ಸಾರಾಂಶ
ನರೇಗಲ್ಲ: ರಸ್ತೆ ಮೇಲೆ ರಾಶಿ ಮಾಡಲು ಹಾಕಿದ್ದ ಹೆಸರು ತೆಗೆಯುವ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಕೊಲೆಗೈದ ಘಟನೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಬಸಪ್ಪ ಮುಕ್ಕಣ್ಣವರ (55) ಕೊಲೆಯಾದ ವ್ಯಕ್ತಿ.ಬಸಪ್ಪ ತನ್ನ ಮನೆಯ ಮುಂದಿನ ರಸ್ತೆಯಲ್ಲಿ ರಾಶಿ ಮಾಡಲು ಹೆಸರಿನ ಬುಡ್ಡಿ ಹಾಕಿದ್ದರು. ಅದೇ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ಯಲ್ಲಪ್ಪ ಫಕೀರಪ್ಪ ಕುರಿ ಎಂಬಾತ ಹೆಸರು ತೆಗೆದು ಕಾರು ಹೋಗಲು ಅನುವು ಮಾಡಿಕೊಡಿ ಎಂದು ಒತ್ತಾಯಿಸಿದ್ದರು. ಹೆಸರು ರಾಶಿ ತೆಗೆಯುವ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಆಗ ಯಲ್ಲಪ್ಪ ಕಬ್ಬಿಣದ ರಾಡಿನಿಂದ ಬಸಪ್ಪನ ತಲೆಗೆ ಹಾಗೂ ಆತನ ಪತ್ನಿ ಹನುಮವ್ವಳ ಕಾಲಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಬಸಪ್ಪನಿಗೆ ಜಿಲ್ಲಾಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದ್ದು, ಈ ಪೈಕಿ ಮೂವರನ್ನು ಬಂಧಿಸಲಾಗಿದೆ.
ನರೇಗಲ್ಲ ಪಿಎಸ್ಐ ಐಶ್ವರ್ಯ ನಾಗರಾಳ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಎಸ್ಪಿ ಬಿ.ಎಸ್. ನೇಮಗೌಡ, ಡಿವೈಎಸ್ಪಿ ಪ್ರಭುಗೌಡ, ರೋಣ ಸಿಪಿಐ ಎಸ್.ಎಸ್. ಬೀಳಗಿ ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.