ಕನ್ನಡಪ್ರಭ ವಾರ್ತೆ ಬೆಳಗಾವಿ

ಆರ್‌ಬಿಐ ನಿಯಮ ಉಲ್ಲಂಘಿಸಿ ಸುಮಾರು 35 ಸಾವಿರ ಜನರಿಂದ ಸಾವಿರಾರು ಕೋಟಿ ಠೇವಣಿ ಸಂಗ್ರಹಿಸಿದ ಆರೋಪದ ಹಿನ್ನೆಲೆಯಲ್ಲಿ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣವರನನ್ನು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.

ಉಪವಿಭಾಗಾಧಿಕಾರಿ ಶ್ರವಣ ನಾಯಿಕ ನೇತೃತ್ವದಲ್ಲಿ ಕಂದಾಯ, ಸಹಕಾರ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ಶಿವಾನಂದ ನೀಲಣ್ಣವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿತ್ತು. ಈ ಪರಿಶೀಲನೆ ಮಧ್ಯರಾತ್ರಿವರೆಗೂ ಮುಂದುವರಿದಿತ್ತು. ಶುಕ್ರವಾರವೂ ದಿನಪೂರ್ತಿ ದಾಖಲೆಗಳ ಪರಿಶೀಲನೆ ನಡೆದ ಬಳಿಕ ರಾತ್ರಿ 8 ಗಂಟೆಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಎಸಿಪಿ ಸತ್ಯ ನಾಯಿಕ ಹಾಗೂ ಸಿಪಿಐ ಬಿ.ಆರ್.ಗಡ್ಡೇಕರ್ ನೇತೃತ್ವದಲ್ಲಿ ರಾತ್ರಿ 10.35ರ ಸುಮಾರಿಗೆ ಶಿವಾನಂದನನ್ನು ಬಂಧಿಸಲಾಯಿತು.

ಎಫ್‌ಐಆರ್‌ನಲ್ಲಿ ಏನಿದೆ?:

ಬಡ್ಸ್ ಆ್ಯಕ್ಟ್ ಸೆಕ್ಷನ್ 21 ಹಾಗೂ ಕೆಪಿಐಡಿ ಕಾಯ್ದೆ ಸೆಕ್ಷನ್ 9 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಸೂಚನೆಯಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಬಿವುಲ್ಲಾ.ಕೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. 2016ರಲ್ಲಿ ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸಂಸ್ಥೆ ಆರಂಭಿಸಿ, ಯಾವುದೇ ಪರವಾನಗಿ ಪಡೆಯದೇ ಹಾಗೂ ಕಾನೂನುಬದ್ಧ ನಿಯಮಗಳನ್ನು ಪಾಲಿಸದೇ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಚಿನ ಬಡ್ಡಿ, ಲಾಭದ ಆಮಿಷವೊಡ್ಡಿ ಸಾವಿರಾರು ಕೋಟಿ ರುಪಾಯಿ ಹಣ ಸಂಗ್ರಹಿಸಿ, ಅದರ ಒಂದು ಭಾಗವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಉಳಿದ ಹಣವನ್ನು ವೈಯಕ್ತಿಕವಾಗಿ ಬಳಸಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.


ಶಿವಾನಂದ ನೀಲಣ್ಣವರ ಅಕ್ಯೂಮೆನ್ ಎಂಬ ಆ್ಯಪ್ ಅಭಿವೃದ್ಧಿಪಡಿಸಿ ಅದರ ಮೂಲಕ ಜನರಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಆ್ಯಪ್ ಮೂಲಕವೇ ಸುಮಾರು 35 ಸಾವಿರ ಜನರಿಂದ ಸಾವಿರಾರು ಕೋಟಿ ರುಪಾಯಿ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದೆ.

ಆರ್‌ಬಿಐ ಮಾರ್ಗಸೂಚಿಗಳ ಉಲ್ಲಂಘನೆ:

ಜಿಲ್ಲಾಧಿಕಾರಿ ನಿರ್ದೇಶನದಂತೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಗೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದ್ದೇವೆ. ತನಿಖೆಯಲ್ಲಿ ಆರ್‌ಬಿಐ ಮಾರ್ಗಸೂಚಿ ಉಲ್ಲಂಘನೆ ನಡೆದಿರುವುದು ಕಂಡುಬಂದಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆಯಂತೆ ಎಫ್‌ಐಆರ್ ದಾಖಲಾಗಿದ್ದು, ಶಿವಾನಂದ ನೀಲಣ್ಣವರನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ ಸುದ್ದಿಗಾರರಿಗೆ ತಿಳಿಸಿದರು.

ಠೇವಣಿದಾರರಿಂದ ಯಾವುದೇ ಅಧಿಕೃತ ದೂರು ಬಂದಿಲ್ಲ. ಆದರೆ, ಗುಪ್ತಚರ ವಿಭಾಗದ ಮಾಹಿತಿಯ ಆಧಾರದ ಮೇಲೆ ತನಿಖೆ ಆರಂಭಿಸಲಾಗಿದೆ. ಲೋನ್ ರೂಪದಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಇಷ್ಟೊಂದು ದೊಡ್ಡ ಆರೋಪ ಕೇಳಿಬಂದಿದ್ದರೂ ಇದುವರೆಗೆ ಹಣ ಹೂಡಿಕೆ ಮಾಡಿದ ಯಾವುದೇ ವ್ಯಕ್ತಿ ಅಧಿಕೃತವಾಗಿ ದೂರು ನೀಡದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.------------

ಕೋಟ್‌....

ಓಂ ನಮಃ ಶಿವಾಯ… ಎಲ್ಲರಿಗೂ ಒಳ್ಳೆಯದಾಗಲಿ, ಖುಷಿ ಸಿಗಲಿ. ಭಾರತದ ಜನತೆಗೆ ಒಳ್ಳೆಯದಾಗಲಿ. ಕೋಟ್ಯಂತರ ರೂಪಾಯಿ ವಂಚನೆ ಆರೋಪ ಸತ್ಯವೋ ಸುಳ್ಳೋ ನನಗೆ ಗೊತ್ತಿಲ್ಲ.

- ಶಿವಾನಂದ ನೀಲಣ್ಣವರ, ಬಂಧಿತ ಆರೋಪಿ