ಸಾರಾಂಶ
ಕನ್ನಡ ಪ್ರಭ ವಾರ್ತೆ ಹನೂರು
ಸಿರಗೂಡು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಯಲದಲ್ಲಿ ಶ್ರಾವಣ ಮಾಸದ ಮೊದಲ ಶನಿವಾರದ ಅಂಗವಾಗಿ ನಾನಾ ಉತ್ಸವಗಳು ಸೇರಿ ವಿಶೇಷ ಪೂಜೆ ನೆರವೇರಿತು. ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.ಶ್ರಾವಣ ಮಾಸದ ಮೊದಲ ಶನಿವಾರದ ನಿಮಿತ್ತ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಮುಂಜಾನೆ 4 ಘಂಟೆಗೆ ದೇವರಿಗೆ ಹಾಲು, ಮೊಸರು, ಜೇನುತುಪ್ಪ, ಎಳೆನೀರು, ಸಕ್ಕರೆ ಹಾಗೂ ನಾನಾ ಹಣ್ಣುಗಳಿಂದ ಅಭಿಷೇಕವನ್ನು ಆರ್ಚಕರಾದ ರಾಮಕೃಷ್ಣ ಹಾಗೂ ವಾಸು ಸಮ್ಮುಖದಲ್ಲಿ ಮೂರ್ತಿಯನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲ್ಲಿಸಲಾಯಿತು. ಅಲ್ಲದೆ ಉತ್ಸವಾದಿ ಸೇವೆಗಳು ಕೂಡ ದೇವಾಲಯದ ಸುತ್ತ ವಾದ್ಯಗಳ ಮೇಳೆ ಸಮೇತ ಸಾಂಪ್ರದಾಯಿಕವಾಗಿ ಜರುಗಿತು.ಬಳಿಕ ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.
ಬೂದಬಾಳು ಗ್ರಾಮದ ದೇಗುಲದಲ್ಲೂ ಪೂಜೆ:ಬೂದಬಾಳು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಗೆ ಬೆಳಗ್ಗೆ 5ಗಂಟೆಗೆ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ಚಿನ್ನದ ಕವಚದಿಂದ ಅಲಂಕರಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ ಬೆಳಗಿಸಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಸರಧಿ ಸಾಲಿನ ಮುಖೇನ ದೇವರ ದರ್ಶನ ಪಡೆದರು.ಕೊಳ್ಳೇಗಾಲ ಹನೂರು ಸೇರಿದಂತೆ ಉದ್ದನೂರು, ಬೆಳತ್ತೂರು,ಚಿಕ್ಕಮಾಲಾಪುರ, ಲೊಕ್ಕನಹಳ್ಳಿ,ಕಾಮಗೆರೆ ಸಿಂಗನಲ್ಲೂರು ಮಂಗಲ, ಆರ್.ಎಸ್ ದೊಡ್ಡಿ ಸೇರಿದಂತೆ ಇನ್ನಿತರೆ ಗ್ರಾಮದ ಭಕ್ತರು ಆಗಮಿಸಿದ್ದರು. ಬೆಣ್ಣೆ ಅಲಂಕಾರದಲ್ಲಿ ಕಂಗೊಳಿಸಿದ ಹನುಮ:
ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಮೊದಲ ವಾರದ ಪ್ರಯುಕ್ತ ಸ್ವಾಮಿಗೆ ವಿಶೇಷವಾಗಿ ಬೆಣ್ಣೆ ಅಲಂಕಾರವನ್ನು ಮಾಡಲಾಗಿತ್ತು ಜೊತೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ಸಂಭ್ರಮದಿಂದ ಜರುಗಿತು. ಇದೆ ವೇಳೆಯಲ್ಲಿ ನೆರವಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಸಹ ಹಮ್ಮಿಕೊಳ್ಳಲಾಗಿತ್ತು.