ಆಂಗ್ಲ ಮಾಧ್ಯಮಗಳಿಂದ ಸರ್ಕಾರಿ ಕನ್ನಡ ಶಾಲೆಗಳಿಗೆ ಸಂಕಷ್ಟ: ಶ್ರೀಗಳು

| Published : Nov 26 2023, 01:15 AM IST

ಸಾರಾಂಶ

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕನ್ನಡ ನಾಡನ್ನು ಕಟ್ಟುವಲ್ಲಿ ಗೋಕಾಕ ಚಳವಳಿ ಮಹತ್ತರವಾದ ಪಾತ್ರ ಪಡೆಯಿತು. ಕನ್ನಡ ನಾಡು- ಭಾಷೆಗೆ ತೊಂದರೆಯಾದಾಗ ಕನ್ನಡಪರ ಸಂಘಟನೆಗಳ ಹೋರಾಟದ ಹಾದಿಯನ್ನು ಹಿಡಿಯುವುದರ ಮೂಲಕ ಕನ್ನಡ ಭಾಷೆ ಉಳಿಯುತ್ತಿದೆ ಎಂದರು. ಸಮಾರಂಭದಲ್ಲಿ ರೈತರಿಗೆ, ವೀರ ಯೋಧರಿಗೆ, ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ವೈದ್ಯರಿಗೆ, ಹಿರಿಯ ಆಟೋ ಚಾಲಕರಿಗೆ ಸನ್ಮಾನಿಸಲಾಯಿತು.

ಆನಂದಪುರ: ಆಂಗ್ಲ ಮಾಧ್ಯಮಗಳಿಂದಾಗಿ ಸರ್ಕಾರಿ ಕನ್ನಡ ಶಾಲೆಗಳು ಅವನತಿಯ ಹಾದಿ ಹಿಡಿಯುತ್ತಿರುವುದು ವಿಷಾದನೀಯ ಎಂದು ಮುರುಘಾ ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ನುಡಿದರು.

ಪಟ್ಟಣದ ಜೈ ಕರ್ನಾಟಕ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ದಶಮಾನೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ನಾಡು ಸುವರ್ಣ ಮಹೋತ್ಸವದ ಸಂಭ್ರಮ ಎಲ್ಲೆಡೆ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಸುವರ್ಣ ಸಂಭ್ರಮಕ್ಕೆ ಶ್ರಮಿಸಿದಂತಹ ಮಹನೀಯರನ್ನು ಸ್ಮರಿಸಬೇಕು ಎಂದರು.

ಕಾವೇರಿಯಿಂದ ಗೋದಾವರಿವರೆಗಿನ ಕನ್ನಡ ನಾಡು ಹರಿದು ಹಂಚಿಹೋಗಿತ್ತು. ಇಂತಹ ಸಮಯದಲ್ಲಿ ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆಗಳ ಹೋರಾಟದಿಂದ ಕರ್ನಾಟಕವಾಯಿತು. ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಸರ್ಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿವೆ. ಇದಕ್ಕೆ ಪೋಷಕರಾದ ನಾವೇ ಹೊಣೆಗಾರರಾಗುತ್ತಿದ್ದೇವೆ. ಮುಂದೊಂದು ದಿನ ಕನ್ನಡ ಭಾಷೆಯನ್ನು ಹಣ ಕೊಟ್ಟು ಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುವ ಮೊದಲು ಪೋಷಕರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕನ್ನಡ ನಾಡನ್ನು ಕಟ್ಟುವಲ್ಲಿ ಗೋಕಾಕ ಚಳವಳಿ ಮಹತ್ತರವಾದ ಪಾತ್ರ ಪಡೆಯಿತು. ಕನ್ನಡ ನಾಡು- ಭಾಷೆಗೆ ತೊಂದರೆಯಾದಾಗ ಕನ್ನಡಪರ ಸಂಘಟನೆಗಳ ಹೋರಾಟದ ಹಾದಿಯನ್ನು ಹಿಡಿಯುವುದರ ಮೂಲಕ ಕನ್ನಡ ಭಾಷೆ ಉಳಿಯುತ್ತಿದೆ ಎಂದರು.

ಸಮಾರಂಭದಲ್ಲಿ ರೈತರಿಗೆ, ವೀರ ಯೋಧರಿಗೆ, ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ವೈದ್ಯರಿಗೆ, ಹಿರಿಯ ಆಟೋ ಚಾಲಕರಿಗೆ ಸನ್ಮಾನಿಸಲಾಯಿತು.

ಚಾಲಕರ ಸಂಘದ ಅಧ್ಯಕ್ಷ ಎಂ ಗೋಪಾಲ್ ಅಧ್ಯಕ್ಷತೆ ವಹಿಸಿದ್ದು, ಆನಂದಪುರ ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್, ರತ್ನಾಕರ ಹೋನಗೋಡ್ ಮಾಜಿ ಜಿಪಂ ಸದಸ್ಯ, ಆಟೋ ಸಂಘದ ಗೌರವಾಧ್ಯಕ್ಷ ಕೆ.ಗುರುರಾಜ್, ಅನಿತಾಕುಮಾರಿ. ಜಿಪಂ ಮಾಜಿ ಸದಸ್ಯ, ಉದ್ಯಮಿ ಅಶ್ವಿನ್ ಸುಬ್ರಾವ್, ಆನಂದಪುರ ಠಾಣೆಯ ಪಿಎಸ್ಐ ಯುವರಾಜ್ ಕಂಬಳಿ, ಯಡೇಹಳ್ಳಿ ಗ್ರಾಪಂ ಅಧ್ಯಕ್ಷೆ ರೇಣುಕಾ ದಿನೇಶ್, ಆಚಾಪುರ ಗ್ರಾಪಂ ಅಧ್ಯಕ್ಷ ಕಲೀಂಉಲ್ಲಾ ಖಾನ್, ಸೋಮಶೇಖರ್ ಲಾವಿಗೆರೆ ಮಾಜಿ ಅಧ್ಯಕ್ಷ ತಾಪಂ ಸಾಗರ, ಕನ್ನಡ ಸಂಘದ ಅಧ್ಯಕ್ಷ ಜಫ್ರುಲ್ಲಾ, ಮುಖಂಡ ಲಿಂಗರಾಜ್ ಉಪಸ್ಥಿತರಿದ್ದರು.

- - - -25ಎಎನ್‌ಪಿ01:

ಆನಂದಪುರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೈತರಿಗೆ ಹಾಗೂ ವೀರ ಯೋಧರಿಗೆ ಸನ್ಮಾನಿಸಲಾಯಿತು.