ಸಾರಾಂಶ
ಫೆಂಗಲ್ ಚಂಡಮಾರುತದಿಂದಾಗಿ ಕೊಡಗು ಜಿಲ್ಲೆಯ ಕೃಷಿಗೆ ಸಮಸ್ಯೆಯಾಗಿದೆ. ಕಾಫಿ ಮತ್ತು ಬತ್ತದ ಕೃಷಿಗೆ ತೊಂದರೆಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಫೆಂಗಲ್ ಚಂಡಮಾರುತದಿಂದಾಗಿ ಕೊಡಗು ಜಿಲ್ಲೆಯ ಕೃಷಿಗೂ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಕಾಫಿ ಹಾಗೂ ಬತ್ತದ ಕೃಷಿಗೆ ಮಳೆಯಿಂದ ಅಡ್ಡಿಯುಂಟಾಗಿದೆ.ಜಿಲ್ಲೆಯಲ್ಲಿ ಈಗಾಗಲೇ ಕಾಫಿ ಹಣ್ಣಾಗುತ್ತಿದ್ದು, ಅರೇಬಿಕಾ ಕಾಫಿ ಕೊಯ್ಲು ಶುರುವಾಗಿದೆ. ಇದೀಗ ಕೊಯ್ಲಿನ ಅವಧಿಯಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಬೆಳೆಗಾರರು ಪರದಾಡುವಂತಾಗಿದೆ. ಈ ಬಾರಿ ಕಾಫಿಗೆ ಅಧಿಕ ಲಾಭ ಇದ್ದು, ಉತ್ತಮ ಆದಾಯ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಆದರೆ ಇದೀಗ ಮಳೆ ಅವರಲ್ಲಿ ಬೇಸರ ಮೂಡಿಸಿದೆ.
ಇದೀಗ ಸುರಿಯುತ್ತಿರುವ ಮಳೆಯಿಂದ ಕೊಯ್ಲಿಗೆ ಬಂದಿರುವ ಹಣ್ಣು ಉದುರಿ ಹೋಗುವ ಆತಂಕ ಉಂಟಾಗಿದೆ.ಮಳೆಯಿಂದ ಕೊಯ್ಲು ಮಾಡುವಂತಿಲ್ಲ, ಬಿಡುವಂತೆಯೂ ಇಲ್ಲ ಎಂಬಂತಾಗಿದೆ. ಕೊಯ್ಲು ಮಾಡಿದರೆ ಒಣಗಿಸುವುದು ಕಷ್ಟ
ಕೊಯ್ಲು ಮಾಡದಿದ್ದರೆ ಹಣ್ಣು ನೆಲಕ್ಕೆ ಉದುರಿ ಹಾಳಾಗುವ ಸಾಧ್ಯತೆ ಇರುವುದರಿಂದ ಏನು ಮಾಡಬೇಕೆಂಬ ಪರಿಸ್ಥಿತಿಯಲ್ಲಿದ್ದಾರೆ. ಕೊಯ್ಲು ಮಾಡಿದರೆ ಒಣಗದೆ ಬೂಸ್ಟ್ ಬಂದು ಕಾಫಿ ಕಪ್ಪಾಗುವ ಆತಂಕ ಕಪ್ಪಾದರೆ ಬೆಲೆ ಸಿಗುವುದಿಲ್ಲ ಎನ್ನುವ ಭಯ ಒಂದೆಡೆಯಾದರೆ ಮತ್ತೊಂದೆಡೆ ಕೊಯ್ಲು ಮಾಡಿ ಕಣದಲ್ಲಿ ಹಾಕಿರುವ ಕಾಫಿ ಒಣಗಿಸಲಾಗದೆ ಪರದಾಟ ನಡೆಸುವಂತಾಗಿದೆ. ಇದೀಗ ಕೊಯ್ಲು ಮಾಡಿರುವ ಕಾಫಿಗೆ ಕಣದಲ್ಲಿ ಟಾರ್ಪಲ್ ಹೊದಿಸಿದ್ದಾರೆ. ಹೆಚ್ಚು ಮಳೆ ಸುರಿದರೆ ನೀರಿಗೆ ಕೊಚ್ಚಿ ಹೋಗುವ ಪರಿಸ್ಥಿತಿ ಎದುರಾಗಿದ್ದು, ಕೊಡಗಿನ ಕಾಫಿ ಬೆಳೆಗಾರರು ಸಂದಿಗ್ಧ ಸಂಕಷ್ಟಕ್ಕೆ ಸಿಲುಕಿದ್ದಾರೆ.ಭತ್ತದ ಕೃಷಿಗೂ ಆತಂಕ: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಬತ್ತದ ಕಟಾವು ಕಾರ್ಯ ನಡೆಯುತ್ತಿದೆ. ಇದೀಗ ಸುರಿದ ಮಳೆ ಬತ್ತದ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಹೀಗೆ ಮಳೆಯಾದರೆ ಕಟಾವು ಮಾಡಿದ ಬತ್ತ ನೆಲಕಚ್ಚುವ ಭೀತಿ ಉಂಟಾಗಿದೆ.