ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಫೆಂಗಲ್ ಚಂಡಮಾರುತದ ಬಿಸಿ ಕರಾವಳಿಯ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ತಟ್ಟಿದ್ದು, ಸೋಮವಾರ ಸಂಜೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಿಡಿಲು- ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಮಳೆಯ ರಭಸಕ್ಕೆ ಮಂಗಳೂರು ನಗರದ ಅನೇಕ ಕಡೆ ಕೃತಕ ಪ್ರವಾಹದಿಂದ ತೀವ್ರ ಸಮಸ್ಯೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.ಡಿ.3ರಂದೂ ಭಾರೀ ಮಳೆಯಾಗುವ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಗನವಾಡಿಯಿಂದ ಪಿಯು ಕಾಲೇಜುವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಮೀನುಗಾರರು ಡಿ.6ರವರೆಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ದಿನವಿಡಿ ಮೋಡ:ಸೋಮವಾರ ಬೆಳಗ್ಗಿನಿಂದಲೇ ಭಾರೀ ಮೋಡ ಕವಿದ ವಾತಾವರಣ ಇದ್ದು, ಆಗಾಗ ವೇಗದ ಗಾಳಿ ಬೀಸುತ್ತಿತ್ತು. ಬಿಸಿಲು ಕಾಣಿಸಲಿಲ್ಲ. ಮಧ್ಯಾಹ್ನ ನಂತರ ಜಿಲ್ಲೆಯ ಅಲ್ಲಲ್ಲಿ ಮಳೆ ಆರಂಭವಾಗಿತ್ತು.
ಸಂಜೆ 5 ಗಂಟೆ ವೇಳೆಗೆ ಭಾರೀ ಮೋಡಗಳು ದಟ್ಟೈಸಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ.ಕೃತಕ ಪ್ರವಾಹ:
ಮಂಗಳೂರು ನಗರದಲ್ಲಿ ಮಳೆಯಾಗದೆ ಹಲವು ದಿನಗಳಾಗಿದ್ದು, ಸೋಮವಾರ ಸಂಜೆ ಸುರಿದ ಮಳೆ ಮಳೆಗಾಲದ ದಿನಗಳನ್ನು ನೆನಪಿಸುವಂತಿತ್ತು. ಧಾರಾಕಾರ ಸುರಿದ ಮಳೆಯಿಂದ ನಗರದ ತಗ್ಗು ಪ್ರದೇಶಗಳಲ್ಲಿ ಕೃತಕ ಪ್ರವಾಹ ಉಂಟಾಗಿ ಜನರಿಗೆ ತೊಂದರೆಯಾಯಿತು. ನಗರದ ಪಂಪ್‌ವೆಲ್, ಕೊಟ್ಟಾರ ಚೌಕಿ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭಾರೀ ನೀರು ಹರಿದು ವಾಹನ ಸಂಚಾರಕ್ಕೆ ಒಂದು ಗಂಟೆಗೂ ಅಧಿಕ ಕಾಲ ಸಮಸ್ಯೆಯಾಯಿತು. ಅದೇ ರೀತಿ ಕರಂಗಲ್ಪಾಡಿ, ಬಿಜೈ, ಕುದ್ರೋಳಿ ಭಾಗದಲ್ಲೂ ರಸ್ತೆ ಮೇಲೆ ಮಳೆ ನೀರು ಹರಿಯಿತು. ರಾತ್ರಿ ಸುಮಾರು 7 ಗಂಟೆ ವೇಳೆಗೆ ಮಳೆ ಇಳಿಮುಖವಾಗಿದ್ದು, ಪರಿಸ್ಥಿತಿ ಯಥಾಸ್ಥಿತಿಗೆ ಬಂದಿತು. ಅನೇಕ ಕಡೆಗಳಲ್ಲಿ ವಿದ್ಯುತ್ ಕೂಡ ಕೈಕೊಟ್ಟಿತ್ತು.ಫೆಂಗಲ್ ಚಂಡಮಾರುತ ದುರ್ಬಲಗೊಂಡಿದ್ದರೂ ಅದರ ಪ್ರಭಾವದಿಂದ ಕರಾವಳಿ ಭಾಗದಲ್ಲಿ ಡಿ.3ರಂದೂ ಉತ್ತಮ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಡಿ.5ರ ನಂತರ ಚಂಡಮಾರುತ ಪ್ರಭಾವ ಕಡಿಮೆಯಾಗುವ ಸಾಧ್ಯತೆಗಳಿವೆ.
ಸೋಮವಾರ ಜಿಲ್ಲೆಯಲ್ಲಿ ಗರಿಷ್ಠ 28.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ................ರಕ್ಷಣಾ ಕಾರ್ಯಾಚರಣೆಗೆ ಸ್ಪೀಕರ್ ಸೂಚನೆ
ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುಂಜಾಗ್ರತಾ ಕ್ರಮ ಹಾಗೂ ಅಗತ್ಯ ರಕ್ಷಣಾ ಕಾರ್ಯದ ಕುರಿತಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಎನ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ತಂಡಗಳನ್ನು ಸನ್ನದ್ಧಗೊಳಿಸಲು ಸೂಚನೆ ನೀಡಿದ್ದಾರೆ.ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಎಲ್ಲ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಂಪರ್ಕದಲ್ಲಿದ್ದುಕೊಂಡು ಸಹಕರಿಸುವಂತೆ ಸಭಾಧ್ಯಕ್ಷರು ಸೂಚನೆ ನೀಡಿದ್ದು, ಜನಸಾಮಾನ್ಯರೂ ಕೂಡ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ....................ಮುನ್ನೆಚ್ಚರಿಕೆಗೆ ಡಿಸಿ ಸೂಚನೆದ.ಕ. ಜಿಲ್ಲೆಯಲ್ಲಿ ಮಂಗಳವಾರ ಬಿರುಸಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಮಳೆಗಾಲದಲ್ಲಿ ಅನುಸರಿಸುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಎಲ್ಲಾ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಕ್ಷಣದಿಂದ ಕಾರ್ಯ ಪ್ರವೃತ್ತವಾಗಬೇಕು. ತಹಸೀಲ್ದಾರರು ಇದರ ಮೇಲ್ವಿಚಾರಣೆ ವಹಿಸಬೇಕು. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.