ಸಾರಾಂಶ
ಮೈಲಿಮನೆ ಶಾಲೆಯಲ್ಲಿ ಸಾಹಿತಿ ಎ.ಆರ್. ಕೃಷ್ಣಶಾಸ್ತ್ರಿಗಳ ಬದುಕು ಬರಹ ಕುರಿತು ಉಪನ್ಯಾಸ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡದ ಅಶ್ವಿನಿ ದೇವತೆಗಳಲ್ಲೊಬ್ಬರಾದ ಎ.ಆರ್.ಕೃಷ್ಣಶಾಸ್ತ್ರಿಗಳಂತೆ ಇಂದಿನ ವಿದ್ಯಾರ್ಥಿಗಳು ನಾಡನ್ನು ಕಟ್ಟುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಸಾಹಿತಿ ಕುಂದೂರು ಅಶೋಕ್ ಸಲಹೆ ಮಾಡಿದರು.ತಾಲೂಕು ಸಿರಿಗನ್ನಡ ವೇದಿಕೆ ಸುವರ್ಣ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಲಿಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಸಾಹಿತಿ ಎ.ಆರ್. ಕೃಷ್ಣಶಾಸ್ತ್ರೀಗಳ ಬದುಕು ಬರಹ ಕುರಿತು ಅವರು ಮಾತನಾಡಿದರು. ಕೃಷ್ಣಶಾಸ್ತ್ರಿಗಳಂತೆ ಇಂದಿನ ವಿದ್ಯಾರ್ಥಿಗಳು ಕನ್ನಡದ ಪರಿಚಾರಕ ರಾಗಬೇಕು. ನಾಡು, ನುಡಿ, ನೆಲ, ಜಲ ಮತ್ತು ಸಂಸ್ಕೃತಿ ಸಂರಕ್ಷಿಸುವ ಕೆಲಸ ಮಾಡಬೇಕು. ಮಾತೃ ಭಾಷೆಯಲ್ಲೇ ವ್ಯವಹರಿಸಬೇಕು ಎಂದು ಕಿವಿ ಮಾತು ಹೇಳಿದರು. ನಾಡು ನುಡಿ ನೆಲ ಜಲ ಮತ್ತು ಸಂಸ್ಕೃತಿಯನ್ನು ನಾವು ಅಲಕ್ಷ್ಯಮಾಡಿದರೆ ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ನೆರೆಯ ರಾಜ್ಯಗಳು ಅವುಗಳನ್ನು ಅಕ್ರಮಿಸುವೆ. ಮುಂದೊಂದು ದಿನ ನಾವು ಅವುಗಳನ್ನು ಹುಡುಕಬೇಕಾದ ದುಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದರು. ಕನ್ನಡದ ಅಶ್ವಿನಿ ದೇವತೆ, ಸಾಹಿತಿ ಎ.ಆರ್. ಕೃಷ್ಣಶಾಸ್ತ್ರಿಗಳ ಬದುಕು ಬರಹ ಮತ್ತು ಅವರ ಸಂದೇಶಗಳನ್ನು ಅವರ ಜೀವನದ ಕೆಲವು ಘಟನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸುವ ಮೂಲಕ ಗಮನ ಸೆಳೆದರು. ಎ.ಆರ್. ಕೃಷ್ಣಶಾಸ್ತ್ರೀಗಳು ಕನ್ನಡವನ್ನು ಕಟ್ಟಿ ಬೆಳೆಸಿದ ಮಹಾತ್ಮರು, ಅವರ ಹಾದಿಯಲ್ಲೇ ಇಂದಿನ ವಿದ್ಯಾರ್ಥಿಗಳು ಸಾಗಬೇಕು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು, ಕನ್ನಡಕ್ಕಾಗಿ ದುಡಿಯುವುದನ್ನು ಕಲಿಯಬೇಕು ಎಂದು ತಿಳಿಸಿದರು. ಇದೇ ವೇಳೆ ಎ.ಆರ್. ಕೃಷ್ಣಶಾಸ್ತ್ರೀಗಳು ಮತ್ತು ಕನ್ನಡದ ಪ್ರಸಿದ್ಧ ಕವಿಗಳು, ಸಾಹಿತಿಗಳ ಗೀತೆಗಳ ಅಂತರಾರ್ಥವನ್ನು ವಿದ್ಯಾರ್ಥಿಗಳಿಗೆ ವಿವರಿಸಿದ ಅಶೋಕ್, ಕನ್ನಡಿಗರು ಎಲ್ಲೆ ಇದ್ದರೂ ಕನ್ನಡಿಗರಾಗಿಯೇ ಉಳಿಯಬೇಕು. ಮಾತೃ ಭಾಷೆ ಗಾಗಿ ದುಡಿಯಬೇಕು ಎಂದು ಹೇಳಿದರು. ಆಶಯ ನುಡಿಗಳನ್ನಾಡಿದ ಸಾಹಿತಿ ಡಿ.ಎಂ. ಮಂಜುನಾಥಸ್ವಾಮಿ, ಪ್ರಸ್ತುತ ಕನ್ನಡ ಭಾಷೆ ಉಳಿಸಿ ಬೆಳೆಸುತ್ತಿರುವುದೇ ಸರ್ಕಾರಿ ಶಾಲೆಗಳು, ಅವುಗಳು ಮುಚ್ಚಿ ಹೋದರೆ ರಾಜ್ಯದಲ್ಲಿ ಕನ್ನಡದ ಅವನತಿಯಾಗುತ್ತದೆ ಎಂದರು. ಎಲ್ಲಾ ದೇಶಗಳ ಜನರೂ ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಮಾತೃಭಾಷೆಯಿಂದಲೇ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಸಿರಿಗನ್ನಡ ವೇದಿಕೆಯ ತಾಲೂಕು ಅಧ್ಯಕ್ಷ ಚಂದ್ರಯ್ಯ, ನಾಡು ನುಡಿ ನೆಲ ಜಲ ಮತ್ತು ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ಅಭಿಮಾನ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಮಾರಂಭದ ನಡುವೆ ತಾಲೂಕು ಅಧ್ಯಕ್ಷ ಚಂದ್ರಯ್ಯ, ರಾಷ್ಟ್ರಕವಿ ಕುವೆಂಪು ಅವರ ಗೀತೆಗಳನ್ನು ಹಾಡಿ ವಿದ್ಯಾರ್ಥಿ ಗಳನ್ನು ರಂಜಿಸಿದರು. ಕಾಫಿ ಬೆಳೆಗಾರರಾದ ಜಯಚಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ವಾಸು, ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ಬಸವ ಕುಮಾರ್, ಶಿಕ್ಷಕರಾದ ಆಸಿಫ್ ಆಲಿ, ಅನುರಾಧ ಉಪಸ್ಥಿತರಿದ್ದರು. 25 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಮೈಲಿಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮವನ್ನು ಜಯಚಂದ್ರ ಉದ್ಘಾಟಿಸಿದರು.