ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಕಾಂಗ್ರೆಸ್ ಸರ್ಕಾರ ಚಾಮರಾಜನಗರ ವಿಶ್ವವಿದ್ಯಾಲಯ ಸೇರಿದಂತೆ 7 ವಿಶ್ವವಿದ್ಯಾನಿಲಯಗಳನ್ನು ಆರ್ಥಿಕ ನಷ್ಟ ಕಾರಣ ನೀಡಿ, ಮುಚ್ಚಲು ಮುಂದಾದರೆ ವಿದ್ಯಾರ್ಥಿಗಳೊಂದಿಗೆ ಬಿಜೆಪಿ ಪಕ್ಷದಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ವಿವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶೈಕ್ಷಣಿಕ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಬಡವರ ಮಕ್ಕಳಿಗೂ ಜಿಲ್ಲೆಯಲ್ಲೇ ಉನ್ನತ ಶಿಕ್ಷಣ ಪಡೆಯಲಿ ಎಂಬ ಕಾರಣಕ್ಕೆ ಏಳು ಹೊಸ ವಿಶ್ವ ವಿದ್ಯಾನಿಲಯಗಳನ್ನು ಘೋಷಣೆ ಮಾಡಿ, ಆರಂಭದಲ್ಲಿ ಒಂದಿಷ್ಟು ಅನುದಾನವನ್ನು ನೀಡಿತ್ತು. ಆದರೆ, ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಿಜೆಪಿ ಸರ್ಕಾರ ಘೋಷಿಸಿದ್ದು ಎಂಬ ಮನಸ್ಥಿತಿ ಇರುವುದರಿಂದ ಮುಂದುವರಿಸದಿರಲು ಕಾಂಗ್ರೆಸ್ ಸರ್ಕಾರ ವಿಶ್ವ ವಿದ್ಯಾನಿಲಯಗಳ ನಿರ್ವಹಣೆಗೆ ಕೋಟ್ಯತರ ರು. ಅನುದಾನ ಬೇಕು ಎಂಬ ಅಂಶವನ್ನು ಮುಂದಿಟ್ಟಿಕೊಂಡು ವಿಶ್ವವಿದ್ಯಾನಿಲಯವನ್ನು ಮುಚ್ಚಲು ಮುಂದಾಗಿದೆ ಇದೊಂದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದರು.
ರಾಜ್ಯ ಸರ್ಕಾರದ ಆರ್ಥಿಕ ಸಮಿತಿಯಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಮ್ಮ ನಿಲುವು ಬದಲಾಯಿಸಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಆ ಪ್ರದೇಶದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಶಿಕ್ಷಣ ಕ್ಷೇತ್ರಗಳು ಸೇವೆ ವಲಯಗಳಾಗಿದೆ. ಲಾಭದಾಯಕ ವಲಯ ಅಲ್ಲ, ಉದ್ಯಮಿ ವಲಯ ಅಲ್ಲ, ಹಣಕಾಸಿನ ಹೊರೆಯಾಗುತ್ತದೆ ಎಂದು ಶಿಕ್ಷಣ ವಿರೋಧಿ ಧೋರಣೆ ಮಾಡುವುದನ್ನು ಬಿಜೆಪಿ ಖಂಡಿಸುತ್ತದೆ ಎಂದರು.ವಿವಿ ಸ್ಥಾಪನೆಗೆ ಯುಜಿಸಿ ಆ್ಯಕ್ಟ್ ಪ್ರಕಾರ 25 ಎಕರೆ ಇದ್ದರೆ ಸಾಕು. ಆದರೆ ಜಿಲ್ಲೆಯಲ್ಲಿರುವ ವಿವಿಗೆ 54 ಎಕರೆ ಪ್ರದೇಶವಿದ್ದು, ವರ್ಷಕ್ಕೆ 10ರಿಂದ 15 ಕೋಟಿ ರು. ಅಗತ್ಯವಿದೆ. ಯುಜಿಸಿ ಅನುಮೋದನೆ ದೊರಕಿದ್ದು ಸಿಂಡಿಕೇಟ್‌ಗೆ ಸೇರಿದೆ. ಸರ್ಕಾರ ಚಾಮರಾಜನಗರ ವಿವಿಯನ್ನು ಮುಚ್ಚದೇ ಮುಂದುವರಿಸಬೇಕು ಎಂದರು.
ವಿವಿ ಮುಚ್ಚಿದರೆ ಜಿಲ್ಲೆಯ ವಿದ್ಯಾರ್ಥಿಗಳು ದೂರದ ಮೈಸೂರು ಹಾಗೂ ಇತರೇ ವಿಶ್ವವಿದ್ಯಾಲಯಗಳನ್ನು ಆಶ್ರಯಿಸಬೇಕಾಗುತ್ತದೆ. ಇದರಿಂದ ಜಿಲ್ಲೆಯ ಶಿಕ್ಷಣ ಮಟ್ಟ ಕುಸಿಯುತ್ತದೆ. ಮಾಹಿತಿ ಪ್ರಕಾರ ಚಾಮರಾಜನಗರ ವಿಶ್ವ ವಿದ್ಯಾಲಯ ಆರಂಭವಾದ ಬಳಿಕ ಜಿಲ್ಲೆಯ ವ್ಯಾಪ್ತಿಯಲ್ಲಿ 7676 ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. 746 ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದು, 640 ಮಂದಿ ಮಹಿಳೆಯರೆ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಜಿಲ್ಲೆಯ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸುವ ಸಚಿವ ಸಂಪುಟ ಸಭೆಯಲ್ಲಿ ವಿಶ್ವವಿದ್ಯಾಲಯವನ್ನು ಮುಚ್ಚದಿರಲು ಕ್ರಮವಹಿಸಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳ ಜೊತೆಗೂಡಿ ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ ಮಾಡುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಮಾಧ್ಯಮ ಸಹ ಕಾರ್ಯದರ್ಶಿ ರಾಮಸಮುದ್ರ ಶಿವಣ್ಣ ಇದ್ದರು.