ಡಿಕೆಶಿ ರಕ್ಷಿಸಲು ಸಿಎಂರಿಂದ ಸಚಿವ ಸಂಪುಟ ದುರುಪಯೋಗ-ಕೋಟ

| Published : Nov 26 2023, 01:15 AM IST

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ರಕ್ಷಿಸಲು ಸಿಬಿಐಗೆ ನೀಡಿದ್ದ ಅವರ ಪ್ರಕರಣವನ್ನು ವಾಪಸ್‌ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಸಚಿವ ಸಂಪುಟವನ್ನೇ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಿಪ ಸದಸ್ಯ ಕೋಟ ಶ್ರೀನಿವಾಸ ಪೂಜಾರ ವಾಗ್ದಾಳಿ ನಡೆಸಿದರು. ಈ ಹಿಂದೆ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಈಗ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಡಿಕೆಶಿ ವಿರುದ್ಧ ನಡೆಯುತ್ತಿದ್ದ ತನಿಖೆ ನಿಲ್ಲಿಸುವಂತೆ ಮಾಡಿದ್ದು ಸರಿಯಲ್ಲ. ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಆದರೂ ಸಹಿತ ಸಿಎಂ, ಡಿಸಿಎಂ ರೈತರ ಹೊಲಗಳಿಗೆ ಹೋಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ; ಪರಿಹಾರ ಕೊಡುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ರಕ್ಷಿಸಲು ಸಿಬಿಐಗೆ ನೀಡಿದ್ದ ಅವರ ಪ್ರಕರಣವನ್ನು ವಾಪಸ್‌ ಪಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೀ ಸಚಿವ ಸಂಪುಟವನ್ನೇ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ವಿಪ ಸದಸ್ಯ ಕೋಟ ಶ್ರೀನಿವಾಸ ಪೂಜಾರ ವಾಗ್ದಾಳಿ ನಡೆಸಿದರು.ಪಟ್ಟಣದ ರುಕ್ಮಿಣಿ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಕೊಪ್ಪಳ, ರಾಯಚೂರು ಜಿಲ್ಲೆಗಳ ಪಪಂ, ಪುರಸಭೆಗಳ ಸದಸ್ಯರಿಗೆ ಆಯೋಜಿಸಿದ ಪ್ರಶಿಕ್ಷಣ ವರ್ಗ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಈ ಹಿಂದೆ ಸಂವಿಧಾನ ರಕ್ಷಣೆ ಮಾಡಬೇಕು ಎಂದು ಹೇಳುತ್ತಿದ್ದ ಸಿದ್ದರಾಮಯ್ಯ ಈಗ ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಡಿಕೆಶಿ ವಿರುದ್ಧ ನಡೆಯುತ್ತಿದ್ದ ತನಿಖೆ ನಿಲ್ಲಿಸುವಂತೆ ಮಾಡಿದ್ದು ಸರಿಯಲ್ಲ ಎಂದರು.ಸದ್ಯಕ್ಕೆ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಆದರೂ ಸಹಿತ ಸಿಎಂ, ಡಿಸಿಎಂ ರೈತರ ಹೊಲಗಳಿಗೆ ಹೋಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ; ಪರಿಹಾರ ಕೊಡುತ್ತಿಲ್ಲ. ಮುಂದಿನ ದಿನಮಾನಗಳಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ ಎಂದರು.ಮುಂದೆ ಜಾನುವಾರುಗಳಿಗೆ ಮೇವಿನ ಕೊರತೆ ಕಾಡುತ್ತದೆ. ರಾಜ್ಯದ ಜನರಿಗೆ ಪರಿಹಾರ ನೀಡುವಂತಹ ಕೆಲಸ ಮಾಡಬೇಕು. ಅದನ್ನೆಲ್ಲ ಕೇಂದ್ರ ಸರ್ಕಾರ ಬಿಟ್ಟು ಪರಿಹಾರ ಕೊಟ್ಟಿಲ್ಲ ಎಂದು ಹೇಳುತ್ತಾ ಕುಳಿತುಕೊಂಡರೆ ಪ್ರಯೋಜನವಿಲ್ಲ. ಮೊದಲು ರಾಜ್ಯದ ಪರಿಹಾರ ಕೊಡಿ. ನಂತರ ಕೇಂದ್ರದ ಪರಿಹಾರವನ್ನು ಕೇಳಲು ನಾವು ನಿಮ್ಮ ಜೊತೆಗೆ ಬರುತ್ತೇವೆ ಎಂದರು.ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಬೆಳಗಾವಿ ಭಾಗದಲ್ಲಿ ಪ್ರವಾಹ ಉಂಟಾಗಿ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ನಾವು ಶೀಘ್ರದಲ್ಲಿ ಪರಿಹಾರ ಕೊಟ್ಟಿದ್ದೆವು. ಆದರೆ ಬರಗಾಲ ಉಂಟಾಗಿ ಇಷ್ಟು ದಿನಗಳಾದರೂ ಈಗಿನ ಸರ್ಕಾರ ನಯಾಪೈಸೆ ಪರಿಹಾರ ಕೊಟ್ಟಿಲ್ಲ. ಎಷ್ಟರ ಮಟ್ಟಿಗೆ ಆಡಳಿತ ಮಾಡುತ್ತಿರಿ? ನಿಮ್ಮದು ರೈತಪರ ಸರ್ಕಾರವಲ್ಲ ರೈತವಿರೋಧಿ ಸರ್ಕಾರವಾಗಿದೆ ಎಂದರು.ಸ್ಪೀಕರ್‌ಗೆ ಬಿಜೆಪಿ ಶಾಸಕರು ಸಲಾಂ ಹೊಡಿಯಬೇಕು ಎಂದು ಜಮೀರ್ ಅಹ್ಮದ್ ಹೇಳಿರುವುದು ಖಂಡನೀಯವಾಗಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರದಿಂದ ಯಾವುದೇ ಅರ್ಜಿ ಹಾಕದೇ ವರ್ಷಕ್ಕೆ ₹6 ಸಾವಿರ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದಾಗ ₹4 ಸಾವಿರ ಕೊಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದಮೇಲೆ ಬಿಜೆಪಿಯವರು ಕೊಡುತ್ತಿದ್ದ ರಾಜ್ಯದ ಪಾಲು ₹4ಸಾವಿರ ಕಡಿತಗೊಳಿಸಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.ಈ ಪ್ರಶಿಕ್ಷಣ ತರಬೇತಿಯಲ್ಲಿ ನರೇಂದ್ರ ಮೋದಿ ಸರ್ಕಾರದ ಸಾಧನೆಗಳು, ಕರ್ನಾಟಕದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ತಂದಿದ್ದ ಬದಲಾವಣೆಗಳನ್ನು ತಿಳಿಸಲಾಗುತ್ತಿದೆ. ಇದನ್ನು ಎಲ್ಲರೂ ಅರಿತು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದರು.ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸ್ಗೂರು, ಮಾಜಿ ಜಿಪಂ ಸದಸ್ಯ ಕೆ.ಮಹೇಶ, ಮಂಜುಳಾ ಕರಡಿ, ಚಂದ್ರಶೇಖರಗೌಡ ಪಾಟೀಲ, ಸಮೀರ್ ಕಾಗಲ್ಕರ್, ನರೇಂದ್ರ ಮೂರ್ತಿ, ಶಶಿಕಾಂತ, ಮಂಡಲದ ಅಧ್ಯಕ್ಷ ಬಸವರಾಜ ಹಳ್ಳೂರ, ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ ಇದ್ದರು.