ಸಾರಾಂಶ
ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಡಾ. ಲಮಾಣಿ ಸೂಚನೆಶಿರಹಟ್ಟಿ:ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಜೆಜೆಎಂ ಯೋಜನೆ ಶಿರಹಟ್ಟಿ ತಾಲೂಕಿನಲ್ಲಿ ಸಂಪೂರ್ಣ ವಿಫಲವಾಗಿದ್ದು, ಕೋಟಿಗಟ್ಟಲೆ ಬಿಲ್ ಪಡೆದು ಪಾರಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ದ ಇಲಾಖೆ ವತಿಯಿಂದಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಜರುಗಿದ ಟಾಸ್ಕಪೋರ್ಸ್ ಕಮಿಟಿ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಬಹುತೇಕ ಕಡೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಗುತ್ತಿಗೆದಾರರು ಈ ಸಮಸ್ಯೆಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಇದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಿರ್ದಿಷ್ಟ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಇಲಾಖೆ ವತಿಯಿಂದ ಗುತ್ತಿಗೆದಾರರಿಗೆ ಆದೇಶ ಮಾಡಿದ್ದರೂ ಮನಸೋ ಇಚ್ಛೆ ಕಳಪೆ ಕಾಮಗಾರಿ ಮಾರಿ ಸರ್ಕಾರ ಹಣ ಲೂಟಿ ಮಾಡಿದ್ದಾರೆ. ಇವರನ್ನು ಸುಮ್ಮನೆ ಬಿಟ್ಟರೆ ಕೇಂದ್ರ ಸರ್ಕಾರದ ಅತ್ಯಂತ ಮಹತ್ವದ ಯೋಜನೆ ಹಳ್ಳ ಹಿಡಿಯುತ್ತದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತುರ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಮಾಹಿತಿ ನೀಡುವಂತೆ ತಾಕೀತು ಮಾಡಿದರು.
ಬನ್ನಿಕೊಪ್ಪ, ಬೂದಿಹಾಳ, ಹೊಸಳ್ಳಿ, ಕಡಕೋಳ, ಮಾಗಡಿ, ವಡವಿ ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಎದುರಾಗಿರುವುದು ಗಮನಕ್ಕೆ ಬಂದಿದೆ. ಹೊಳೆ ನೀರು ಕಡಿಮೆಯಾದಲ್ಲಿ ಇನ್ನೂ ಸಮಸ್ಯೆ ಹೆಚ್ಚಾಗಲಿದೆ. ಜನವರಿ ತಿಂಗಳಲ್ಲಿ ಮಳೆ ಬರದೇ ಇದ್ದರೆ ಸಮಸ್ಯೆ ಇನ್ನು ಉಲ್ಬಣವಾಗುವದು ನಿಶ್ಚಿತ. ಇದಕ್ಕೆ ಪೂರಕವಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನ ಮಾಡಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಬಾರದಂತೆ ಮುತುವರ್ಜಿ ವಹಿಸಬೇಕು ಎಂದರು.ತಾಲೂಕಿನ ಚವಡಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ತಕ್ಷಣ ಬಗೆಹರಿಸಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಜನರಿಗೆ ಸಮರ್ಪಕ ನೀರು ಪೂರೈಕೆಯಾಗಬೇಕಿತ್ತು. ಆದರೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಸುರೇಶ ಕ್ಯಾದಿಹಳ್ಳಿ ನೀರು ಪೂರೈಕೆ ಮಾಡುತ್ತಿಲ್ಲ. ಇವರ ವಿರುದ್ಧ ಕೇಸ್ ದಾಖಲಿಸಿ. ಆಗಿರುವ ತೊಂದರೆ ಬಗ್ಗೆ ಹಲವಾರು ಬಾರಿ ಮೌಖಿಕ ಹಾಗೂ ಲಿಖಿತವಾಗಿ ಗಮನಕ್ಕೆ ತಂದರೂ ಅಸಡ್ಡೆ ತೋರಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಅವರಿಗೆ ಸಂದಾಯ ಆಗಬೇಕಿರುವ ಬಿಲ್ ತಡೆಹಿಡಿಯಬೇಕು. ಯಾರ ಮುಲಾಜಿಗೆ ಒಳಗಾಗದೇ ಜನಪರ ಕಾರ್ಯ ಮಾಡಿ ಎಂದು ಸ್ಪಷ್ಟಪಡಿಸಿದರು,
ಬರದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ತೊಂದರೆ ಆಗದಂತೆ ಮೇವು ವಿತರಣಾ ಕಾರ್ಯ ನಡೆಯಬೇಕು. ತಾಲೂಕಿನಲ್ಲಿ ೫೯ ಸಾವಿರಕ್ಕೂ ಹೆಚ್ಚು ಕುರಿ, ಮೇಕೆ ಇದ್ದು, ೨೬. ೫೫೧ ಜಾನುವಾರುಗಳಿವೆ. ಅಧಿಕಾರಿಗಳು ಅಂಕಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೇವು ವಿತರಿಸುವ ಕೆಲಸ ಮಾಡಬೇಕು. ಅಗತ್ಯ ಬಿದ್ದರೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೇವು ವಿತರಣಾ ಕೇಂದ್ರ ತೆರೆಯಬೇಕು ಎಂದು ಸಲಹೆ ನೀಡಿದರು.ಚನ್ನಪಟ್ಟಣ ಕಂದಾಯ ಗ್ರಾಮ ಮಾಡುವಲ್ಲಿ ಅಧಿಕಾರಿಗಳು ಸರಿಯಾಗಿ ದಾಖಲಾತಿಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಹಲವು ದಶಕಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವೆಲ್ಲರು ಕೆಲಸ ಮಾಡೋಣ. ಕೆಲ ತಾಂಡಾಗಳು ಸಹ ಕಂದಾಯ ಗ್ರಾಮಗಳಾಗಿ ಮಾರ್ಪಟ್ಟಿಲ್ಲ. ಇದು ಅತ್ಯಂತ ವಿಷಾದನೀಯ ಕಂದಾಯ ಗ್ರಾಮ ಆಗದೇ ಇದ್ದರೆ ಅಭಿವೃದ್ದಿಗೆ ಕಷ್ಟಕರವಾಗುತ್ತಿದೆ. ಮುಖ್ಯವಾಗಿ ಆ ಗ್ರಾಮದ ಜನರಿಗೆ ಮೂಲಭೂತ ಸೌಲಭ್ಯ ಸಿಗುವುದಿಲ್ಲ ಆದ್ದರಿಂದ ಅಗತ್ಯ ದಾಖಲೆಗಳೊಂದಿಗೆ ಕಡತಗಳ ವಿಲೇವಾರಿ ಆಗಬೇಕು ಎಂದರು.
ತಾಲೂಕಿನಲ್ಲಿ ೨೮ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಬರದಿಂದ ತಾಲೂಕಿನಲ್ಲಿ ಕೃಷಿ ಇಲಾಖೆಯಿಂದ ೨೪ ಕೋಟಿಗೂ ಹೆಚ್ಚು ನಷ್ಟದ ಅಂದಾಜು ಮಾಡಲಾಗಿದೆ. ಸರ್ಕಾರದಿಂದ ರೈತರಿಗೆ ಬರಬೇಕಾದ ನಷ್ಟ ಮೊತ್ತವನ್ನು ಒದಗಿಸಲು ಸರ್ಕಾರದ ಮೇಲೆ ಒತ್ತಡ ಹಾಕಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಸರಿಯಾಗಿ ಮಳೆ ಬಾರದ ಹಿನ್ನಲೆಯಲ್ಲಿ ರೈತ ಸಮುದಾಯ ಸಂಕಷ್ಟದಲ್ಲಿ ಇದೆ. ಅವರ ನೆರವಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಹಾಗೂ ನಿಶ್ವಾರ್ಥದಿಂದ ಶ್ರಮಿಸೋಣ ಎಂದು ತಿಳಿಸಿದರು.ತಹಸೀಲ್ದಾರ್ ಅನಿಲ ಬಡಿಗೇರ, ತಾಲೂಕ ಪಂಚಾಯ್ತಿ ಇಓ ಡಾ. ನಿಂಗಪ್ಪ ಓಲೇಕಾರ, ಸುರೇಶ ಕುಂಬಾರ, ರೇವಣೆಪ್ಪ ಮನಗೂಳಿ, ಫಕೀರೇಶ ತಿಮ್ಮಾಪುರ, ಸಂತೋಷ ಲಮಾಣಿ, ಸಂತೋಷ ಅಸ್ಕಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.