ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಿ. ನಾಯಕ ಸಲ್ಲಿಸಿದ್ದ ದೂರು ಹಾಗೂ ಮನವಿಯನ್ನು ಪರಿಗಣಿಸಿ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.

ಕಾರವಾರ: ಅಂಕೋಲಾ ಮೂಲದ 27 ವರ್ಷದ ಗರ್ಭಿಣಿ ಅನಿತಾ ಅವರ ಗರ್ಭದಲ್ಲಿದ್ದ ಭ್ರೂಣದ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ನಿರ್ಲಕ್ಷ್ಯ ಅಥವಾ ಕರ್ತವ್ಯಲೋಪವಾಗಿದೆಯೇ ಎಂಬ ಕುರಿತು ತನಿಖೆ ನಡೆಸುವಂತೆ ಬುಧವಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಆರೋಗ್ಯಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ಬಿ. ನಾಯಕ ಸಲ್ಲಿಸಿದ್ದ ದೂರು ಹಾಗೂ ಮನವಿಯನ್ನು ಪರಿಗಣಿಸಿ ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.

ಅನಿತಾ ಅವರು ಮೊದಲ ಗರ್ಭಾವಸ್ಥೆಯಲ್ಲಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ ಗರ್ಭದ ವಿವಿಧ ಹಂತಗಳಲ್ಲಿ ಭ್ರೂಣದ ಹೃದಯ ಬಡಿತ, ಚಲನವಲನ, ಬೆಳವಣಿಗೆ ಹಾಗೂ ಅಗತ್ಯ ಸ್ಕ್ಯಾನಿಂಗ್‌ಗಳನ್ನು ಸಮರ್ಪಕವಾಗಿ ನಡೆಸಲಾಗಿಲ್ಲ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ಭ್ರೂಣದ ಆರೋಗ್ಯದ ಬಗ್ಗೆ ಆತಂಕಗೊಂಡ ಅನಿತಾ ಅವರನ್ನು ಖಾಸಗಿ ಸ್ಕ್ಯಾನಿಂಗ್ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಭ್ರೂಣದ ಹೃದಯ ಚಟುವಟಿಕೆ ಇಲ್ಲದಿರುವುದು ಹಾಗೂ ಭ್ರೂಣದ ಮರಣ ಸಂಭವಿಸಿರುವುದು ಪತ್ತೆಯಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಹಿಂದಿನ ಆಸ್ಪತ್ರೆ ಭೇಟಿಯ ವೇಳೆ ಭ್ರೂಣದ ಹೃದಯ ಬಡಿತ ಸೇರಿದಂತೆ ಸೂಕ್ತ ತಪಾಸಣೆ ನಡೆಸದೆ ‘ಮಗು ಚೆನ್ನಾಗಿದೆ’ ಎಂದು ತಿಳಿಸಿ ಒಂದು ವಾರದ ಬಳಿಕ ಬರುವಂತೆ ಸೂಚಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಭ್ರೂಣದ ಮರಣವನ್ನು ಮುಂಚಿತವಾಗಿ ಪತ್ತೆಹಚ್ಚುವ ಅವಕಾಶವಿತ್ತೇ, ಅಗತ್ಯ ಚಿಕಿತ್ಸೆ ವಿಳಂಬವಾಗಿದೆಯೇ ಎಂಬುದನ್ನು ತನಿಖೆಯಲ್ಲಿ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.ಸದ್ಯ ಅನಿತಾ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಗರ್ಭದಲ್ಲಿರುವ ಮೃತ ಭ್ರೂಣವನ್ನು ವೈದ್ಯಕೀಯ ವಿಧಾನದ ಮೂಲಕ ಹೊರತೆಗೆದುಹಾಕುವ ಚಿಕಿತ್ಸೆಗೆ ಒಳಗಾಗಿದ್ದಾರೆ. ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ಸರ್ಕಾರಿ ಆಸ್ಪತ್ರೆಯೊಂದಿಗೆ ನೇರ ಸಂಬಂಧವಿಲ್ಲದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ವಿಕಿರಣ ತಜ್ಞರು ಸೇರಿದಂತೆ ಅಗತ್ಯ ತಜ್ಞರನ್ನು ಒಳಗೊಂಡ ವೈದ್ಯಕೀಯ ತನಿಖಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.