ನೀರು ಕುಡಿಯಲು ಬಂದು ಕೆರೆಯಲ್ಲಿ ಸಿಲುಕಿದ ಕಾಡಾನೆಗಳು!

| Published : Apr 25 2024, 01:04 AM IST

ನೀರು ಕುಡಿಯಲು ಬಂದು ಕೆರೆಯಲ್ಲಿ ಸಿಲುಕಿದ ಕಾಡಾನೆಗಳು!
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಮಂಗಲ ಎರ್ಮಾಡು ಆರ್ಚ್ ಸಮೀಪದಲ್ಲಿರುವ ಕೊಟ್ರಂಗಡ ಸುಬ್ರಮಣಿ ಎಂಬವರ ಕಾಫಿ ತೋಟದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಬೀಡು ಬಿಟ್ಟಿದ್ದ ಕಾಡಾನೆಗಳ ದಂಡು ಸಾಕಷ್ಟು ದಾಂದಲೆ ನಡೆಸಿದ್ದವು. ಬಳಿಕ ರಾತ್ರಿ ವೇಳೆ ಪಕ್ಕದ ತೋಟದ ಕೆರೆಗೆ ನೀರು ಕುಡಿಯಲು ಇಳಿದು ಕೆರೆಯಿಂದ ಮೇಲೆ ಬರಲಾಗದೆ ಪರದಾಡಿದವು. ಅರಣ್ಯ ಸಿಬ್ಬಂದಿ ಆನೆಗಳನ್ನು ರಕ್ಷಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನೀರು ಕುಡಿಯಲು ಕೆರೆಯೊಳಗೆ ಇಳಿದ ಕಾಡಾನೆಗಳ ಹಿಂಡು ಕೆರೆಯಿಂದ ಮೇಲೆ ಬರಲಾಗದೆ ಪರಿತಪಿಸಿ ನಂತರ ಅರಣ್ಯ ಇಲಾಖೆ ಆನೆಗಳನ್ನು ರಕ್ಷಿಸಿದ ಘಟನೆ ದಕ್ಷಿಣ ಕೊಡಗಿನ ಕುಮಟೂರಿನಲ್ಲಿ ಬುಧವಾರ ನಡೆದಿದೆ.

ಶ್ರೀಮಂಗಲ ಎರ್ಮಾಡು ಆರ್ಚ್ ಸಮೀಪದಲ್ಲಿರುವ ಕೊಟ್ರಂಗಡ ಸುಬ್ರಮಣಿ ಎಂಬವರ ಕಾಫಿ ತೋಟದಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಬೀಡು ಬಿಟ್ಟಿದ್ದ ಕಾಡಾನೆಗಳ ದಂಡು ಸಾಕಷ್ಟು ದಾಂದಲೆ ನಡೆಸಿದ್ದವು. ಬಳಿಕ ರಾತ್ರಿ ವೇಳೆ ಪಕ್ಕದ ಬಾಚೆಟಿರ ದೀಪಕ್ ಎಂಬುವವರ ತೋಟಕ್ಕೆ ನುಸುಳಿವೆ. ಬುಧವಾರ ಬೆಳಗ್ಗೆ ನೋಡುವಾಗ ಕಾಡಾನೆಗಳು ಕೆರೆಯ ನೀರಿನಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿವೆ. ಇವುಗಳ ಪೈಕಿ ನಾಲ್ಕೈದು ಕಾಡಾನೆಗಳು ಹೇಗೋ ಕೆರೆಯಿಂದ ಮೇಲೆಬಂದಿವೆ. ಇನ್ನುಳಿದವು ಹೊರಬರಲು ಪರದಾಡುತ್ತಿದ್ದವು.

ಅರಣ್ಯ ಇಲಾಖೆಯ ವತಿಯಿಂದ ಕೆರೆಯ ಒಂದು ಬದಿಯ ದಂಡೆಯನ್ನು ಜೆಡಿಬಿ ಮೂಲಕ ತೆಗೆದು ಕಾಡಾನೆಗಳು ತೆರಳಲು ಅವಕಾಶ ಮಾಡಿಕೊಡಲಾಯಿತು. ಈ ಮೂಲಕ ಕಾಫಿ ತೋಟದ ಕೆರೆಯಲ್ಲಿ ಸಿಲುಕಿದ್ದ ನಾಲ್ಕು ಕಾಡಾನೆಗಳು ಸುರಕ್ಷಿತವಾಗಿ ದಡ ಸೇರಿವೆ.

ಹೆದ್ದಾರಿಯಲ್ಲಿ ಮುಂಜಾನೆ ಕಾಡಾನೆ ವಾಕಿಂಗ್‌!:

ಕಾಡಾನೆಯೊಂದು ಮುಂಜಾನೆ ಹೆದ್ದಾರಿಯಲ್ಲಿ ಪ್ರತ್ಯಕ್ಷಗೊಂಡು ವಾಹನ ಸವಾರರನ್ನು, ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ 7ನೇ ಹೊಸಕೋಟೆಯಲ್ಲಿ ಬುಧವಾರ ಕಂಡುಬಂತು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎದುರಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಧಾವಿಸಿದ ಒಂಟಿ ಸಲಗ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ಆತಂಕಕ್ಕೆ ಒಳಪಡಿಸಿತು. ಜನರ ಮುನ್ನೆಚ್ಚರಿಕೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.ಸ್ಥಳೀಯರ ಸಹಾಯದಿಂದ ಆನೆ ರಸ್ತೆಯಿಂದ ಕಾಫಿ ತೋಟದ ಒಳಗೆ ತೆರಳಿತು.

7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಕಚೇರಿ ತನಕ ರಸ್ತೆಯಲ್ಲಿ ಓಡಾಡಿದ ಒಂಟಿ ಸಲಗ ನಂತರ ರಸ್ತೆ ಬದಿಯಲ್ಲಿದ್ದ ಕಾಫಿ ತೋಟದ ಕಬ್ಬಿಣದ ಗೇಟು ಕಿತ್ತೊಗೆದು ತೋಟದೊಳಗೆ ತೆರಳಿದ ಕಾರಣ ಸ್ಥಳೀಯರಲ್ಲಿ ಮೂಡಿದ್ದ ಆತಂಕ ಮರೆಯಾಯಿತು.ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾದರು.