ಸಾರಾಂಶ
ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳರಾಜ್ಯದ ರೈತರ ಬೆಳೆ ಕಾಪಾಡುವ ಉದ್ದೇಶದಿಂದ ಕಾಲುವೆ ಮೂಲಕವೇ ನಿಮ್ಮ ಪಾಲಿನ ನೀರನ್ನು ಪಡೆಯಿರಿ ಎಂದು ರಾಜ್ಯ ಸರ್ಕಾರಮ ಮಾಡಿಕೊಂಡ ಮನವಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ತೋರದೇ, ರಾಜ್ಯದ ರೈತರ ಬಗ್ಗೆ ಕರುಣೆಯನ್ನೂ ತೋರದ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ನದಿ ಮೂಲಕವೇ ಶನಿವಾರದಿಂದ ನೀರು ಹರಿಸಿಕೊಳ್ಳಲು ಆರಂಭಿಸಿದ್ದು ತಮ್ಮ ಮೊಂಡು ಹಠವನ್ನು ಮುಂದುವರಿಸಿವೆ.ತುಂಗಭದ್ರಾ ಜಲಾಶಯದಲ್ಲಿ ಈಗ ಇರುವುದೇ ಕೇವಲ 16 ಟಿಎಂಸಿ ನೀರು. ಇದರಲ್ಲಿ ಆಂಧ್ರ, ತೆಲಂಗಾಣ ರಾಜ್ಯದ ಪಾಲು 4 ಟಿಎಂಸಿ. ಈ ನಾಲ್ಕು ಟಿಎಂಸಿ ನೀರನ್ನು ಬಲದಂಡೆ ಮೇಲ್ಮಟ್ಟದ ಕಾಲುವೆ ಮೂಲಕ ಹರಿಸಿಕೊಂಡರೆ ಕಾಲುವೆ ವ್ಯಾಪ್ತಿಯ ಬಳ್ಳಾರಿ ಜಿಲ್ಲೆಯ ರೈತರ ಒಂದು ಲಕ್ಷ ಎಕರೆ ಪ್ರದೇಶದ ಬೆಳೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಕಾಲುವೆಯ ಮೂಲಕವೇ ನೀರು ಹರಿಸಿಕೊಳ್ಳಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿದರೂ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳು ಒಪ್ಪುತ್ತಿಲ್ಲ.ರೈತರಲ್ಲಿ ಆತಂಕ: ಜಲಾಶಯದಲ್ಲಿ ಈಗ 16 ಟಿಎಂಸಿ ನೀರು ಇದ್ದು, ಇದರಲ್ಲಿ ಆಂಧ್ರದ ಪಾಲು 4 ಟಿಎಂಸಿ ಇದೆ. ಉಳಿದ 12 ಟಿಎಂಸಿಯಲ್ಲಿ 3 ಟಿಎಂಸಿ ಕುಡಿಯುವ ನೀರಿಗೆ, 2 ಟಿಎಂಸಿ ಜಲಚರ ಪ್ರಾಣಿಗಳಿಗಾಗಿ ಡೆಡ್ ಸ್ಟೋರೇಜ್ ಇದೆ. ಹಾಗೆಯೇ ನ.30ರವರೆಗೂ ಎಡದಂತೆ ನಾಲೆಗೆ 5 ಟಿಎಂಸಿ ಬಳಕೆಯಾಗುತ್ತದೆ. ಇದರಲ್ಲಿ 2-3 ಟಿಎಂಸಿ ನೀರು ಆವಿಯಾಗುವ ಸಾಧ್ಯತೆ ಇದೆ. ಈ ಲೆಕ್ಕಾಚಾರದ ಪ್ರಕಾರ ರಾಜ್ಯದ ರೈತರಿಗೆ ನ.30ರ ನಂತರ ಹನಿ ನೀರೂ ಸಿಗುವುದಿಲ್ಲ. ಜತೆಗೆ ರಾಯ ಬಸವಣ್ಣ ಕಾಲುವೆಗೆ 11 ತಿಂಗಳು ನೀರು ಪೂರೈಕೆ ಮಾಡಬೇಕು. ಇನ್ನು ಬಳ್ಳಾರಿ ಜಿಲ್ಲೆಯ ರೈತರಿಗಾಗಿ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನೀರು ಹರಿಸುವುದು ನ.25ರಂದು ಸ್ಥಗಿತವಾಗುತ್ತದೆ. ಅಲ್ಲಿಯೂ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ನದಿ ಮೂಲಕ ಏಕೆ?: ಆಂಧ್ರ, ತೆಲಂಗಾಣ ರಾಜ್ಯಕ್ಕೆ ತುಂಗಭದ್ರಾ ಜಲಾಶಯದ ಬಲದಂಡೆ ಕಾಲುವೆ ಮೂಲಕ ನೀರು ಹರಿಸಲಾಗುತ್ತದೆ. ಇಲ್ಲಿಯ ಬಲದಂಡೆ ಮೇಲ್ಮಟ್ಟದ ಕಾಲುವೆ ಮೂಲಕ ರಾಜ್ಯದ ಬಳ್ಳಾರಿ ಜಿಲ್ಲೆಯ ರೈತರು ಸುಮಾರು ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಾರೆ. ಬಲದಂಡೆ ಕಾಲುವೆ ಮೂಲಕವೇ ನೀರು ಹರಿಸಿಕೊಂಡರೆ ಈ ಕಾಲುವೆ ಮೂಲಕ ಬಳ್ಳಾರಿ ಜಿಲ್ಲೆಯ ರೈತರಿಗೆ ಬೇಕಾಗುವ ಅಲ್ವಸ್ವಲ್ಪ ನೀರು ಬಿಡಲು ಅನುಕೂಲವಾಗುತ್ತದೆ. ಆದರೆ, ಆಂಧ್ರ, ತೆಲಂಗಾಣ ರಾಜ್ಯಗಳು ಕಾಲುವೆ ಮೂಲಕ ಹರಿಸಿಕೊಳ್ಳುವ ಬದಲಾಗಿ ನೇರವಾಗಿ ನದಿ ಮೂಲಕ ಬಳಕೆ ಮಾಡಿಕೊಳ್ಳುತ್ತವೆ. ಇದುದೇ ರಾಜ್ಯಕ್ಕೆ ದೊಡ್ಡ ಸಮಸ್ಯೆಯಾಗುತ್ತಿದೆ.
ಕ್ರಮ: ರಾಜ್ಯದ ರೈತರ ಹಿತ ಕಾಯಲು ಅಗತ್ಯ ಕ್ರಮ ವಹಿಸಿದ್ದು, ರಾಜ್ಯದ ರೈತರ ಬೆಳೆ ಒಣಗದಂತೆ ನೋಡಿಕೊಳ್ಳಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎನ್ನುತ್ತಾರೆ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ.ಅನಿವಾರ್ಯ: ನೀರಿನ ಅಭಾವ ಇದ್ದರೂ ನದಿ ಮೂಲಕ ಬಿಡುವುದು ಅನಿವಾರ್ಯವಾಗಿದೆ. ಅವರ ಕೋಟಾ ಅವರು ಪಡೆಯುತ್ತಿದ್ದಾರೆ. ಹೀಗಾಗಿ, ಸರ್ಕಾರ ಪ್ರಯತ್ನಿಸಿದರೂ ಆಂಧ್ರ, ತೆಲಂಗಾಣ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿ ಹೇಳಿದ್ದಾರೆ.