ವೀರಾಪುರ ಕಾಡುಗೊಲ್ಲರ ಹಟ್ಟಿಯಲ್ಲಿ ದೈವಗಳ ಉತ್ಸವ

| Published : Mar 10 2024, 01:31 AM IST

ಸಾರಾಂಶ

ಕುದೂರು: ಕಾಡುಗೊಲ್ಲತಿಯರು ಹುಟ್ಟು ಮತ್ತು ಮುಟ್ಟಿನ ಸಂದರ್ಭದಲ್ಲಿ ಊರ ಹೊರಗಿಡುವ ಪದ್ದತಿಯನ್ನು ಇನ್ನು ಮುಂದೆ ಕೈಬಿಡಬೇಕು. ಈಗಾಗಲೇ ಸಮುದಾಯದಲ್ಲಿ ಜಾಗೃತ ಭಾವ ಮೂಡಿದೆ ಎಂದು ನಿವೃತ್ತ ಶಿಕ್ಷಕ ದೊಡ್ಡಬಾಣಗೆರೆ ಮಾರಣ್ಣ ತಿಳಿಸಿದರು.

ಕುದೂರು: ಕಾಡುಗೊಲ್ಲತಿಯರು ಹುಟ್ಟು ಮತ್ತು ಮುಟ್ಟಿನ ಸಂದರ್ಭದಲ್ಲಿ ಊರ ಹೊರಗಿಡುವ ಪದ್ದತಿಯನ್ನು ಇನ್ನು ಮುಂದೆ ಕೈಬಿಡಬೇಕು. ಈಗಾಗಲೇ ಸಮುದಾಯದಲ್ಲಿ ಜಾಗೃತ ಭಾವ ಮೂಡಿದೆ ಎಂದು ನಿವೃತ್ತ ಶಿಕ್ಷಕ ದೊಡ್ಡಬಾಣಗೆರೆ ಮಾರಣ್ಣ ತಿಳಿಸಿದರು.

ಹೋಬಳಿಯ ವೀರಾಪುರ ಕಾಡುಗೊಲ್ಲರ ಹಟ್ಟಿ ಚಿತ್ರಲಿಂಗೇಶ್ವರಸ್ವಾಮಿ ಮತ್ತು ಕೆಂಪರಾಯಸ್ವಾಮಿ ಜಲಧಿ ಮಹೋತ್ಸವ ಹಾಗೂ ಹೊಳೆ ಉತ್ಸವಗಳಿಗೆ ಚಾಲನೆ ನೀಡಿ ಮಾತನಾಡಿದರು.

ಬುಡಕಟ್ಟು ಕಾಡುಗೊಲ್ಲತಿಯರನ್ನು ಹೆರಿಗೆ, ಋತುಮತಿಯಾದಾಗ ಮತ್ತು ಮುಟ್ಟಿನ ಸಮಯದಲ್ಲಿ ದೈವಗಳ ಭಯದಿಂದ ಅನಾದಿಕಾಲದಿಂದಲೂ ಹಟ್ಟಿಯಿಂದ ದೂರದಲ್ಲಿ ಗುಡಿಸಲು ಕಟದಟಿ ಇರಿಸುವ ಪದ್ದತಿ ಇತ್ತು. ಇದರಿಂದಾಗಿ ಅವರ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮಗಳು ಆಗಿದ್ದವು. ಹೆರಿಗೆಯಾದ ನಂತರ ಮಗುವಿಗೆ ಸರಿಯಾದ ರೀತಿಯಲ್ಲಿ ಆರೈಕೆ ಸಿಗದ ಕಾರಣ ಮೃತಪಟ್ಟ ಉದಾಹರಣೆಗಳಿದ್ದಾವೆ. ಇದರಿಂದ ಇಂತಹ ಪದ್ದತಿಗೆ ತಿಲಾಂಜಲಿ ನೀಡುವ ಕೆಲಸವಾಗಬೇಕು ಎಂದು ಹೇಳಿದರು.

ಶಾಲಾ ಬಾಲಕಿಯರು ತಮ್ಮ ಪ್ರತಿತಿಂಗಳು ಆಗುವ ಮುಟ್ಟಿನ ಸಂದರ್ಭದಲ್ಲಿ ಏಳು ದಿನಗಳ ಕಾಲ ಶಾಲೆಗೆ ಹೋಗುವಂತಿರಲಿಲ್ಲ. ಇದರಿಂದ ಅವರ ವಿದ್ಯಾಭ್ಯಾಸ ವಂಚನೆಯಾಗುತ್ತಿತ್ತು. ಈ ರೀತಿಯ ಸಂಪ್ರದಾಯಗಳು ಇತರೆ ಯಾವುದೇ ಸಮುದಾಯಗಳಲ್ಲಿ ಇಲ್ಲದೇ ಇರುವುದನ್ನು ಗಮನಿಸಬೇಕು ಎಂದು ತಿಳಿಸಿದರು.

ಇನ್ನು ಮುಂದೆ ಮೌಢ್ಯತೆ ಮುಂದುವರೆಸಲ್ಲ :

ಇನ್ನು ಮುಂದೆ ನಮ್ಮ ಹಟ್ಟಿಯ ಮಹಿಳೆಯರೆಲ್ಲರೂ ಸೇರಿ ನಮ್ಮ ಕುಲದೈವಗಳಲ್ಲಿ ಹರಕೆ ಸಲ್ಲಿಸಿದ್ದೇವೆ. ದೈವಗಳ ಅಪ್ಪಣೆಯಂತೆ ಮರಳುಹುಲಿಕೆರೆ ಮತ್ತು ಶಿವಗಂಗೆ ತಪ್ಪಲಿನ ದೇವರ ಕೆರೆಗಳಲ್ಲಿ ಪ್ರತಿವರ್ಷವೂ ಶಿವರಾತ್ರಿಗೆ ಮುನ್ನಾದಿನ ಹೊಳೆ ಉತ್ಸವ ನಡೆಸುತ್ತೇವೆ. ಇನ್ನು ಮುಂದೆ ಕಾಡುಗೊಲ್ಲತಿಯರು ಹೆರಿಗೆ ಮುಟ್ಟಿನ ಸಂದರ್ಭದಲ್ಲಿ ಹಟ್ಟಿಯಿಂದ ಹೊರಗೆ ಹೋಗುವುದನ್ನು ನಿಲ್ಲಿಸಿದ್ದೇವೆ ಎಂದರು.

ಬಾಣವಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಗಂಗಮ್ಮಮಾತನಾಡಿ, ಕಾಡುಗೊಲ್ಲತಿಯರಲ್ಲಿ ಅಪಾರವಾದ ಜನಪದ ಕಥನಕಾವ್ಯಗಳ ಪದಗಳನ್ನು ಹೇಳುವ ಪರಂಪರೆ ಇದೆ. ಅನಕ್ಷರಸ್ಥರಾದ ಕಾರಣ ಮಹಿಳೆಯರ ಮೇಲೆ ಹಿಡಿತ ಸಾಧಿಸಲು ಶೀಲ ಮತ್ತು ಶೌಚ ಹಾಗೂ ದೈವಗಳ ಹೆಸರಿನಲ್ಲಿ ಯಾವುದೇ ರೀತಿಯ ಮೌಢ್ಯತೆಗಳನ್ನು ಬಲವಂತವಾಗಿ ಹೇರಿಕೊಂಡು ಇದುವರೆಗೂ ಬಂದಿದ್ದರು. ಇನ್ನು ಮುಂದೆ ಅಂತಹ ಮೌಢ್ಯತೆಗಳಿಗೆ ಅಂತಿಮ ಹಾದಿ ತೋರಿಸಬೇಕು ಎಂದು ಹೇಳಿದರು.

ಜನಪದ ಕಲಾವಿದರಾದ ಬೈಲಮ್ಮ, ಕೆಂಪಮ್ಮ, ರಾಜಮ್ಮ, ಗೌರಮ್ಮ, ತಂಡದವರು ಕಾಡುಗೊಲ್ಲರ ಸಾಂಸ್ಕೃತಿಕ ವೀರಗಾರರಾದ ಚಿತ್ರಯ್ಯ ಮತ್ತು ಜುಂಜಪ್ಪ ಕರಡಿಬುಳ್ಳಪ್ಪ, ಕೆಂಪರಾಯಸ್ವಾಮಿ ಕಥನ ಕಾವ್ಯದ ಸೊಲ್ಲುಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಗೊಲ್ಲಗೌಡ ಚಿತ್ತಯ್ಯ, ಬೈಲಪ್ಪ, ಗಂಗಯ್ಯ, ನಾಗರಾಜು, ರಂಗಸ್ವಾಮಯ್ಯ, ಪಟ್ಟದ ಪೂಜಾರಿಗಳಾದ ಚಿತ್ತಯ್ಯ, ಚಂದ್ರಶೇಖರ್, ಗೋಪಾಲಯ್ಯ, ಶಿವಣ್ಣ, ಚಂದ್ರಣ್ಣ, ಕಾಡುಗೊಲ್ಲ ಸಮುದಾಯದ ಮುಖಂಡ ನರಸಿಂಹಮೂರ್ತಿ, ರಾಜು, ಹರೀಶ್, ಶಿವಣ್ಣ, ನಾಗರಾಜು ಮುದಿಯಪ್ಪ, ದೀಪಕ, ನೇತ್ರಾವತಿ, ಗಂಗಣ್ಣ, ಬೈಲಮ್ಮ, ಕೆಂಪಯ್ಯ ಮತ್ತಿರರರು ಹಾಜರಿದ್ದರು.

9ಕೆಆರ್ ಎಂಎನ್ 2.ಜೆಪಿಜಿ

ವೀರಾಪುರ ಕಾಡುಗೊಲ್ಲರ ಹಟ್ಟಿ ಉಡುಕುಂಟೆ ಗೊಲ್ಲರಹಟ್ಟಿಗಳಿಂದ ಚಿತ್ತಯ್ಯ, ಚಿತ್ರಲಿಂಗೇಶ್ವರಸ್ವಾಮಿ ಕೆಂಪರಾಯಸ್ವಾಮಿ ದೈವಗಳ ಉತ್ಸವ ನಡೆಯಿತು.