ಸಾರಾಂಶ
ಹೊಸಪೇಟೆ: ಕಲ್ಯಾಣ ಕರ್ನಾಟಕದಲ್ಲಿ 52 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಸರ್ಕಾರಿ ಸ್ಯಾಟ್ಸ್‌ನಲ್ಲಿ ಈ ಮಕ್ಕಳು ಇನ್ನೂ ದಾಖಲಾಗಿಲ್ಲ. ಈ ಪೈಕಿ ವಿಜಯನಗರ ಜಿಲ್ಲೆಯಲ್ಲೇ 10,040 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಮಕ್ಕಳನ್ನು ಆದಷ್ಟು ಬೇಗ ಪತ್ತೆ ಹಚ್ಚಿ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಡಿಡಿಪಿಐಗೆ ಸೂಚಿಸಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯ ಮಾಡಬೇಕು. ಶಿಕ್ಷಣ ಇಲಾಖೆ ಸಲ್ಲಿಸಿದ ವರದಿಯಲ್ಲೇ 10 ಸಾವಿರಕ್ಕೂ ಅಧಿಕ ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಆದರೆ, ನೀವು ನೀಡುತ್ತಿರುವ ಸಂಖ್ಯೆಗೂ, ಇಲಾಖೆ ಬಳಿ ಇರುವ ದಾಖಲೆಗೂ ತಾಳೆಯಾಗುತ್ತಿಲ್ಲ. ಹಾಗಾಗಿ ಕೂಡಲೇ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೂಡಲೇ ಕ್ರಮವಹಿಸಬೇಕು ಎಂದರು.ಡಿಡಿಪಿಐ ಯುವರಾಜ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ 158 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಾಲಾ ಹಂತದಲ್ಲೇ ಜಾಗೃತಿ ಮೂಡಿಸಿ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋಸಂಬೆ ಅವರು, ಶಾಲೆಯಿಂದಲೇ 10 ಸಾವಿರ ಮಕ್ಕಳು ಹೊರಗುಳಿದಿದ್ದಾರೆ. ಸ್ಯಾಟ್ಸ್‌ನಿಂದ ಈ ಮಕ್ಕಳು ನಾಪತ್ತೆಯಾಗಿದ್ದಾರೆ. ಹಾಗಾಗಿ ಈ ಮಕ್ಕಳನ್ನು ಪತ್ತೆ ಹಚ್ಚಿ ಮೊದಲು, ಅಂಕಿಸಂಖ್ಯೆಗಳನ್ನು ತಪ್ಪಾಗಿ ನೀಡಬಾರದು. ಮೊದಲು ಸಂಬಂಧಿಸಿದ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಈ ಮಕ್ಕಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯಲಿ ಎಂದರು.ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಿ: ಹೂವಿನಹಡಗಲಿಯ ಅಲ್ಪಸಂಖ್ಯಾತ ಇಲಾಖೆಯಡಿಯ ಕಾಲೇಜಿನ ಹಾಸ್ಟೆಲ್ ಮಕ್ಕಳು ಶೌಚಾಲಯ ಇಲ್ಲದೇ ಬಯಲು ಶೌಚಾಲಯ ಆಶ್ರಯಿಸಿದ್ದಾರೆ. ಈ ಮಕ್ಕಳಿಗೆ ಕೂಡಲೇ ಶೌಚಾಲಯ ವ್ಯವಸ್ಥೆ ಮಾಡಬೇಕು. ಗುಣಮಟ್ಟದ ಆಹಾರ ನೀಡಿಲ್ಲ. ಕಳೆದ 50 ದಿನಗಳಿಂದ ಹಾಸ್ಟೆಲ್ ವಾರ್ಡನ್ ಸಹಿ ಮಾಡಿಲ್ಲ. ಹಾಗಾಗಿ ಈ ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಇಲಾಖೆಯ ಅಧಿಕಾರಿಗೆ ಸೂಚಿಸಿದರು.
ಹಡಗಲಿ ಟಿಎಚ್‌ಒ ವಿರುದ್ಧ ಕ್ರಮ ವಹಿಸಿ:ಹೂವಿನಹಡಗಲಿ ಆಸ್ಪತ್ರೆಯ ನವಜಾತ ಶಿಶು ಆರೋಗ್ಯ ಘಟಕದಲ್ಲಿ ಎಸಿ ಇಲ್ಲ. ನವಜಾತ ಶಿಶು ಆರೋಗ್ಯಕ್ಕೆ ಮೂಲ ಸೌಕರ್ಯ ಇಲ್ಲದಾಗಿದೆ. ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಯಬೇಕು. ಈ ಕೂಡಲೇ ಟಿಎಚ್‌ಒ ವಿರುದ್ಧ ಕ್ರಮ ವಹಿಸಬೇಕು ಎಂದು ಡಿಎಚ್‌ಒ ಡಾ. ಎಲ್.ಆರ್. ಶಂಕರ ನಾಯ್ಕ ಅವರಿಗೆ ಸೂಚಿಸಿದರು.
4000 ಮಕ್ಕಳಲ್ಲಿ ಅಪೌಷ್ಟಿಕತೆ: ಜಿಲ್ಲೆಯಲ್ಲಿ 4000 ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಈ ಮಕ್ಕಳನ್ನು ಅಪೌಷ್ಟಿಕತೆಯಿಂದ ಹೊರತರಲು ಕ್ರಮ ಕೈಗೊಳ್ಳಬೇಕು. ಡಿಎಂಎಫ್, ಕೆಎಂಇಆರ್‌ಸಿ ಸೇರಿದಂತೆ ಹಲವು ವಿಶೇಷ ಅನುದಾನ ಜಿಲ್ಲೆಗೆ ಇದೆ. ಈ ಅನುದಾನ ಬಳಸಿಕೊಂಡು ಸಮನ್ವಯ ಸಾಧಿಸಿ, ಅಪೌಷ್ಟಿಕತೆ ಹೋಗಲಾಡಿಸಬೇಕು. ಇಲ್ಲದಿದ್ದರೆ, ಆಯೋಗವೇ ಸುಮೋಟೋ ಕೇಸ್ ದಾಖಲಿಸಲಿದೆ ಎಂದರು.ಮೊದಲು ಶಿಶು ಮರಣ, ತಾಯಿ ಮರಣದ ಕುರಿತು ಸರಿಯಾಗಿ ಅಂಕಿಸಂಖ್ಯೆ ಹೇಳಬೇಕು, ಈ ವರ್ಷ ಶಿಶುಮರಣ 57, ತಾಯಿ ಮರಣ ನಾಲ್ಕು ಎಂದು ಹೇಳುತ್ತೀರಿ, ಕಳೆದ ಐದು ವರ್ಷದ ದಾಖಲೆ ನಿಮ್ಮಲ್ಲಿ ಇಲ್ಲ. ಕೂಡಲೇ ಅಂದಾಜು ಹೇಳುವ ಪರಿಪಾಠ ಬಿಡಬೇಕು ಎಂದು ಆರ್ ಸಿಎಚ್ಒ ಡಾ. ಬಿ. ಜಂಬಯ್ಯಗೆ ಸೂಚಿಸಿದರು.ಸಭೆಯಲ್ಲಿ ಜಿಪಂ ಸಿಇಒ ಸದಾಶಿವಪ್ರಭು ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಜಿ., ಹೆಚ್ಚುವರಿ ಎಸ್ಪಿ ಸಲೀಂ ಪಾಷಾ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ವೇತಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ಸುಭದ್ರಾದೇವಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವಾರಕ್ಕೊಮ್ಮೆ ಚಪಾತಿ ನೀಡುವ ಪರಿಪಾಠ ನಿಲ್ಲಲಿಹರಪನಹಳ್ಳಿ ಕಸ್ತೂರಬಾ ವಸತಿಶಾಲೆಯಲ್ಲಿ ವಾರಕ್ಕೊಮ್ಮೆ ಚಪಾತಿ ನೀಡಲಾಗುತ್ತಿದೆ. ಮುದ್ದೆ ನೀಡುವ ಬದಲಿಗೆ ಮಕ್ಕಳಿಗೆ ಚಪಾತಿ ಕೂಡ ನಿಲ್ಲಲಿ. ಇಲಾಖೆ ಮೆನುವಿನಂತೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಬಿಇಒ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಿಲ್ಲೆಯ ಹಾಸ್ಟೆಲ್‌ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ತಾಕೀತು ಮಾಡಿದರು.