ಸಾರಾಂಶ
- ವೀರ ಸೌದಾಮನಿ ಕೃತಿ ಬಿಡುಗಡೆ ಮಾಡಿದ ರಾ.ನಂ. ಚಂದ್ರಶೇಖರ ಖೇದ
ಕನ್ನಡಪ್ರಭ ವಾರ್ತೆ ಧಾರವಾಡ
ಬೆಳವಡಿ ಮಲ್ಲಮ್ಮ ಮಹಿಳಾ ಸೈನಿಕರನ್ನು ಕಟ್ಟಿಕೊಟ್ಟ ಪ್ರಥಮ ಮಹಿಳೆಯಾಗಿದ್ದಾಳೆ. ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮ ಇವತ್ತಿನ ಪ್ರಚಾರದ ಯುಗದಲ್ಲಿ ಹಿಂದುಳಿದಿರುವುದು ಖೇದದ ಸಂಗತಿಯಾಗಿದೆ. ಸಂಗೊಳ್ಳಿ ರಾಯಣ್ಣನಿಗೆ ಸ್ಫೂರ್ತಿ ನೀಡಿದ ರಾಣಿ ಚೆನ್ನಮ್ಮಳ ಕಾರ್ಯತತ್ಪರತೆ ಅಪಾರ ಎಂದು ಹಿರಿಯ ಸಂಸ್ಕೃತಿ ಚಿಂತಕ ಬೆಂಗಳೂರಿನ ರಾ.ನಂ. ಚಂದ್ರಶೇಖರ ಹೇಳಿದರು.ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಡಾ. ಸಂತೋಷ ಹಾನಗಲ್ಲ ಅವರ ‘ವೀರ ಸೌದಾಮಿನಿ’ ಚಿತ್ರಸಂಪುಟ ಕಿತ್ತೂರು ರಾಣಿ ಚೆನ್ನಮ್ಮ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ಭಾರತ ಸ್ವಾತಂತ್ರ್ಯದ ಮೊದಲ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮಳ ಬದುಕನ್ನು ಕುರಿತು ಬರೆದ ಪುಸ್ತಕದಿಂದ ಕನ್ನಡದ ರಾಣಿಯನ್ನು ವಿಭಿನ್ನವಾಗಿ ಪರಿಚಯಿಸಲಾಗಿದೆ. ಪುಸ್ತಕದ ಪ್ರಕಟಣೆ ತುಂಬಾ ಕಷ್ಟದಾಯಕವಾಗಿರುವ ಈ ಕಾಲದಲ್ಲಿ ರಾಣಿ ಚೆನ್ನಮ್ಮಳ ಬಗ್ಗೆ ಆಸಕ್ತಿಯಿಂದ ಪ್ರಕಟಿಸಿದ ಕಿತ್ತೂರಿನ ಕಲ್ಮಠದ ಪೂಜ್ಯರ ಕಾರ್ಯ ಶ್ಲಾಘನೀಯ ಎಂದರು.ಕೃತಿ ಕುರಿತು ಮಾತನಾಡಿದ ಇತಿಹಾಸ ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ, ಹಲಗಲಿಯ ಬೇಡರಂಥ ಬುಡಕಟ್ಟು ಜನಾಂಗದವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಸ್ಥಾನವನ್ನು ವಹಿಸಿದವರು. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಅತ್ಯುತ್ತಮ ಹೋರಾಟ ಮಾಡಿದ ಶ್ರೇಯಸ್ಸು ಬುಡಕಟ್ಟು ಜನಾಂಗಕ್ಕೆ ಸಲ್ಲುತ್ತದೆ. ಚೆನ್ನಮ್ಮಳನ್ನು ಕುರಿತು ಈ ಕೃತಿ ದ್ವಿಭಾಷೆಯಲ್ಲಿ (ಕನ್ನಡ ಮತ್ತು ಇಂಗ್ಲೀಷ) ರಚಿತಗೊಂಡಿದ್ದು, ಕಿತ್ತೂರ ಕೋಟೆಯ ಕಲಾಶೈಲಿ, ವಸ್ತುಸಂಗ್ರಹಾಲಯ, ನೀಲನಕ್ಷೆ, ಆಯುಧಗಳ ಉಗ್ರಾಣ, ಇವುಗಳ ಮಾಹಿತಿಯನ್ನು ಈ ಕೃತಿ ಒಳಗೊಂಡಿದ್ದು, ಕಿತ್ತೂರಿನ ಇತಿಹಾಸ ಮೋಡಿ ಲಿಪಿಯಲ್ಲಿ ಇರುವುದರಿಂದ ಅದನ್ನು ಅಧ್ಯಯನ ಮಾಡಿ ಕಿತ್ತೂರಿನ ಇತಿಹಾಸ ತಿಳಿಯುವುದು ಅವಶ್ಯವಾಗಿದೆ. ಲಂಡನ್‌ನಲ್ಲಿಯೂ ಕಿತ್ತೂರಿಗೆ ಸಂಬಂಧಿಸಿದ ಅನೇಕ ದಾಖಲೆಗಳು ಸಿಗುತ್ತವೆ. ಆಸಕ್ತ ಸಂಶೋಧಕರು ಸತ್ಯವಾದ ಸಂಶೋಧನೆಯನ್ನು ಸಿಕ್ಕ ಆಧಾರದ ಹಿನ್ನೆಲೆಯಲ್ಲಿ ಬೆಳಕಿಗೆ ತರುವುದು ಇವತ್ತಿನ ಅಗತ್ಯವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಚೆನ್ನಮ್ಮನ ಕಿತ್ತೂರಿನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಇದೊಂದು ಆಕರಗ್ರಂಥವಾಗಿ ಹೊರಬಂದಿದೆ. ಚೆನ್ನಮ್ಮ ಕಟ್ಟಿದ ಅರಮನೆ ಹಾಳಾಗಿರಬಹುದು. ಆದರೆ, ಗುರು ಮನೆ ಜೀವಂತವಾಗಿ ಉಳಿದಿದೆ. ಈ ಗುರುಮನೆಯು ಚೆನ್ನಮ್ಮಳ ಇತಿಹಾಸ ಜೀವಂತವಾಗಿ ಉಳಿಸುವಲ್ಲಿ ಶ್ರಮಿಸುತ್ತಿದೆ ಎಂದರು.ಲೇಖಕ ಡಾ. ಸಂತೋಷ ಹಾನಗಲ್ಲ ಸಂಶೋಧನಾ ಸಂದರ್ಭದಲ್ಲಿ ಸವೆಸಿದ ದಾರಿಯನ್ನು ನೆನಪಿಸಿಕೊಂಡರು. ಪ್ರಾಧ್ಯಾಪಕಿ ಡಾ. ಸುಜಾತ ಕೊಂಬಳಿ ಇದ್ದರು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು, ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.