ವಿಹಿಂಪ ಜಿಲ್ಲಾ ಕಾರ್ಯಾಲಯ ಭೂಮಿ ಪೂಜೆಗೆ ಅರುಣ್‌ ಪುತ್ತಿಲಗೆ ತಡೆ

| Published : Oct 24 2024, 12:31 AM IST

ವಿಹಿಂಪ ಜಿಲ್ಲಾ ಕಾರ್ಯಾಲಯ ಭೂಮಿ ಪೂಜೆಗೆ ಅರುಣ್‌ ಪುತ್ತಿಲಗೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತಿಲ ಪರಿವಾರ ಮತ್ತು ಸಂಘ ಪರಿವಾರದ ಕಾರ್ಯಕರ್ತರ ನಡುವೆ ಹ್ಯೊಕೈ ನಡೆದು ಅವ್ಯಾಚ್ಚ ಶಬ್ದಗಳೊಂದಿಗೆ ಪರಸ್ಪರ ನಿಂದಿಸಿ ಹೊಡೆದಾಟವೂ ನಡೆಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ವಿಶ್ವ ಹಿಂದೂ ಪರಿಷತ್ ವತಿಯಿಂದ ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಟ್ಟಡದ ಭೂಮಿ ಪೂಜೆಯ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗಮಿಸದಂತೆ ತಡೆ ಒಡ್ಡಿದ ಘಟನೆ ನಡೆದಿದ್ದು, ಈ ಸಂದರ್ಭದಲ್ಲಿ ಸಂಘ ಪರಿವಾರ ಮತ್ತು ಪುತ್ತಿಲ ಪರಿವಾರದ ನಡುವೆ ವಾಗ್ವಾದ, ಹೊಯ್ ಕೈ, ನಿಂದನೆಗಳು ನಡೆಯಿತು.ಭೂಮಿಪೂಜೆ ಕಾರ್ಯಕ್ರಮಕ್ಕೆ ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ತಂಡ ಆಗಮಿಸದ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರ ತಂಡವೊಂದು ಅವರನ್ನು ಕಾರಿನಿಂದ ಇಳಿಯದಂತೆ ತಡೆಯಿತು. ಈ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮುಕಿ ನಡೆದು ಪರಸ್ಪರ ಬೈದಾಟ, ತಳ್ಳಾಟವೂ ನಡೆಯಿತು. ಆಗ ಮದ್ಯೆ ಪ್ರವೇಶಿಸಿದ ಪೊಲೀಸರು ಮತ್ತು ಸಂಘ ಪರಿವಾರದ ಹಿರಿಯರು ಎಲ್ಲರನ್ನೂ ಸಮಾಧಾನ ಪಡಿಸಿ ಕಾರ್ಯಕ್ರಮದ ವೇದಿಕೆಯತ್ತ ಪುತ್ತಿಲ ಅವರನ್ನು ಕರೆದೊಯ್ದರು. ಬಳಿಕ ಕಾರ್ಯಕ್ರಮ ಮುಂದುವರಿಯಿತು. ಕಾರ್ಯಕ್ರಮದ ಅರ್ಧದಲ್ಲೇ ಅರುಣ್‌ ಕುಮಾರ್ ಪುತ್ತಿಲ ಹಾಗೂ ತಂಡ ಎದ್ದು ವಾಪಸ್‌ ಹೊರಟಾಗ ಮತ್ತೆ ಜಗಳ ಮುಂದುವರಿಯಿತು. ಪುತ್ತಿಲ ಪರಿವಾರ ಮತ್ತು ಸಂಘ ಪರಿವಾರದ ಕಾರ್ಯಕರ್ತರ ನಡುವೆ ಹ್ಯೊಕೈ ನಡೆದು ಅವ್ಯಾಚ್ಚ ಶಬ್ದಗಳೊಂದಿಗೆ ಪರಸ್ಪರ ನಿಂದಿಸಿ ಹೊಡೆದಾಟವೂ ನಡೆಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ತಣ್ಣಗಾಗದ ಪರಿವಾರದ ಮೇಲಿನ ಸಿಟ್ಟು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಅವರು ಸ್ಪರ್ಧಿಸಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾದ ಪುತ್ತಿಲ ಪರಿವಾರದ ವಿರುದ್ಧ ಸಂಘಪರಿವಾರದ ಕಾರ್ಯಕರ್ತರ ಕೋಪ ತಣ್ಣಗಾಗಿಲ್ಲ. ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಯಾದರೂ ವಸ್ತುಸ್ಥಿತಿ ಬದಲಾಗಿಲ್ಲ. ಈ ನಡುವೆ ಪುತ್ತಿಲ ವಿಶ್ವಹಿಂದೂ ಪರಿಷತ್ ಮುಖಂಡರ ಬಗ್ಗೆ ಚುನಾವಣೆಯ ಸಂದರ್ಭ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಿದ್ದಾರೆ ಎನ್ನುವ ಸುದ್ದಿಯೊಂದನ್ನೂ ಹರಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಅವರನ್ನು ತಡೆಯಲು ಮುಖಂಡರ ಬಗ್ಗೆ ಪುತ್ತಿಲ ಆಡಿರುವ ಮಾತುಗಳೇ ಕಾರಣ ಎನ್ನಲಾಗುತ್ತಿದೆ. ಆದರೆ ಈ ಕಾರ್ಯಕ್ರಮಕ್ಕೆ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹಿರಿಯ ವಿಎಚ್‌ಪಿ ಮುಖಂಡರಾದ ಯು. ಪೂವಪ್ಪ ಅವರೇ ಅರುಣ್ ಪುತ್ತಿಲ ಅವರಿಗೆ ಆಹ್ವಾನ ನೀಡಿದ್ದರು. ಪುತ್ತಿಲ ಪರಿವಾರವನ್ನು ಬರದಂತೆ ತಡೆದ ವಿಚಾರದ ಬಗ್ಗೆ ಪೂವಪ್ಪ ತಮ್ಮ ಪ್ರಾಸ್ತಾವಿಕ ಮಾತುಗಳ ಸಂದರ್ಭ ಅಸಮಾಧಾನವನ್ನೂ ವ್ಯಕ್ತಪಡಿಸಿದರು.