ಕ್ರೀಡಾ ಸಾಧನೆಗೆ ನಿರಂತರ ಪರಿಶ್ರಮ ಮುಖ್ಯ

| Published : Nov 26 2023, 01:15 AM IST

ಸಾರಾಂಶ

ಸಹ್ಯಾದ್ರಿ ಸಹೋದಯ ಶಾಲಾ ಸಂಕಿರಣದ ಅಧ್ಯಕ್ಷ ನವಿನಾ ಪಯಾಸ್‌ ಮಾತನಾಡಿ, ಕ್ರೀಡೆಯ ಮೂಲಕ ಎಲ್ಲರೂ ಒಂದು ಗೂಡುವುದರ ಜೊತೆಗೆ ಪಠ್ಯಕ್ಕೆ ಮಾತ್ರ ಸೀಮಿತರಾಗದೇ ಕ್ರೀಡಾ ಸಾಧನೆಗಳನ್ನು ತಿಳಿಯಲು ಕ್ರೀಡಾಕೂಟಗಳು ಮುಖ್ಯವಾಗುತ್ತವೆ. ಇದರಿಂದ ಸಂಘಟನಾ ಕೌಶಲ್ಯ, ತಂಡ ಹಾಗೂ ಕ್ರೀಡಾ ಸ್ಫೂರ್ತಿ ಕ್ರೀಡಾಪಟುಗಳಲ್ಲಿ ಹೆಚ್ಚಾಗುತ್ತದೆ. ಎಂದರು.

ಹೊಳೆಹೊನ್ನೂರು: ಸಾಧನೆ ಮಾಡಿದಾಗ ಮಾತ್ರ ನೆನಪುಗಳು ಬೆಲೆ ಪಡೆದುಕೊಳ್ಳುತ್ತವೆ ಎಂದು ಕುವೆಂಪು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ದೈಹಿಕ ಶಿಕ್ಷಣ ಮತ್ತು ಸಂಶೋಧನಾ ವಿಭಾಗದ ಸಹಪ್ರಾಧ್ಯಾಪಕ ಡಾ.ಗಜಾನನ ಪ್ರಭು ಬಿ. ಹೇಳಿದರು.

ಇಲ್ಲಿಗೆ ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಿಬಿಎಸ್‌ಇ ಅಂತರ ಶಾಲಾ ಅಥ್ಲೆಟಿಕ್ಸ್‌ ಮೀಟ್-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಒಂದು ವಿಷಯ ತನ್ನದೇ ಆದ ಬೆಲೆ ಹೊಂದಿರುತ್ತದೆ. ಕ್ರೀಡೆಯಲ್ಲಿ ಬೆಲೆಯ ಜೊತೆಗೆ ನೆನಪು ಅತಿ ಮುಖ್ಯ. ಅದಕ್ಕೆ ಬದ್ಧತೆ, ನಿಖರತೆ, ನಿರಂತರ ಪ್ರಯತ್ನ ಹೆಚ್ಚಾದಾಗ ಗೆಲುವು ನಮಗೆ ದೊರಕುತ್ತದೆ. ಮಾರ್ಗದರ್ಶನ, ನಿರಂತರ ಪರಿಶ್ರಮ ಸಿದ್ಧತೆಯೊಂದಿಗೆ ಸಾಧನೆಯಕಡೆಗೆ ಸಾಗಬೇಕು. ಮುಂದಿನ ದಿನಗಳಲ್ಲಿ ಕತ್ತಿ ವರಸೆ, ಈಜು, ಬಿಲ್ಲುಗಾರಿಕೆ, ಶೂಟಿಂಗ್, ಜಿಮ್ನಾಸ್ಟಿಕ್, ಕುದುರೆ ಸವಾರಿ, ಮಲ್ಲಕಂಬ, ಮುಂತಾದ ಕ್ರೀಡೆಗಳಿಗೂ ಆದ್ಯತೆ ನೀಡಬೇಕಿದೆ ಎಂದರು.

ಸಹ್ಯಾದ್ರಿ ಸಹೋದಯ ಶಾಲಾ ಸಂಕಿರಣದ ಅಧ್ಯಕ್ಷ ನವಿನಾ ಪಯಾಸ್‌ ಮಾತನಾಡಿ, ಕ್ರೀಡೆಯ ಮೂಲಕ ಎಲ್ಲರೂ ಒಂದು ಗೂಡುವುದರ ಜೊತೆಗೆ ಪಠ್ಯಕ್ಕೆ ಮಾತ್ರ ಸೀಮಿತರಾಗದೇ ಕ್ರೀಡಾ ಸಾಧನೆಗಳನ್ನು ತಿಳಿಯಲು ಕ್ರೀಡಾಕೂಟಗಳು ಮುಖ್ಯವಾಗುತ್ತವೆ. ಇದರಿಂದ ಸಂಘಟನಾ ಕೌಶಲ್ಯ, ತಂಡ ಹಾಗೂ ಕ್ರೀಡಾ ಸ್ಫೂರ್ತಿ ಕ್ರೀಡಾಪಟುಗಳಲ್ಲಿ ಹೆಚ್ಚಾಗುತ್ತದೆ. ಎಂದರು.

ಅಧ್ಯಕ್ಷತೆ ವಹಿಸಿದ್ದ ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ಶ್ರೀಕಾಂತ ಎಂ ಹೆಗಡೆ, ಕ್ರೀಡೆಗಳ ಮೂಲಕ ಮಕ್ಕಳು ಅನುಭವಗಳನ್ನು ಪಡೆದು ತಮ್ಮ ಸಾಧನೆಗಳನ್ನು ಉತ್ತಮ ಪಡಿಸಿಕೊಳ್ಳಬೇಕು ಹಾಗೂ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆಯಬೇಕು ಎಂದರು.

ಕ್ರೀಡಾಕೂಟದಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಜಿಲ್ಲೆಯ 18 ಸಿಬಿಎಸ್‌ಇ ಶಾಲೆಗಳ 358 ಕ್ರೀಡಾಪಟುಗಳು 47 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.

ಶಾಲೆ ಹಿರಿಯ ಉಪಪ್ರಾಂಶುಪಾಲ ಡಾ. ರೆಜಿ ಜೋಸೆಫ್ ಮಾತನಾಡಿದರು. ದೈಹಿಕ ಶಿಕ್ಷಕ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು. ಶಿಕ್ಷಕಿ ಟೀನಾ ಥಾಮಸ್ ನಿರೂಪಿಸಿ, ಉಪಪ್ರಾಂಶುಪಾಲೆ ವಾಣಿ ಕೃಷ್ಣಪ್ರಸಾದ್‌ ವಂದಿಸಿದರು.

- - - -25ಎಚ್‌ಎಚ್‌ಆರ್‌ಪಿ01:

ಹೊಳೆಹೊನ್ನೂರು ಸಮೀಪದ ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಸಿಬಿಎಸ್‌ಇ ಅಂತರ ಶಾಲಾ ಅಥ್ಲೆಟಿಕ್ಸ್‌ ಮೀಟ್-2023 ಕಾರ್ಯಕ್ರಮವನ್ನು ಡಾ.ಗಜಾನನ ಪ್ರಭು ಬಿ. ಉದ್ಘಾಟಿಸಿದರು.