ಸಾರಾಂಶ
ಯಲಬುರ್ಗಾ: ತಾಲೂಕಿನ ೧೨ ಗ್ರಾಮಗಳ ಕೆರೆಗಳಿಗೆ ಕೃಷ್ಣಾ ನದಿ ನೀರು ಹರಿಯುತ್ತಿದ್ದು ಇದೀಗ ಎಲ್ಲ ಕೆರೆಗಳು ಸಂಪೂರ್ಣ ನೀರು ತುಂಬಿಕೊಂಡಿರುವುದರಿಂದ ತಾಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಗಾಣಧಾಳ ಗ್ರಾಮದ ಕೆರೆಗೆ ನೀರು ಭರ್ತಿಯಾದ ಹಿನ್ನೆಲೆಯಲ್ಲಿ ಗಂಗಾಪೂಜೆ ನೆರವೇರಿಸಿ ಮಾತನಾಡಿದರು. ಕುಕನೂರು ಹಾಗೂ ಯಲಬುರ್ಗಾ ತಾಲೂಕಿನ ಕೆರೆಗಳಿಗೆ ಹಗೇದಾಳ ಜಾಕ್‌ವೆಲ್‌ನಲ್ಲಿ ಕೃಷ್ಣಾ ನದಿ ನೀರು ಸಂಗ್ರಹಿಸಿಕೊಡು ಅದರ ಮೂಲಕ ಕೆರೆಗಳಿಗೆ ಹರಿಸಲಾಗುತ್ತಿದೆ. ಕೆರೆಗಳಿಗೆ ನೀರು ಬರುತ್ತಿರುವುದರಿಂದ ರೈತರು ಹಾಗೂ ಜಾನುವಾರುಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ₹೯೭೦ ಕೋಟಿ ಯೋಜನೆಗೆ ಅನುಮೋದನೆ ನೀಡಿದ್ದು, ಮುಂದಿನ ವರ್ಷದಲ್ಲಿ ೩೮ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಅವುಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕೆಲಸ ಪ್ರಾರಂಭಿಸಲಾಗುವುದು. ಈ ಕ್ಷೇತ್ರದ ಜನರು ಮಳೆ ನಂಬಿಕೊಂಡು ಪ್ರತಿವರ್ಷ ಜೀವನ ಸಾಗಿಸುತ್ತಿದ್ದಾರೆ. ತಾಲೂಕಿನಾದ್ಯಂತ ೧೦೦ಕ್ಕೂ ಹೆಚ್ಚು ಎಕರೆಗಳಲ್ಲಿ ಬೃಹತ್ ಕೆರೆಗಳನ್ನು ನಿರ್ಮಿಸಿ ಅವುಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದರೆ ಇದರಿಂದ ನೀರಾವರಿಗಿಂತಲೂ ತಾಲೂಕಿನ ರೈತರ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಳಗೊಂಡು ಇರುವ ಹಳೆ ಬಾವಿಗಳು, ಬೋರ್‌ವೆಲ್‌ಗಳು ರಿಚಾರ್ಜ್ ಆಗಿ ರೈತರು ಶಾಶ್ವತವಾಗಿ ಬದುಕು ಕಟ್ಟಿಕೊಳ್ಳಲು ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್ ಎಇಇ ಚನ್ನಪ್ಪ, ಪಶು ಅಧಿಕಾರಿ ಪ್ರಕಾಶ ಚೂರಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಪ್ರಕಾಶಗೌಡ ಪಾಟೀಲ್, ಸಂಜಯ ಚಿತ್ರಗಾರ, ಮುಖಂಡರಾದ ರಾಘವೇಂದ್ರ ಜೋಶಿ, ಡಾ. ಶಿವನಗೌಡ ದಾನರೆಡ್ಡಿ, ಅಪ್ಪಣ್ಣ ಜೋಶಿ, ಮಲ್ಲಿಕಾರ್ಜುನ ಜಕ್ಕಲಿ, ರುದ್ರಪ್ಪ ಮರಕಟ್, ಬಸವರಾಜ ಹಿರೇಮನಿ, ಆದೇಶ ರೊಟ್ಟಿ, ಹನುಮಂತಪ್ಪ, ಮಂಜುನಾಥ ಸಜ್ಜನ್, ಅಮರೇಶ, ಪ್ರಕಾಶಗೌಡ ಮಾಲಿಪಾಟೀಲ್, ಪ್ರಭು ಬಡಿಗೇರ, ಓಮಣ್ಣ ಚನ್ನದಾಸರ, ಕುಂಟಪ್ಪ ಕಂಬಳಿ, ಪಿಡಿಓ ಸೂರ್ಯಕುಮಾರಿ ಇದ್ದರು.