ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 3ನೇ ಮತ್ತು 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಪರ ಜಿಲ್ಲಾಧಿಕಾರ ಅಶೋಕ ತೇಲಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 3ನೇ ಮತ್ತು 4ನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಪರ ಜಿಲ್ಲಾಧಿಕಾರ ಅಶೋಕ ತೇಲಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆಯಲ್ಲಿ ಬಾಲನ್ಯಾಯ ಕಾಯ್ದೆ-2015ಗೆ ಸಂಬಂಧಿಸಿದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಜಿಲ್ಲಾ ತನಿಖಾ ಸಮಿತಿ, ಮಕ್ಕಳ ಸಲಹಾ ಮಂಡಳಿಯ ಪ್ರಗತಿ ಪರಿಶೀಲಿಸಲಾಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ವೀಣಾ ಎಂ. ಮಾತನಾಡಿ, ಎಚ್.ಐ.ವಿ ಸೋಂಕಿತ ಮತ್ತು ಬಾಧಿತ ಮಕ್ಕಳಿಗೆ ಪೌಷ್ಟಿಕ ಆಹಾರ, ವೈದ್ಯಕೀಯ ವೆಚ್ಚ ಹಾಗೂ ಇತರೆ ವೆಚ್ಚಕ್ಕಾಗಿ ಪ್ರತಿ ಮಾಹೆ ₹2000 ಗಳಂತೆ ಡಿಬಿಟಿ ಮೂಲಕ ಆರ್ಥಿಕ ಸಹಾಯಧನ ನೀಡಲಾಗುತ್ತಿದ್ದು, 2025-26ನೇ ಸಾಲಿನ ಒಟ್ಟು 2025-26ನೇ ಸಾಲಿನ ಒಟ್ಟು 356 ಮಕ್ಕಳಿಗೆ ಆರ್ಥಿಕ ಸೌಲಭ್ಯ ನೀಡಲಾಗಿದೆ ಎಂದು ಎಂದು ತಿಳಿಸಿದರು.ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ ಮಕ್ಕಳು, ಅನಾಥ, ಏಕಪೋಷಕ, ಜೈಲಿನಲ್ಲಿರುವ ಪಾಲಕರ ಮಕ್ಕಳಿಗೆ ಹಾಗೂ ಇತರೆ ಮಕ್ಕಳಿಗೆ ಕುಟುಂಬದ ವಾತಾವರಣದಲ್ಲಿ ಬೆಳೆಯಲು ಹಾಗೂ ವಿದ್ಯಾಭ್ಯಾಸ ಮುಂದುವರಿಸಲು ಪ್ರತಿ ಮಾಹೆ 4 ಸಾವಿರದಂತೆ ಡಿಬಿಟಿ ಮೂಲಕ ಪ್ರಾಯೋಜಕತ್ವ ಯೋಜನೆಯಡಿ ಆರ್ಥಿಕ ಸಹಾಯಧನ ನೀಡಲಾಗುವುದು. 2025-26ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ಒಟ್ಟು 169 ಮಕ್ಕಳಿಗೆ ಆರ್ಥಿಕ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು. 427 ಮಕ್ಕಳಿಗೆ ಅನುದಾನ ಬೇಡಿಕೆಗೆ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. 2026-27ನೇ ಸಾಲಿಗೆ 324 ಮಕ್ಕಳನ್ನು ಸಭೆಯಲ್ಲಿ ಅನುಮೋದಿಸಲಾಯಿತು.
ಈ ತ್ರೈಮಾಸಿಕದಲ್ಲಿ ಒಟ್ಟು 58 ತರಬೇತಿ ಹಾಗೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದಾಗ, ಇದಕ್ಕೆ ಅಪರ ಜಿಲ್ಲಾಧಿಕಾರಿಗಳು ಪ್ರಾಢಶಾಲಾ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು. ಪೋಷಕತ್ವ ಕಾರ್ಯಕ್ರಮದಡಿ ಮಕ್ಕಳನ್ನು ತಾತ್ಕಾಲಿಕವಾಗಿ ಕುಟುಂಬ ವಾತಾವರಣದಲ್ಲಿ ಬೆಳೆಸುವ ಉದ್ದೇಶ ಒಟ್ಟು 2 ಮಕ್ಕಳನ್ನು ಪೋಷಕತ್ವದಡಿಯಲ್ಲಿ ನೀಡಲಾಗಿದೆ. ಪ್ರತಿ ತ್ರೈಮಾಸಿಕಕ್ಕೊಮ್ಮೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯಿಂದ ಅನುಸರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಪೋಕ್ಸೋ ಕಾಯ್ದೆ-2012, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಅಭಯಾ ನಿಧಿ ಯೋಜನೆಯಡಿ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಧನ ಒದಗಿಸಲಾಗುವುದು. 3 ಮತ್ತು 4ನೇ ತ್ರೈಮಾಸಿಕದಲ್ಲಿ ಒಟ್ಟು 28 ಮಕ್ಕಳಿಗೆ ಸಹಾಯಧನ ನೀಡಲಾಗಿದೆ ಎಂದು ತಿಳಿಳಿಸಿದರು.
ಬಾಲ ನ್ಯಾಯಮಂಡಳಿ ಸದಸ್ಯೆ ಸುವರ್ಣಾ ನಾಗಠಾಣ ಬಾಲನ್ಯಾಯ ಮಂಡಳಿ ಮುಂದೆ ದಾಖಲಾದ ಪ್ರಕರಣಗಳ ಬಗ್ಗೆ ವಿವರಿಸಿ, ಒಟ್ಟು 40 ಪ್ರಕರಣಗಳು ಬಾಕಿ ಇವೆ ಎಂದು ಸಭೆಗೆ ತಿಳಿಸಿದಾಗ ಬಾಕಿ ಉಳಿಯಲು ಕಾರಣವೇನೆಂದು ಅಪರ ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು. ಚಾರ್ಜ್ ಶೀಟ್ ಸಲ್ಲಿಕೆಯಾಗದಿರುವ ಕಾರಣ ಬಾಕಿ ಉಳಿದಿವೆ ಎಂದು ತಿಳಿಸಿದರು.18 ವರ್ಷ ಪೂರ್ಣಗೊಂಡು ಮಕ್ಕಳ ಪಾಲನಾ ಸಂಸ್ಥೆಗಳಿಂದ ಬಿಡುಗಡೆಯಾದ ಮಕ್ಕಳಿಗೆ ಉನ್ನತ ವ್ಯಾಸಂಗ ಅಥವಾ ವೃತ್ತಿ ತರಬೇತಿ ಪಡೆಯಲು ಪ್ರತಿ ಮಾಹೆ ₹5 ಸಾವಿರದಂತೆ ಕನಿಷ್ಠ 3 ವರ್ಷಗಳ ಕಾಲ ಡಿಬಿಟಿ ಮೂಲಕ ಆರ್ಥಿಕ ಸಹಾಯಧನ ನೀಡಲಾಗುವುದು. 3 ಮತ್ತು 4ನೇ ತ್ರೈಮಾಸಿಕದಲ್ಲಿ ಒಟ್ಟು 10 ಮಕ್ಕಳಿಗೆ ಆರ್ಥಿಕ ಸಹಾಯಧನ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು. ಅಪರ ಜಿಲ್ಲಾಧಿಕಾರಿಗಳು ಮಕ್ಕಳ ಪೂರ್ಣ ವಿಳಾಸ, ವಿದ್ಯಾಭ್ಯಾಸದ ವಿವರ ಸಲ್ಲಿಸಲು ತಿಳಿಸಿದರು.
ಕೊರೊನಾಗೆ ತುತ್ತಾಗಿ ತಂದೆ-ತಾಯಿ ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳಿಗೆ ವಿಸ್ತೃತ ಕುಟುಂಬದ ಆರೈಕೆಯಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು ₹3,500 ರಂತೆ ಡಿಬಿಟಿ ಮೂಲಕ ಆರ್ಥಿಕ ಸಹಾಯಧನ ನೀಡಲಾಗುವುದು. ಒಟ್ಟು 2 ಮಕ್ಕಳಿಗೆ ಆರ್ಥಿಕ ಸಹಾಯಧನ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು. ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಭೆಗೆ ವಿವರಿಸಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಒಟ್ಟು 123 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 74 ಪ್ರಕರಣಗಳು ಬಾಕಿ ಇವೆ. ಮಕ್ಕಳ ಸಹಾಯವಾಣಿಗೆ ಒಟ್ಟು 275 ಪ್ರಕರಣಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ ಡಿ, ಜಿಲ್ಲಾ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಹಿರೇಮಠ ಸೇರಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.