ಅಂತೂ ಇಂತೂ ಶುರುವಾಯ್ತು ಬಯೋ ಮೈನಿಂಗ್‌

| Published : Nov 11 2024, 01:01 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ ನಾಗರಿಕರ ಜೀವ ಹಿಂಡುತ್ತಿದ್ದ, ಪಾಲಿಕೆಗೆ ದೊಡ್ಡ ತಲೆನೋವಾಗಿದ್ದ 5 ದಶಕಗಳ ಕಸದ ಬೆಟ್ಟ ಕರಗಿಸುವ ಬಯೋ ಮೈನಿಂಗ್‌ ಕೊನೆಗೂ ಶುರುವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಾಗರಿಕರ ಜೀವ ಹಿಂಡುತ್ತಿದ್ದ, ಪಾಲಿಕೆಗೆ ದೊಡ್ಡ ತಲೆನೋವಾಗಿದ್ದ 5 ದಶಕಗಳ ಕಸದ ಬೆಟ್ಟ ಕರಗಿಸುವ "ಬಯೋ ಮೈನಿಂಗ್‌ " ಕೊನೆಗೂ ಶುರುವಾಗಿದೆ. ಪೂರ್ಣಬೆಟ್ಟ ಕರಗಲು, ಬರೋಬ್ಬರಿ ಒಂದೂವರೆ ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಕರ್ನಾಟಕದಲ್ಲಿ ಹುಬ್ಬಳ್ಳಿ- ಧಾರವಾಡ ಹಾಗೂ ಮೈಸೂರು ಪಾಲಿಕೆಗಳಲ್ಲಿ ಏಕಕಾಲಕ್ಕೆ ಬಯೋಮೈನಿಂಗ್‌ ಪ್ರಾರಂಭವಾಗಿದೆ.

ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಳೆದ 50 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಸಂಗ್ರಹವಾಗುತ್ತಿದ್ದ ಕಸದ ರಾಶಿ ಅಕ್ಷರಶಃ ಬೆಟ್ಟದಂತೆ ಬೆಳೆದಿದೆ. ಹುಬ್ಬಳ್ಳಿಯಲ್ಲಿ ಕಾರವಾರ ರಸ್ತೆಯಲ್ಲಿನ ಬರೋಬ್ಬರಿ 19 ಎಕರೆ ಪ್ರದೇಶದಲ್ಲಿ ಕಸದ ಬೆಟ್ಟ ಬೆಳೆದಿದ್ದರೆ, ಧಾರವಾಡದಲ್ಲಿ ಹೊಸ ಯಲ್ಲಾಪುರದಲ್ಲಿನ 16 ಎಕರೆ ಪ್ರದೇಶದಲ್ಲಿ ಕಸದ ಬೆಟ್ಟ ತಲೆ ಎತ್ತಿದೆ. ಇದರಿಂದ ಆಗುತ್ತಿದ್ದ ಸಮಸ್ಯೆ ಅಷ್ಟಿಷ್ಟಲ್ಲ.

ಪ್ರತಿದಿನ ಕಸದ ಬೆಟ್ಟದೊಳಗೆ ಬೆಂಕಿ ಹತ್ತುತ್ತಿತ್ತು. ಬೆಂಕಿಯ ದಟ್ಟ ಹೊಗೆ, ಸತ್ತ ನಾಯಿ, ಹಂದಿ, ದನಗಳ ದುರ್ನಾತ ಜನರನ್ನು ಸಾಕು ಸಾಕು ಮಾಡಿತ್ತು. ಪರಿಸರ ಸಂಪೂರ್ಣ ಹದಗೆಟ್ಟ ಸುತ್ತಮುತ್ತಲು 2-3 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ದುರ್ನಾತ ಬೀರುತ್ತಿತ್ತು. ಅಕ್ಷರಶಃ ಸಾಂಕ್ರಾಮಿಕ ರೋಗಗಳ ತಾಣವಾಗಿತ್ತು ಈ ಕಸದ ಬೆಟ್ಟ. ಇದಕ್ಕಾಗಿ ಸಾಕಷ್ಟು ಪ್ರತಿಭಟನೆಗಳೆಲ್ಲ ನಡೆದಿದ್ದವು. ಈ ಕಸದ ಬೆಟ್ಟ ಕರಗಿಸುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ 2017ರಲ್ಲೇ ಸೂಚನೆ ಕೂಡ ನೀಡಿದ್ದುಂಟು.

ಯಾವಾಗಿಂದ ಪ್ರಯತ್ನ?

2021ರಲ್ಲಿ ಡಿಪಿಆರ್‌ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಪಾಲಿಕೆ ಕಳುಹಿಸಿತ್ತು. ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು 2023ರಲ್ಲಿ. ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು 2024ರ ಏಪ್ರಿಲ್‌. ಮಳೆಗಾಲ ಇದ್ದಿದ್ದರಿಂದ ಕೆಲಸ ಶುರುವಾಗಿರಲಿಲ್ಲ. ಈಗ್ಗೆ ಹದಿನೈದು ದಿನಗಳ ಹಿಂದೆಯಷ್ಟೇ ಅಂದರೆ ಅಕ್ಟೋಬರ್‌ 15ರಿಂದ ಈಚೆಗೆ ಕೆಲಸ ಶುರುವಾಗಿದೆ.

ಏನೇನು ಮಾಡಲಾಗುತ್ತಿದೆ?

ಬಯೋ ಮೈನಿಂಗ್‌ ಮೂಲಕ ಕಸದ ರಾಶಿಯನ್ನು ಸ್ಟ್ಯಾಬೇಜ್‌ ಮಾಡಲಾಗುತ್ತಿದೆ. ಬಳಿಕ ಅದರಲ್ಲಿನ ಬಯೋ ಅರ್ಥ್ ಅಥವಾ ಬಯೋ ಸ್ವಾಯಿಲ್‌ (ಮಣ್ಣು) ಅನ್ನು ಗಾರ್ಡನ್‌ ಸೇರಿದಂತೆ ವಿವಿಧೆಡೆ ಉಪಯೋಗಿಸಬಹುದಾಗಿದೆ.

ಬಳಿಕ ಆರ್‌ಡಿಎಫ್‌ (ರಿಫ್ಯೂಸ್ ಡಿರೈವ್ಡ್ ಫ್ಯುಯೆಲ್) ರಟ್ಟು, ಕಾಗದ, ಚಪ್ಪಲಿ, ಟೈರ್‌ ಸೇರಿದಂತೆ ಮತ್ತಿತರರ ವಸ್ತುಗಳು ಬೇರ್ಪಟ್ಟು ಬಂದಿರುವ ರಾಶಿಯನ್ನು ಸಿಮೆಂಟ್‌ ಫ್ಯಾಕ್ಟರಿ ಸೇರಿದಂತೆ ಮತ್ತಿತರರೆಡೆ ಉರುವಲುಗಳಂತೆ ಬಳಸಬಹುದಾಗಿದೆ. ಮತ್ತೊಂದು ಇನರ್ಟ್‌ ಎಂಬ ವಸ್ತು ಬರುತ್ತದೆ. ಇದು ಯಾವುದಕ್ಕೂ ಉಪಯೋಗಕ್ಕೆ ಬಾರದ ವಸ್ತು. ಇದನ್ನು ಬರೀ ಕ್ವಾರಿ ಸೇರಿದಂತೆ ತಗ್ಗುಗಳನ್ನು ತುಂಬಲು ಮಾತ್ರ ಬಳಸಬಹುದಾಗಿದೆ. ಇದೀಗ ಈ ಪ್ರಕ್ರಿಯೆ ಇದೀಗಷ್ಟೇ ಪ್ರಾರಂಭವಾಗಿದೆ.

ಎಷ್ಟಿದೆ ಕಸ?

2021ರಲ್ಲಿ ಹುಬ್ಬಳ್ಳಿ 3.6 ಲಕ್ಷ ಮೆಟ್ರಿಕ್‌ ಟನ್‌ ಕಸ ಇತ್ತು ಎಂದು ಅಂದಾಜಿಸಲಾಗಿತ್ತು. ಇದೀಗ ಅದರ ಪ್ರಮಾಣ 5 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕವಾಗಿದ್ದರೆ, ಧಾರವಾಡದಲ್ಲಿನ ಕಸದ ಪ್ರಮಾಣ 2 ಲಕ್ಷ ಮೆ.ಟನ್‌ಗೂ ಅಧಿಕ ಎಂದು ಅಂದಾಜಿಸಲಾಗಿದೆ. ಹುಬ್ಬಳ್ಳಿಯದು ₹22 ಕೋಟಿ, ಧಾರವಾಡದ್ದು ₹7 ಕೋಟಿಗೆ 2025ರ ಜುಲೈವರೆಗೂ ಗುತ್ತಿಗೆ ನೀಡಲಾಗಿದೆ. ಹೀಗಾಗಿ ಕನಿಷ್ಠವೆಂದರೂ 2025ರ ಡಿಸೆಂಬರ್‌ ವರೆಗೆ ಕಸದ ಬೆಟ್ಟ ಪೂರ್ಣವಾಗಿ ಕರಗಬಹುದು ಎಂಬುದು ಪಾಲಿಕೆ ಅಂದಾಜು.

ಒಟ್ಟಿನಲ್ಲಿ ಬಯೋ ಮೈನಿಂಗ್‌ ಶುರುವಾಗಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುತ್ತಿದ್ದಾರೆ. ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾದ ಜವಾಬ್ದಾರಿ ಪಾಲಿಕೆ ಅಧಿಕಾರಿಗಳದ್ದು, ಆ ಕೆಲಸ ಸಮರ್ಪಕವಾಗಿ ನಡೆಯಬೇಕು ಎಂಬುದು ಜನರ ಆಶಯ.

ಬಯೋ ಮೈನಿಂಗ್‌ ಎಂದರೇನು?

ಬಯೋ ಮೈನಿಂಗ್‌ ಎಂದರೆ ಜೈವಿಕ ಗಣಿಗಾರಿಕೆ ಎಂದರ್ಥ. ಸಾಮಾನ್ಯವಾಗಿ ಮಿಶ್ರ ತ್ಯಾಜ್ಯಗಳನ್ನು, ಜೈವಿಕ ವಿಘಟನೀಯ ಮತ್ತು ಜೈವಿಕ ವಿಘಟನೀಯವಲ್ಲದ ಕಸವನ್ನು ಡಂಪ್‌ ಯಾರ್ಡ್‌ನಲ್ಲಿ ಸುರಿಯಲಾಗುತ್ತದೆ. ಯಂತ್ರಗಳ ಸಹಾಯದಿಂದ ಕಸದ ರಾಶಿ ಉತ್ಖನನ ಮಾಡುವುದು. ಕಸವನ್ನು ಜೈವಿಕ ಜೀವಿಗಳು ಅಥವಾ ನೈಸರ್ಗಿಕ ಅಂಶಗಳಾದ ಗಾಳಿ ಮತ್ತು ಸೂರ್ಯನ ಬೆಳಕಿನಿಂದ ಸಂಸ್ಕರಿಸುವ ಮೂಲಕ ತ್ಯಾಜ್ಯದಲ್ಲಿನ ಜೈವಿಕ ವಿಘಟನೆಯ ಅಂಶಗಳು ಕಾಲಾನಂತರದಲ್ಲಿ ಒಡೆಯುತ್ತವೆ. ಇದನ್ನು ಬಯೋ ರೆಮಿಡಿಯೇಶನ್‌ ಮೂಲಕ ಸ್ಥಿರಗೊಳಿಸುವುದು (ಬಯೋರೆಮಿಡಿಯೇಶನ್‌ ಎನ್ನುವುದು ನೀರು, ಮಣ್ಣು ಮತ್ತು ಭೂಗರ್ಭದ ವಸ್ತುಗಳನ್ನು ಒಳಗೊಂಡಂತೆ ಕಲುಷಿತ ಮಾಧ್ಯಮಕ್ಕೆ ಚಿಕಿತ್ಸೆ ನೀಡಲು ಬಳಸುವ ಪ್ರಕ್ರಿಯೆ) ಅಗೆದ ತ್ಯಾಜ್ಯವನ್ನು ಬೇರ್ಪಡಿಸುವುದು. ಇಂಧೋರ್‌ನಲ್ಲಿ ಈ ಬಗೆಯ ವೈಜ್ಞಾನಿಕ ರೀತಿ ಅಳವಡಿಸಿಕೊಂಡು 15 ಲಕ್ಷ ಮೆ.ಟನ್‌ ತ್ಯಾಜ್ಯ ಸ್ವಚ್ಛಗೊಳಿಸಿತ್ತು.

2021ರಲ್ಲಿ ಡಿಪಿಆರ್‌ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ''''ಕನ್ನಡಪ್ರಭ'''' ಇದನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.2025ರೊಳಗೆ ಪೂರ್ಣ

ಹುಬ್ಬಳ್ಳಿ- ಧಾರವಾಡದಲ್ಲಿ ಕಸದ ಬೆಟ್ಟ ಕರಗಿಸಲು ಬಯೋಮೈನಿಂಗ್‌ ಶುರುವಾಗಿದೆ. ಸೂರತ್‌ನ ಡಿ.ಎಚ್‌. ಪಟೇಲ್‌ ಎಂಬ ಏಜೆನ್ಸಿ ಗುತ್ತಿಗೆ ಪಡೆದಿದೆ. 2025ರೊಳಗೆ ಮೈನಿಂಗ್‌ ಪೂರ್ಣವಾಗಲಿದೆ.

ಮಲ್ಲಿಕಾರ್ಜುನ, ಪರಿಸರ ಅಭಿಯಂತರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ