ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಈಗ ಅಧಿಕಾರಕ್ಕಾಗಿ ಕಾದಾಟ ಶುರುವಾಗಿದೆ. ಕನಿಷ್ಠ ರಸ್ತೆಗಳಿಗೆ ತೇಪೆ ಹಾಕುವ ಕೆಲಸವನ್ನೂ ಮಾಡುತ್ತಿಲ್ಲ. ರೈತರ ಸಮಸ್ಯೆಯೂ ಉಲ್ಬಣಿಸಿದೆ. ಆ ಬಗ್ಗೆಯೂ ಗಮನ ಹರಿಸುತ್ತಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು, ಜನ ಸಾಮಾನ್ಯರ ಹಿತ ಕಾಯಬೇಕಾದ ಕಾಂಗ್ರೆಸ್ ಸರ್ಕಾರ ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದೆ. ಇದನ್ನು ವಿರೋಧಿಸಿ ರೈತ ಮೋರ್ಚಾದಿಂದ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಮಾಜಿ ಸಂಸದ ಪ್ರತಾಪಸಿಂಹ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಆಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಈಗ ಅಧಿಕಾರಕ್ಕಾಗಿ ಕಾದಾಟ ಶುರುವಾಗಿದೆ. ಕನಿಷ್ಠ ರಸ್ತೆಗಳಿಗೆ ತೇಪೆ ಹಾಕುವ ಕೆಲಸವನ್ನೂ ಮಾಡುತ್ತಿಲ್ಲ. ರೈತರ ಸಮಸ್ಯೆಯೂ ಉಲ್ಬಣಿಸಿದೆ. ಆ ಬಗ್ಗೆಯೂ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿದೆ. ಸಾಲದ ಹೋರೆ ಬಿಟ್ಟರೆ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಇದರಿಂದ ಕಂಗಾಲಾಗಿರುವ ರೈತರು ತಾವು ಬೆಳೆದ ಬೆಳಗಳಿಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿ ಇಡೀ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿ ರೈತ ಪರ ಎಂಬುದನ್ನು ಸಾಬೀತು ಪಡಿಸಿದ್ದರು. ಕೇಂದ್ರ ಸರ್ಕಾರ ಕೃಷಿ ಸಮ್ಮಾನ್ ಯೋಜನೆಯನ್ವಯ 6 ಸಾವಿರ ರು., ರಾಜ್ಯ ಬಿಜೆಪಿ ಸರ್ಕಾರ ಇದಕ್ಕೆ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ನೀಡಲಾಗುತ್ತಿತ್ತು ಎಂದರು.
ಕಾಂಗ್ರೆಸ್ ಸರ್ಕಾರ ಬಂದ ನಂತರ ರೈತರಿಗೆ ನೀಡುತ್ತಿದ್ದ ಹಣ ನಿಂತುಹೋಗಿದೆ. ನಮ್ಮದು ರೈತಪರ ಸರ್ಕಾರ ಎಂದು ಹೇಳಿಕೊಳ್ಳುವ ನೈತಿಕತೆಯನ್ನೂ ಕಳೆದುಕೊಂಡಿದ್ದಾರೆ. ಮಾಜಿ ಸಿಎಂ ಕುಮಾರಣ್ಣ ರೈತರ ಸಾಲ, ಬಡ್ಡಿ ಮನ್ನಾ ಮಾಡಿದ್ದರು. ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ರೈತರ ಸಾಲ ಮನ್ನಾದ ಜೊತೆಗೆ ರೈತರ ಸಾಲದ ಬಡ್ಡಿ ಮತ್ತು ಚಕ್ರಬಡ್ಡಿ ಮನ್ನಾ ಮಾಡಲಾಗಿತ್ತು ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗಾಗಿ ಯಾವ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಮೊನ್ನೆಯಷ್ಟೇ ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ರೈತರ ಆಕ್ರೋಶದ ವೇಳೆ ಹಲವು ಅನಾಹುತಗಳು ಆಗಿದೆ ಎಂಬುದನ್ನು ಈ ರಾಜ್ಯದ ಜನತೆ ನೋಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಯಾವ ಮಾದರಿಯಲ್ಲಿ ಆಡಳಿತ ನಡೆಸುತ್ತಿದೆ ಎಂಬುದು ತಿಳಿಯುತ್ತದೆ ಎಂದು ದೂರಿದರು.
ಕೇಂದ್ರ ಸರ್ಕಾರ ಹಲವಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಪಡಿತರ ವ್ಯವಸ್ಥೆಯಲ್ಲಿ ಒಂದು ಕೆಜಿ ಜೋಳ, ಒಂದು ಕೆ.ಜಿ. ರಾಗಿ ವಿತರಣೆ ಮಾಡುವ ಮೂಲಕ ರೈತರಿಂದ ಬೆಳೆಗಳನ್ನು ಖರೀದಿ ಮಾಡುತ್ತಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರ ರೈತರಿಂದ ಜೊಳ ಖರೀದಿಸಲು ಖರೀದಿ ಕೇಂದ್ರ ತೆರೆದಿಲ್ಲ. ಭತ್ತಕ್ಕೆ 2380 ರು. ದರ ನಿಗದಿ ಮಾಡಿದೆ. ಜೋಳಕ್ಕೆ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ರಾಜ್ಯ ಸರ್ಕಾರ ಖರೀದಿ ಮಾಡಿ ಪಡಿತರ ವ್ಯವಸ್ಥೆಯೊಳಗೆ ಅದನ್ನು ವಿತರಣೆ ಮಾಡಿದರೆ ಜನರ ಆರೋಗ್ಯವೂ ಸುಧಾರಿಸುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ದೂರಿದರು.ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆಂದು ಯಡಿಯೂರಪ್ಪ ಅವರು 5 ರು. ಪ್ರೋತ್ಸಾಹ ಧನ ನೀಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಿ 7 ರು. ರೈತರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿ ಇನ್ನೂ ಅದನ್ನು ನೀಡುತ್ತಿಲ್ಲ. ಅವರನ್ನು ಕೇಳಿದರೆ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಹೇಳುತ್ತಾರೆ ಎಂದರು.
ಗ್ಯಾರಂಟಿಯಲ್ಲಿ ಚುನಾವಣೆಗಳು ಬಂದಾಗ ಮಾತ್ರ ಮಹಿಳೆಯರ ಖಾತೆಗೆ 2 ಸಾವಿರ ರು. ಹಾಕಿ ಸುಮ್ಮನಾಗುತ್ತಾರೆ. ಇನ್ನು ಬಸ್‌ಗಳು ಸಂಪೂರ್ಣ ಹಾಳಾಗಿವೆ. ಅವುಗಳ ದುರಸ್ತಿಗೂ ಸರ್ಕಾರದಲ್ಲಿ ಹಣವಿಲ್ಲದಂತಾಗಿದೆ. ಯುವನಿಧಿ ಯೋಜನೆಯಲ್ಲಿ ಒಬ್ಬನೇ ಒಬ್ಬ ನಿರುದ್ಯೋಗಿಗೂ ಹಣ ನೀಡಿಲ್ಲ. ಇನ್ನು ಯಾವ ಪುರುಷಾರ್ಥಕ್ಕಾಗಿ ಗ್ಯಾರಂಟಿ ಯೋಜನೆ ಎಂದು ತಮಟೆ ಬಡಿದುಕೊಳ್ಳುತ್ತಿದ್ದಾರೆ ತಿಳಿಯದು ಎಂದು ಟೀಕಿಸಿದರು.ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಮಾಡುತ್ತದೆ. ಆದರೆ, ರಾಜ್ಯ ಸರ್ಕಾರ ವರ್ಷಕ್ಕೆ 38 ಸಾವಿರ ಕೋಟಿ ರು.ಗಳನ್ನು ಅಬಕಾರಿಯಿಂದ ತೆರಿಗೆ ಪಡೆಯುತ್ತಿದೆ. ಹೀಗಿದ್ದಾಗ ಕಬ್ಬಿಗೆ ಹೆಚ್ಚಿಗೆ ದರ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯ. ಎಲ್ಲ ಅಗತ್ಯ ವಸ್ತುಗಳ ದರ ಹೆಚ್ಚಿಸಿರುವ ರಾಜ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ ಎಂದು ಕಿಡಿಕಾರಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಮುಡಾ ಹಗರಣ ಪಾದಯಾತ್ರೆ ಯಶಸ್ಸಿಯಾಗಿದೆ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಆಶೋಕ್ ನೇತೃತ್ವದಲ್ಲಿ ಹಲವು ಹೋರಾಟ ಮಾಡಲಾಗಿದೆ. ರೈತರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಬಗ್ಗೆ ಬಿಜೆಪಿ ರೈತ ಮೋರ್ಚಾ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಪ್ರಧಾನ ಕಾರ್ಯದರ್ಶಿ ವಿವೇಕ್, ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ, ಮುಖಂಡ ಇಂಡುವಾಳು ಸಚ್ಚಿದಾನಂದ, ನಗರಾಧ್ಯಕ್ಷ ವಸಂತ್‌ಕುಮಾರ್, ನಾಗಾನಂದ್ ಇದ್ದರು.