ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಭೂಮಿ ಕಬಳಿಸಲು ರೈತರಿಗೆ ಲಾಠಿ, ಗನ್ ತೋರಿಸಿ ರಕ್ತಪಾತಕ್ಕೆ ಕಾರಣರಾದರೆ ಸುಮ್ಮನೆ ಇರುವುದಿಲ್ಲ. ರೈತರು ತಾಳ್ಮೆ ಕಳೆದುಕೊಂಡು ಬೀದಿಗಿಳಿದರೆ ಯಾವೊಬ್ಬ ಅಧಿಕಾರಿಗೂ ಊರಿನೊಳಗೆ ಕಾಲಿಡಲು ಅವಕಾಶ ನೀಡಲ್ಲ. ಮುಖ್ಯಮಂತ್ರಿ ಹಾಗೂ ವಿಧಾನಸೌಧಕ್ಕೆ ರೈತರ ಕೂಗು ತಲುಪುವವರೆಗೂ ಹೋರಾಟ ನಡೆಸುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.ಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಿಮ್ಮಗಳ ಗೊಡ್ಡು ಬೆದರಿಕೆ, ತೋಳ್ಬಲ, ದರ್ಪ ದೌರ್ಜನ್ಯಕ್ಕೆ ನಾವ್ಯಾರು ಹೆದರುವುದಿಲ್ಲ. ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು.ಸರ್ಕಾರದ ಪ್ರತಿನಿಧಿಯಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸ್ಥಳೀಯ ಶಾಸಕ ಬಾಲಕೃಷ್ಣ ಹಾಗೂ ಜಿಲ್ಲಾಧಿಕಾರಿಗಳು ಭೂ ಮಾಲೀಕರಾದ ರೈತರ ಒಂದೇ ಒಂದು ಸಭೆ ನಡೆಸಿಲ್ಲ. ಈಗ ಒಳ್ಳೆಯ ದರ ಕೊಡುತ್ತೇವೆಂದು ಬಂದಿದ್ದಾರೆ. ನಿಮಗೆ ರೈತರ ಶಾಪ ತಟ್ಟಲಿದೆ:ಉಪಮುಖ್ಯಮಂತ್ರಿಗಳು, ಶಾಸಕರು ಮತ್ತು ಅಧಿಕಾರಿಗಳು ಸುಮಾರು 200 ರಿಂದ 300 ಎಕರೆ ಬೇನಾಮಿ ಆಸ್ತಿ ಮಾಡಿದ್ದಾರೆ. ಕನಕಪುರ, ಮಾಗಡಿ, ಚನ್ನಪಟ್ಟಣ ಹಾಗೂ ಬ್ಯಾಟರಾಯನಪುರದಲ್ಲಿ ಜಮೀನು ನೋಂದಣಿ ಮಾಡಿಸಿದ್ದಾರೆ. ಸೂಕ್ತ ಕಾಲದಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.ಡಿ.ಕೆ. ಶಿವಕುಮಾರ್ ಅವರು ಹೋರಾಟ ಮಾಡುತ್ತಿರುವ ರೈತರನ್ನು ನಕಲಿ, ದಲ್ಲಾಳಿಗಳೆಂದು ಹೀಯಾಳಿಸಿದ್ದಾರೆ. ನಿಮಗೆ ರೈತರ ಅಹವಾಲ ಆಲಿಸಲಾಗದಿದ್ದರೆ ಅಧಿಕಾರದಲ್ಲಿ ಮುಂದುವರೆಯುವ ಯೋಗ್ಯತೆ ಇದೆಯಾ. ನಿಮಗೆ ಅಧಿಕಾರವಿರುವ ಕಾರಣ ಅಧಿಕಾರಿಗಳು ನೀವು ಹೇಳಿದಂತೆ ಕುಣಿಯುತ್ತಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ರೈತರ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ. ಯಾವ ಅಧಿಕಾರಿಗಳು ರೈತರಿಗೆ ತೊಂದರೆ ಕೊಡುತ್ತಿದ್ದಾರೊ ಅವರನ್ನು ಗುರುತಿಸಿ ನಾವು ಕಾಟ ಕೊಡುತ್ತೇವೆ. ಆ ಕಾಲ ದೂರ ಉಳಿದಿಲ್ಲ ಎಂದು ತಿಳಿಸಿದರು.ಈ ಯೋಜನೆ ಕುರಿತು ಕುಮಾರಸ್ವಾಮಿ ಮತ್ತು ಯಡಿಯೂರಪ್ಪರವರು ಒಂದೇ ಒಂದು ನೋಟಿಫಿಕೇಷನ್ ಹೊರಡಿಸಿರುವುದನ್ನು ತೋರಿಸಿದರೆ ನಾನೇ ರೈತರ ಕೈ ಕಾಲು ಹಿಡಿದು ಯೋಜನೆಗೆ ಒಪ್ಪಿಗೆ ಕೊಡಿಸುತ್ತೇನೆ. ಶೇ. 80ರಷ್ಟು ರೈತರು ಯೋಜನೆಗೆ ಒಪ್ಪಿಗೆ ನೀಡಿದ್ದಾರೆಂದು ಹೇಳುತ್ತಿದ್ದಾರೆ. ಬಾಲಕೃಷ್ಣ ಅವರಿಗೆ ತಾಖತ್ ಇದ್ದರೆ ರೈತರ ಬಳಿ ಮಾತನಾಡಲಿ ಎಂದು ಮಂಜುನಾಥ್ ಸವಾಲು ಹಾಕಿದರು.ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಬಾಲಕೃಷ್ಣ ಅವರ ಅಪ್ಪಂದಿರು ರೈತರೇ ಆಗಿದ್ದವರು. ಅವರಿಗೆಲ್ಲ ರೈತರ ಭೂಮಿ ಕಸಿಯಲು ಯಾವ ಅಧಿಕಾರವಿದೆ. ಬಾಲಕೃಷ್ಣರವರೇ ಡಿ.ಕೆ.ಶಿವಕುಮಾರ್ ಅವರಿಗೆ ನಿಮ್ಮಪ್ಪ ರೈತ ಅಂತ ನೆನೆಪಿಸಿ ಭೂ ಸ್ವಾಧೀನ ಮಾಡದಂತೆ ತಿಳಿ ಹೇಳಿ ಎಂದರು....ಕೋಟ್ ...ಡಿಸಿಎಂ ಡಿ.ಕೆ.ಶಿವಕುಮಾರ್ ರವರ ದರ್ಪ, ಅವರ ಹಾವ ಭಾವ ನೋಡಿದರೆ ಯಾರು ಏನನ್ನು ಮಾಡುವುದಿಲ್ಲ ಎಂಬ ಭ್ರಮೆಯಲ್ಲಿ ಇದ್ದಾರೆ. ರೈತರು ಮನಸ್ಸು ಮಾಡಿದರೆ ಮನೆಗೆ ಕಳುಹಿಸುತ್ತಾರೆ. ಎಲ್ಲಿ ಜಮೀನು ಸಿಗುತ್ತದೆಯೇ ಅದನ್ನು ಕಬಳಿಸಿ ರಿಯಲ್ ಎಸ್ಟೇಟ್ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.- ಸುರೇಶ್ ಬಾಬು, ಜೆಡಿಎಸ್ ನಾಯಕ....ಕೋಟ್ ...
ಬಿಜೆಪಿ ಸರ್ಕಾರದಲ್ಲಿ ಸರ್ಕಾರಿ ಕಚೇರಿಗಳ ಗೋಡೆಗಳು ದುಡ್ಡು ಅನ್ನುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೀಗ ಗ್ರಾಮ ಪಂಚಾಯಿತಿ ಕಚೇರಿ ಎದುರು ನಡೆದು ಹೋದರೆ ಸಾಕು ದುಡ್ಡು ದುಡ್ಡು ಅಂತ ಕೇಳಿಸುತ್ತದೆ. ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ನಾಯಕರಿಗೆ ರೈತರ ಪರವಾಗಿ ಕಾಳಜಿ ಇದ್ದರೆ ಕೂಡಲೇ ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಡಲಿ.- ರಮೇಶ್ ಗೌಡ, ಅಧ್ಯಕ್ಷರು, ಜೆಡಿಎಸ್ ಬೆಂಗಳೂರು ನಗರ ಘಟಕ....ಕೋಟ್ ....ಬಿಡದಿ ಟೌನ್ ಶಿಪ್ ಯೋಜನೆ ಕೈಬಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದು, ಮೇಲ್ಮನೆ ಮತ್ತು ಕೆಳಮನೆಯಲ್ಲೂ ಹೋರಾಟ ಮಾಡುತ್ತೇವೆ.ನಿಮಗೆ ಸಂಖ್ಯಾಬಲ ಇದೆ ಏನು ಬೇಕಾದರು ಮಾಡಬಹುದು ಅಂದರೆ ಭ್ರಮೆ. ದೇವನಹಳ್ಳಿ ಮಾದರಿಯ ನಿರ್ಧಾರವನ್ನು ಸರ್ಕಾರ ಬಿಡದಿ ವಿಚಾರದಲ್ಲೂ ತೆಗೆದುಕೊಳ್ಳಬೇಕು. - ಶರವಣ, ವಿಧಾನ ಪರಿಷತ್ ಸದಸ್ಯರು.28ಕೆಆರ್ ಎಂಎನ್ 1.ಜೆಪಿಜಿಬಿಡದಿ ಹೋಬಳಿ ಬೈರಮಂಗಲ ವೃತ್ತದಲ್ಲಿ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೂ ಸ್ವಾಧೀನ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿದರು.