ಸಾರಾಂಶ
ಹೆಸರೂರು ಗ್ರಾಮದ ಜಂತ್ಲಿಯವರ ಹೊಲದಲ್ಲಿ ರೈತ ದಿನಾಚರಣೆ
ಮುಂಡರಗಿ: ನಿರಂತರವಾಗಿ ರಾಸಾಯನಿಕ ಗೊಬ್ಬರ ಹಾಕುತ್ತಾ, ಕ್ರಿಮಿನಾಶಕಗಳನ್ನು ಸಿಂಪರಣೆ ಮಾಡುತ್ತಾ ಬಂದಿದ್ದರಿಂದಾಗಿ ನಮ್ಮ ಭೂಮಿ ಫಲವತ್ತತೆಯನ್ನು ಕಳೆದುಕೊಂಡಿದ್ದು, ಭೂಮಿಗೆ ಸಾವಯವ ಪದಾರ್ಥಗಳನ್ನು ಹಾಕುವ ಮೂಲಕ ಭೂಮಿಯನ್ನು ಫಲವತ್ತತೆ ಮಾಡುವುದೇ ನಮ್ಮ ಮೂಲ ಉದ್ದೇಶವಾಗಬೇಕು ಎಂದು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಈಶ್ವರಪ್ಪ ಹಂಚಿನಾಳ ಹೇಳಿದರು.ಅವರು ಶನಿವಾರ ರೈತ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ತಾಲೂಕಿನ ಹೆಸರೂರ ಗ್ರಾಮದ ಗರಡಪ್ಪ ಜಂತ್ಲಿ ಅವರ ಜಮೀನಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಣ್ಣನ್ನು ಫಲವತ್ತತೆ ಮಾಡುವುದರಿಂದ ಸಸ್ಯಗಳು ತಮ್ಮ ಆಹಾರವನ್ನು ತಾವು ಉತ್ಪಾದನೆ ಮಾಡಿಕೊಳ್ಳುತ್ತವೆ. ಭೂಮಿಯಲ್ಲಿರುವ ಕೋಟ್ಯಾಂತರ ಜೀವಾಣುಗಳು ಇನ್ನಷ್ಟು ಅಭಿವೃದ್ಧಿ ಹೊಂದಬೇಕಾದರೆ ಭೂಮಿಗೆ ಸಗಣೆ ಗೊಬ್ಬರ ಹಾಕುವ ಬದಲು ಸಗಣೆ, ಬೆಲ್ಲ, ದ್ವಿದಳದಾನ್ಯಗಳ ಹಿಟ್ಟನ್ನು ಒಂದು ವಾರಗಳ ಕಾಲ ಒಂದು ಪ್ಲಾಸ್ಟಿಕ್ ಅಥವಾ ಸಿಮೆಂಟಿನ ಟ್ಯಾಂಕಿನಲ್ಲಿ ಹಾಕಿ ಶೇಖರಣೆ ಮಾಡಿ ಒಂದು ವಾರದ ನಂತರ ಅದನ್ನು ಭೂಮಿಗೆ ಪಂಪ್‌ಗಳ ಮೂಲಕ ಅಥವಾ ಸ್ಲ್ರಿಂಕ್ಲರ್ ಗಳ ಮೂಲಕವಾಗಲಿ ಸಿಂಪರಣೆ ಮಾಡಬೇಕು. ಇದೇ ರೀತಿ ಗೋಕೃಪಾಮೃತವನ್ನೂ ಸಹ ಬಳಸಬಹುದು. ಇದರಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ಜೀವಾಣಗಳಿರುವುದರಿಂದ ಅದನ್ನೂ ಸಹ ಸಿಂಪರಣೆ ಮಾಡಬಹುದು. ಇದರಿಂದ ಭೂಮಿಯಲ್ಲಿನ ಸೂಕ್ಷ್ಮಾಣುಗಳು ಹೆಚ್ಚುತ್ತವೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಿ ಚೌದರಿ ಚರಣಸಿಂಗ್ ಅವರ ಜನ್ಮದಿನಾಚರಣೆಯ ದಿನವನ್ನು ರೈತರ ದಿನ ಆಚರಿಸುತ್ತಾ ಬಂದಿದ್ದು, ರೈತರು ಸಾವಯವ ಗೊಬ್ಬರನ್ನು ಖರೀದಿಸುವ ಬದಲು ಮನೆಯಲ್ಲಿ ಹಸು, ಎತ್ತುಗಳನ್ನು ಕಟ್ಟುವ ಮೂಲಕ ತಾವೇ ಸ್ವತಃ ಗೊಬ್ಬರ ತಯಾರಿಸಿ ಬಳಕೆ ಮಾಡುವುದರಿಂದ ವ್ಯವಸಾಯದ ಖರ್ಚನ್ನು ಕಡಿಮೆಗೊಳಿಸುವುದರ ಜೊತೆಗೆ ನಮ್ಮ ಭೂಮಿಯ ಫಲವತ್ತತೆಯನ್ನೂ ಸಹ ಹೆಚ್ಚಿಸಿಕೊಳ್ಳಬಹು ಎಂದು ತಿಳಿಸಿ, ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ರೈತರಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸುರೇಶಗೌಡ ಪಾಟೀಲ, ಸುರೇಶ ಹಲವಾಗಲಿ, ವಿಠ್ಠಲ್ ಗಣಚಾರಿ, ಸಂದೀಪ ಕಟ್ಟಿ, ಈಶ್ವರ ಹಿರೇಮಠ, ಸುರೇಶ ಭಜಂತ್ರಿ ಮಾತನಾಡಿದರು. ಈ ಸಂದರ್ಭದಲ್ಲಿ ವೀರೇಶ ಶಾಸ್ತ್ರಿಮಠ, ಬನ್ನೆಪ್ಪ ಚೂರಿ, ನಾಗರಾಜ ಸಾಳುಂಕೆ, ಪರಮೇಶ ನಾಯಕ, ಬಾಳಮ್ಮ ಓಬಿನಾಯಕರ, ಚನ್ನಪ್ಪ ಹಳ್ಳಿ, ದ್ಯಾಮಣ್ಣ ವಾಲಿಕಾರ, ವೆಂಕಣ್ಣ ಜಂತ್ಲಿ, ಮುಂಡರಗಿ ರೈತ ಸಂಪರ್ಕ ಕೇಂದ್ರದ ವೀರೇಶ ಸೊಪ್ಪಿನ, ಎಸ್.ಎಸ್. ಮೂಡಲಗಿ, ಶಿವಮೂರ್ತಿ ನಾಯ್ಕ, ಗೌರಿಶಂಕರ ಸಜ್ಜನರ, ಪ್ರವೀಣ ಹಂಚಿನಾಳ, ಮಂಜುನಾಥ ತಂಟ್ರಿ, ವಿಜಯ್ ಅಬ್ಬಿಗೇರಿ, ವಿ.ಡಿ. ಪಾಟೀಲ, ವೀರಪ್ಪ ಜೆಲ್ಲಿಗೇರಿ, ಶರಣಪ್ಪ ಚನ್ನಳ್ಳಿ, ಗರಡಪ್ಪ ಓಬಿನಾಯಕರ, ನಿಂಗಪ್ಪ ಚೂರಿ, ಕೃಷ್ಣಾ ತಳವಾರ, ಪರಸಪ್ಪ ಓಬಿನಾಯ್ಕರ, ವೆಂಕಟೇಶ ಬಂಡೆಣ್ಣನವರ, ಶೇಕರಪ್ಪ ಪೂಜಾರ, ಚಂದ್ರಪ್ಪ ಕಕ್ಕೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗುಡದಪ್ಪ ಲಿಂಗಶೇಟ್ಟರ ಸ್ವಾಗತಿಸಿ, ನಿರೂಪಿಸಿದರು. ಗೌರಿಶಂಕರ ಸಜ್ಜನರ ವಂದಿಸಿದರು.