಮಾಡಿರುವುದು. ಇದರಿಂದಾಗಿ ಕೇವಲ ರಂಗಸ್ವಾಮಿಯವರಿಗೆ ಮಾತ್ರವಲ್ಲ ಇಂತಹ ನೂರಾರು ಮಂದಿ ರೈತರಿಗೆ ತೊಂದರೆಯಾಗಿದೆ.
ತಂಡಗ ಗ್ರಾಮದಿಂದ ವಿಠಲದೇವರಹಳ್ಳಿಗೂ ಇದೇ ಮಾರ್ಗದಲ್ಲಿ ಜನರು ಸಂಚರಿಸುತ್ತಿದ್ದರಂತೆ. ಕಳೆದ ಒಂದೆರೆಡು ವರ್ಷಗಳಿಂದೀಚೆಗೆ ವ್ಯಕ್ತಿಯೋರ್ವರು ಬೇಲಿ ಹಾಕಿ ಜನರು, ಜಾನುವಾರುಗಳು ಸೇರಿದಂತೆ ಯಾವುದೇ ವಾಹನಗಳೂ ಓಡಾಡದಂತೆ ಬೇಲಿ ಹಾಕಿಕೊಂಡಿದ್ದಾರಂತೆ. ಇದರ ವಿರುದ್ಧ ರಂಗಸ್ವಾಮಿ ಸೇರಿ ಹಲವರು ತಾಲೂಕು ಕಚೇರಿಗೆ ಮನವಿ ಸಲ್ಲಿಸಿ ರಸ್ತೆಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಆದರೆ ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ಇವರ ಮನವಿಗೆ ಕವಡೆ ಕಿಮ್ಮತ್ತೂ ನೀಡಿಲ್ಲ.ಒಣಗಿದ ಮರಗಿಡಗಳು:
ಮುಚ್ಚಲ್ಪಟ್ಟಿರುವ ರಸ್ತೆಯನ್ನು ತೆರವುಗೊಳಿಸದ ಹಿನ್ನೆಲೆಯಲ್ಲಿ ನೂರಾರು ರೈತರಿಗೆ ತೊಂದರೆಯಾಗಿದೆ. ತಮ್ಮ ತೋಟಕ್ಕೆ ತೆರಳಲು ರಸ್ತೆ ಇಲ್ಲ, ಗಿಡ ಮರಗಳಿಗೆ ನೀರು ಹಾಯಿಸಲೂ ಸಾಧ್ಯವಾಗಿಲ್ಲ. ಬಿದ್ದ ಕಾಯಿಗಳನ್ನು ಮನೆಗೆ ತರಲೂ ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ರಂಗಸ್ವಾಮಿಯವರ ತೋಟದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ತೆಂಗಿನ ಕಾಯಿಗಳು ಗುಡ್ಡೆಯಲ್ಲೇ ಸಸಿಗಳಾಗಿವೆ. ತಮ್ಮ ತೋಟದಿಂದ ಯಾವ ಬೆಳೆಯನ್ನೂ ಸಹ ಹೊರಗೆ ತೆಗೆದುಕೊಂಡು ಬರಲು ಸಾಧ್ಯವಾಗಿಲ್ಲ. ಬೆಳೆಗಳಿಗೆ ನೀರುಣಿಸಲೂ ಆಗದೇ ಇರುವ ಕಾರಣ ನೂರಾರು ತೆಂಗಿನ ಮರಗಳು, ಅಡಿಕೆ ಮರಗಳು, ಮೆಣಸಿನ ಬಳ್ಳಿ, ಬಾಳೆ ಸೇರಿ ಇನ್ನಿತರ ಎಲ್ಲಾ ಬೆಳೆಗಳು ತಮ್ಮ ಕಣ್ಣೆದುರೇ ಒಣಗಿ ಹೋಗುತ್ತಿವೆ. ಇದನ್ನು ಕಂಡು ಏನೂ ಮಾಡಲಾರದ ಸ್ಥಿತಿಯಲ್ಲಿ ರೈತರಿದ್ದಾರೆ.ಅಧಿಕಾರಿಗಳಿಂದ ಜಾಣ ಕಿವುಡು:
ಯಾವುದೇ ಜಮೀನುಗಳಿಗೆ ತೆರಳಲು ರಸ್ತೆ ಕಲ್ಪಿಸಲೇ ಬೇಕು ಎಂದು ಆದೇಶವಿದ್ದರೂ ಸಹ ಇಲ್ಲಿಯ ಅಧಿಕಾರಿಗಳು ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ತಾಲೂಕು ಕಚೇರಿ, ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು, ಕಂದಾಯ ಸಚಿವರು, ಮುಖ್ಯಮಂತ್ರಿಗಳು ಮತ್ತು ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜವಾಗಿಲ್ಲ ಎಂದು ತಂಡಗ ರಂಗಸ್ವಾಮಿ ಕಣ್ಣೀರು ಹಾಕುತ್ತಾರೆ.ಚುನಾವಣೆ ನಂತರ ಧರಣಿಗೆ ನಿರ್ಧಾರ:
ತಮ್ಮ ಜಮೀನುಗಳಿಗೆ ತೆರಳುವ ಮಾರ್ಗವನ್ನು ತೆರವುಗೊಳಿಸದಿರುವ ಬಗ್ಗೆ ಈ ರಸ್ತೆಯಲ್ಲಿ ಸಂಚರಿಸುವ ರೈತಾಪಿಗಳು ಚುನಾವಣೆ ಕಳೆದ ನಂತರ ತಾಲೂಕು ಕಚೇರಿಯ ಮುಂಭಾಗವೇ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಮ್ಮ ಬದುಕೇ ಬೀದಿಗೆ ಬಂದಂತಾಗಿದೆ. ಹತ್ತಾರು ವರ್ಷಗಳಿಂದ ಬೆಳೆದಿರುವ ಗಿಡಮರಗಳು ಒಣಗುತ್ತಿವೆ. ಈಗಾಗಲೇ ಲಕ್ಷಾಂತರ ರು.ಗಳ ನಷ್ಟ ಉಂಟಾಗಿದೆ. ಇದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಬೇಕೆಂದು ರಂಗಸ್ವಾಮಿ ಹೇಳಿದ್ದಾರೆ.