ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಬಿಕ್ಕೋಡು ಸಮೀಪ ಶಾಸಕ ಎಚ್.ಕೆ.ಸುರೇಶ್ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ್ ನೇತೃತ್ವದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಕಾಡಾನೆಗಳ ಉಪಟಳದಿಂದ ಬೆಳೆ ನಷ್ಟ ಸಂಭವಿಸುತ್ತಿರುವುದಲ್ಲದೆ ಪ್ರಾಣ ಹಾನಿಯೂ ಸಹ ಸಂಭವಿಸಿರುವ ಘಟನೆ ನಡೆಯುತ್ತಿದೆ. ಕಾಡಾನೆಗಳ ದಾಂಧಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳ ಉಪಟಳದಿಂದ ರೋಸಿ ಹೋಗಿ ರೈತರು ಪುನಃ -ಪುನಃ ಪ್ರತಿಭಟಿಸಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ತಾಲೂಕಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಪೈಕಿ ೯ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಉದ್ದೇಶದಿಂದ ಸಾಕಾನೆಗಳನ್ನು ಕರೆ ತಂದಿದ್ದು ಆ ಆನೆಗಳಿಗೆ ಶುಕ್ರವಾರ ಬೆಳಗ್ಗೆ ಶಾಸಕ ಎಚ್.ಕೆ.ಸುರೇಶ್ ಹಿರಿಯ ಅಧಕಾರಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಕಾಡಾನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರಿಂದಾಗಿ ಬೆಳೆಗಳಿಗೆ ಸಾಕಷ್ಟು ಹಾನಿಯಾಗುತ್ತಿದೆ. ರೈತರಿಗೆ ಸಾರ್ವಜನಿಕರಿಗೆ ಜೀವ ಹಾನಿ ಮಾಡುತ್ತಿವೆ. ಕಾಡಾನೆಗಳಿಗೆ ಕೇವಲ ರೇಡಿಯೋ ಕಾಲರ್ ಅಳವಡಿಸಿದರೆ ಬರೀ ಮಾಹಿತಿ ಸಿಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಯಾವುದೇ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಬೇಕಿದೆ. ಜತೆಗೆ ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಮೂಲಕ ತಾಲೂಕಿನ ಮಲೆನಾಡು ಭಾಗದ ಬೆಳೆಗಾರರು, ರೈತರು, ಕೂಲಿ ಕಾರ್ಮಿಕರು ನೆಮ್ಮದಿಯಿಂದ ಬದುಕುವಂತಾಗಬೇಕು. ಇದಕ್ಕೆ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.