ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಚಲನಚಿತ್ರ ಬರೀ ಮನರಂಜನೆಯಲ್ಲ. ಅದೊಂದು ಸಮಾಜದಲ್ಲಿ ಬದಲಾವಣೆ ಮತ್ತು ಸುಧಾರಣೆ ತರುವ ಮಾಧ್ಯಮವಾಗಿದೆ. ಆ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಅವರು ಕನ್ನಡ ನಾಡಿನ ಚಲನಚಿತ್ರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಕನ್ನಡಿಗರ ಕಣ್ಮಣಿಯಾಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ತಿಳಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಡಾ.ರಾಜ್ ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಾ.ರಾಜ್‌ಕುಮಾರ್ ಅವರು ಬೇಡರ ಕಣ್ಣಪ್ಪ, ಭಕ್ತ ಕನಕದಾಸ, ರಣಧೀರ ಕಂಠೀರವ, ಸತ್ಯ ಹರಿಶ್ಚಂದ್ರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ, ಭಕ್ತ ಕುಂಬಾರ, ಮಯೂರ, ಬಬ್ರುವಾಹನ, ಭಕ್ತ ಪ್ರಹ್ಲಾದ, ಬಂಗಾರದ ಮುನುಷ್ಯ... ಹೀಗೆ ಹಲವು ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಇದ್ದಾರೆ ಎಂದು ವರ್ಣಿಸಿದರು.ಚಲನಚಿತ್ರ ಕಲಾವಿದರಾದ ನೆರವಂಡ ಉಮೇಶ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರ ತಂದೆ ಪುಟ್ಟಸ್ವಾಮಯ್ಯ ಅವರು ಗುಬ್ಬಿ ವೀರಣ್ಣ ಕಂಪನಿಯಲ್ಲಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಮುತ್ತುರಾಯ ದೇವರ ಭಕ್ತರಾಗಿದ್ದರು. ಆ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಮೂಲ ಹೆಸರು ‘ಮುತ್ತುರಾಜ’ ಆಗಿತ್ತು. ಬೇಡರ ಕಣ್ಣಪ್ಪ ಚಲನಚಿತ್ರ ಸಂದರ್ಭದಲ್ಲಿ ರಾಜ್‌ಕುಮಾರ್ ಎಂದು ಹೆಸರು ಇಟ್ಟು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಾರೆ. ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ನಟನೆ ಮಾಡಿಲ್ಲ ಎಂದು ತಿಳಿಸಿದರು.
ಚಲನಚಿತ್ರ ಬರಹಗಾರರಾದ ಅನಿಲ್ ಎಚ್.ಟಿ ಮಾತನಾಡಿ ಡಾ.ರಾಜ್ ಕುಮಾರ್ ಅವರು ಪೌರಾಣಿಕ, ಸಾಮಾಜಿಕ ಚಲನಚಿತ್ರ ಹಾಗೂ ಹಾಡುಗಾರಿಕೆ ಹೀಗೆ ಚಿತ್ರರಂಗದ ವಿವಿಧ ಕೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು, 200 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ ಹೀಗೆ ಹತ್ತು ಹಲವು ಪ್ರಶಸ್ತಿಗಳು ಡಾ.ರಾಜ್‌ಕುಮಾರ್ ಅವರಿಗೆ ಹುಡುಕಿ ಬಂದವು ಎಂದರು.ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ, ನಿರೂಪಿಸಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಸಹಾಯಕ ನಿರ್ದೇಶಕರಾದ ಕುಮಾರ ವಂದಿಸಿದರು.