ಮೂರು ತಿಂಗಳಿಗೇ 50 ಕೆಎಫ್‌ಡಿ ಪ್ರಕರಣ ದಾಖಲು!

| Published : Mar 28 2024, 12:47 AM IST / Updated: Mar 28 2024, 12:48 AM IST

ಸಾರಾಂಶ

ಜಿಲ್ಲೆಯಲ್ಲಿ ಕಳೆದ ವರ್ಷ17 ಕೆಎಫ್‌ಡಿ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಮಾ.27ರವರೆಗೆ 50 ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳ ಅವಧಿಯಲ್ಲೇ ಇಷ್ಟೊಂದು ಪ್ರಕರಣಗಳು ಕಾಣಿಸಿರುವುದು ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಹೆಚ್ಚಿಸಿದೆ. 50 ಪ್ರಕರಣಗಳ ಪೈಕಿ ತೀರ್ಥಹಳ್ಳಿಯಲ್ಲೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ಗಣೇಶ್‌ ತಮ್ಮಡಿಹಳ್ಳಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಲೆನಾಡಿನಲ್ಲಿ ಬಿಸಿಲ ಧಗೆ, ಲೋಕಸಭಾ ಚುನಾವಣೆ ಕಾವಿನ ಮಧ್ಯೆ ಸದ್ದಿಲ್ಲದೆ ಕೆಎಫ್‌ಡಿ ಅರ್ಭಟ ಮುಂದುವರಿದಿದ್ದು, ಸೋಂಕಿತರ ಸಂಖ್ಯೆ ಈಗ ಅರ್ಧ ಶತಕ ಮುಟ್ಟಿದೆ. ಕೊರೋನಾ ಕಾಲದಲ್ಲಿ ತಣ್ಣಗಾಗಿದ್ದ ಕೆಎಫ್‌ಡಿ ಕಾಯಿಲೆ ಈ ವರ್ಷ ಆರಂಭದಲ್ಲೇ ಕಾಡಲಾರಂಭಿಸಿದೆ. ಈ ವರ್ಷದ ಆರಂಭದಲ್ಲೇ ಜಿಲ್ಲೆಯಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿದ್ದು, 2019ರಲ್ಲಿ ಅರಳಗೋಡಿನಲ್ಲಿ ಮರಣ ಮೃದಂಗ ಬಾರಿಸಿದ್ದ ಕೆಎಫ್‌ಡಿ ಮತ್ತೆ ಜಿಲ್ಲೆಯಲ್ಲಿ ಮರುಕಳಿಸಲಿದೆಯೇ ಎಂಬ ಆತಂಕ ಸೃಷ್ಟಿಸಿದೆ.ಕಳೆದ 15 ವರ್ಷದ ಅಂಕಿ ಅಂಶಗಳ ಪ್ರಕಾರ ಮಳೆ ಕಡಿಮೆ ಇರುವ ವರ್ಷಗಳಲ್ಲೇ ಕೆಎಫ್‌ಡಿ ಅಬ್ಬರ ಹೆಚ್ಚಿದೆ. 2019ರಲ್ಲಿ ಸಾಗರ ತಾಲೂಕಿನ ಅರಳಗೋಡಿನಲ್ಲಿ ಕೆಎಫ್‌ಡಿ ಸ್ಫೋಟಗೊಂಡಿತ್ತು. 2018ರ ನವೆಂಬರ್‌ನಿಂದ 2019ರ ಜೂನ್‌ವರೆಗೆ ಅರಳಗೋಡಿನಲ್ಲಿ ಭಾರೀ ಪ್ರಕರಣಗಳು ಕಂಡು ಬಂದಿದ್ದವು. ಅದೇ ವರ್ಷ ಬರೊಬ್ಬರಿ 15 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದರು. 2020ರಲ್ಲೂ 184 ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಮೃತಪಟ್ಟಿದ್ದರು. ಅರ್ಧ ಶತಕ ತಲುಪಿದ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಕಳೆದ ವರ್ಷ17 ಕೆಎಫ್‌ಡಿ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಮಾ.27ರವರೆಗೆ 50 ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳ ಅವಧಿಯಲ್ಲೇ ಇಷ್ಟೊಂದು ಪ್ರಕರಣಗಳು ಕಾಣಿಸಿರುವುದು ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಹೆಚ್ಚಿಸಿದೆ. 50 ಪ್ರಕರಣಗಳ ಪೈಕಿ ತೀರ್ಥಹಳ್ಳಿಯಲ್ಲೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ತೀರ್ಥಹಳ್ಳಿ ತಾಲೂಕು ಕುಚಲು ಗ್ರಾಮದ ಈ ಹಿಂದೆ ಮಂಗಗಳು ಸಾವನ್ನಪ್ಪಿದ್ದವು. ಸತ್ತ ಮಂಗಳಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಹೊರಗಿನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈಚೇಗೆ ಸೋಂಕಿಗೆ ಒಳಗಾಗುತ್ತಿರುವವರಲ್ಲಿ ತೀರ್ಥಹಳ್ಳಿ ತಾಲೂಕು ಮಂದಿಯೇ ಹೆಚ್ಚಿದ್ದಾರೆ. ವ್ಯಾಕ್ಸಿನ್ ಪೂರೈಕೆ ಆಗಿಲ್ಲ:ಕಳೆದ ಎರಡು ವರ್ಷಗಳಿಂದ ಮಂಗನ ಕಾಯಿಲೆ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಕಾಡಂಚಿನ ಜನರಿಗೆ ನೀಡಬೇಕಾದ ವ್ಯಾಕ್ಸಿನ್‌ಗೆ ಆರೋಗ್ಯ ಇಲಾಖೆ ವಿರಾಮ ನೀಡಿರುವುದು ಇದೀಗ ತೀವ್ರ ಚರ್ಚೆಗೆ ಒಳಗಾಗಿದೆ. ಎರಡು ವರ್ಷಗಳಿಂದ ಸಮರ್ಪಕವಾಗಿ ವ್ಯಾಕ್ಸಿನ್ ಪೂರೈಸದಿರುವುದರಿಂದ ಇಲಾಖೆ ವ್ಯಾಕ್ಸಿನ್ ನೀಡದಿರಲು ಕಾರಣ ಎಂಬುದು ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ಒಂದು ಕಡೆ ವ್ಯಾಕ್ಸಿನ್‌ ಕೂಡ ಇಲ್ಲ. ಇನ್ನು ಹಲವು ದಶಕದಿಂದ ಈ ಕಾಯಿಲೆ ಭಾದಿಸುತ್ತಿದ್ದರೂ ಈವರೆಗೆ ಕಾಯಿಲೆಗೆ ನಿರ್ದಿಷ್ಟವಾದ ಮದ್ದು ಕಂಡು ಹಿಡಿಯಲು ಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಕೊರೋನಾಗೆ ಲಸಿಕೆ ಕಂಡು ಹಿಡಿದ ಸರ್ಕಾರಗಳು ಕೆಎಫ್‌ಡಿಗೆ ಮದ್ದು ಕಂಡು ಹಿಡಿಯುತ್ತೇವೆ ಎನ್ನುತ್ತಲ್ಲೇ ದಿನ ದೂಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.ಅಕ್ಕಪಕ್ಕದ ಜಿಲ್ಲೆಗೆ ವಿಸ್ತಾರ; ಚಿಕ್ಕಮಗಳೂರಿನಲ್ಲೇ ಅಧಿಕ ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗಿ ಕೆಎಫ್‌ಡಿ ಸೋಂಕು ಇತ್ತೀಚಿನ ವರ್ಷದಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಗಳಿಗೂ ವಿಸ್ತರಿಸಿದೆ. ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು, ಉಡುಪಿಯಲ್ಲಿ ಕೆಎಫ್‌ಡಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಈ ನಾಲ್ಕು ಜಿಲ್ಲೆಗಳಿಂದ ಈ ವರ್ಷ ಇಲ್ಲಿಯವರೆಗೆ 222 ಮಂದಿ ಕೆಎಫ್‌ಡಿ ಸೋಂಕಿಗೆ ಒಳಗಾಗಿದ್ದಾರೆ. ಬುಧವಾರ ರಾಜ್ಯದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಯಲ್ಲಿ ತಲಾ ಒಂದರಂತೆ ಒಟ್ಟು 3 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಸಾವು ಕಂಡಿದ್ದಾರೆ. ಈವರೆಗೆ 11 ಮಂದಿ ಕೆಎಫ್‌ಡಿ ಸೋಂಕಿಗೆ ಬಲಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಈವರೆಗೆ 91 ಪ್ರಕರಣಗಳು ಕಾಣಿಸಿಕೊಂಡಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 80 ಮಂದಿ ಸೋಂಕಿಗೆ ಒಳಗಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗದಲ್ಲಿ 50 ಮಂದಿಗೆ ಸೋಂಕು ತಗುಲಿದ್ದು, ಒಬ್ಬರು ಸಾವು ಕಂಡಿದ್ದಾರೆ. 2019-2023ರವರೆಗಿನ ಪ್ರಕರಣಗಳು2019ರಲ್ಲಿ ಜಿಲ್ಲೆಯಲ್ಲಿ 341 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 15 ಮಂದಿ ಕೆಎಫ್‌ಡಿಯಿಂದ ಮೃತಪಟ್ಟಿದ್ದು ದೃಢಪಟ್ಟಿತ್ತು. 2020ರಲ್ಲಿ 184 ಪ್ರಕರಣಗಳು ದಾಖಲಾಗಿದ್ದು, 4 ಮಂದಿ ಸಾವನ್ನಪ್ಪಿದ್ದರು. 2021ರಲ್ಲಿ 13 ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಕೆಎಫ್‌ಡಿಗೆ ಬಲಿಯಾಗಿದ್ದರು. 2022ರಲ್ಲಿ 12 ಪ್ರಕರಣಗಳು ದಾಖಲಾಗಿದ್ದು, 2023ರಲ್ಲಿ 14 ಪ್ರಕರಣ ದಾಖಲಾಗಿದ್ದವು.ಕೆಎಫ್‌ಡಿಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಸೋಂಕು ಪತ್ತೆಯಾದ ಗ್ರಾಮಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಜನರೂ ಜ್ವರ ಬಂದ ಕೂಡಲೇ ಆಸ್ಪತ್ರೆಗೆ ಬರುತ್ತಿರುವುದರಿಂದ ಆರಂಭದಲ್ಲೇ ಚಿಕಿತ್ಸೆ ನೀಡಿ ರೋಗವನ್ನು ನಿಯಂತ್ರಣ ಮಾಡಲಾಗುತ್ತಿದೆ. -ಹರ್ಷವರ್ಧನ್‌, ಉಪ ಮುಖ್ಯ ವೈದ್ಯಾಧಿಕಾರಿ, ವಿಡಿಯಲ್‌, ಶಿವಮೊಗ್ಗ