ಮಲ್ಲಿಕಾರ್ಜುನ ದೇಗುಲದ ರಥ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವೆ: ತುರ್ವಿಹಾಳ
KannadaprabhaNewsNetwork | Published : Oct 16 2023, 01:45 AM IST
ಮಲ್ಲಿಕಾರ್ಜುನ ದೇಗುಲದ ರಥ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವೆ: ತುರ್ವಿಹಾಳ
ಸಾರಾಂಶ
ಮಲ್ಲಿಕಾರ್ಜುನ ದೇಗುಲದ ರಥ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವೆ: ತುರ್ವಿಹಾಳ
ಮಸ್ಕಿಯಲ್ಲಿ ನಿರ್ಮಾಣ ಹಂತದ ನೂತನ ರಥ ಪರಿಶೀಲಿಸಿದ ಶಾಸಕರು ಮಸ್ಕಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ರಥ 150 ವರ್ಷಗಳಷ್ಟು ಹಳೆಯದಾದ ಕಾರಣ ಭಕ್ತರು ರು.1.30 ಕೋಟಿ ವೆಚ್ಚದಲ್ಲಿ ನೂತನ ರಥ ನಿರ್ಮಾಣಕ್ಕೆ ಮುಂದಾಗಿದ್ದು ಅದಕ್ಕೆ ಆರ್ಥಿಕ ಸಹಾಯ ಸೇರಿದಂತೆ ಎಲ್ಲಾ ಸಹಕಾರ ನೀಡುವುದಾಗಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಭರವಸೆ ನೀಡಿದರು. ಪಟ್ಟಣದಲ್ಲಿ ನೂತನ ರಥ ನಿರ್ಮಾಣದ ಕಾರ್ಯ ಪರಿಶೀಲಿಸಿ ಮಾತನಾಡಿದ ಅವರು, ನೂತನ ರಥದ ಕಾರ್ಯ ಬರದಿಂದ ಸಾಗಿದ್ದು, ಶೇ.70ರಷ್ಟು ಪೂರ್ಣಗೊಂಡಿದೆ. ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಖ್ಯಾತ ಶಿಲ್ಪಿ ಯಲ್ಲಪ್ಪ ಆಚಾರ ಮತ್ತು ಅವರ ಸಹಶಿಲ್ಪಿಗಳು ಕಳೆದು ನಾಲ್ಕೈದು ತಿಂಗಳಿನಿಂದ ರಥ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು. ಸಂಪೂರ್ಣ ಸಾಗವಾನಿ ಕಟ್ಟಿಗೆಯಲ್ಲಿ ವಿವಿಧ ಕಲಾಕೃತಿಯೊಂದಿಗೆ ನಿರ್ಮಾಣವಾಗುತ್ತಿರುವ ರಥದ ಎತ್ತರ 39 ಅಡಿ ಇರಲಿದ್ದು, ನೂತನ ತಂತ್ರಜ್ಞಾನ ಹೊಂದಿರಲಿದೆ ಎಂದು ಹೇಳಿದರು. ಮುಂದಿನ ವರ್ಷದ ಜಾತ್ರೆ ಪ್ರಯುಕ್ತ ನೂತನ ರಥ ಭಕ್ತರಿಗೆ ಸಮರ್ಪಣೆಯಾಗಲಿದೆ. ನೂತನ ರಥವು 1.30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಮಸ್ಕಿ ತಾಲೂಕು ಸೇರಿ ಜಿಲ್ಲೆ ವಿವಿಧೆಡೆ ಇರುವ ಭಕ್ತರು ದೇಣಿಗೆ ನೀಡುವ ಮೂಲಕ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ರಥ ನಿರ್ಮಾಣ ಸಮಿತಿ ಸದಸ್ಯರಾದ ಮಲ್ಲಪ್ಪ ಕುಡತಿನಿ, ಸಿದ್ಧಲಿಂಗಯ್ಯ ಗಚ್ಚಿನಮಠ, ಲಕ್ಷ್ಮೀನಾರಾಯಣ ಶೆಟ್ಟಿ, ಮುಖಂಡ ಮಲ್ಲನಗೌಡ ಗುಂಡಾ, ಶ್ರೀಶೈಲಪ್ಪ ಬ್ಯಾಳಿ ಇತರರು ಇದ್ದರು.