ಸಾರಾಂಶ
ರಸ್ತೆ ಸುರಕ್ಷತಾ ಸಮಿತಿಯು ಸಭೆಯ ನಡಾವಳಿಯನ್ನು ಕೇಂದ್ರ ಕಚೇರಿಗೆ ಅಥವಾ ಸರ್ಕಾರಕ್ಕೆ ಕಳುಹಿಸುವಾಗ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ, ಸರ್ವಿಸ್ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣದ ಉಳಿದ ಕೆಲಸಗಳು, ರಸ್ತೆಯಲ್ಲಿ ಬೇಕಿರುವ ಹೆಚ್ಚುವರಿ ಸಂಚಾರಿ ನಿಯಮ ಫಲಕಗಳ ಬಗ್ಗೆ ನಮೂದಿಸಿ ಕಳುಹಿಸಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 4 ರಿಂದ 5 ಕೋಟಿ ರು.ವರೆಗೆ ದಂಡ ವಿಧಿಸಲಾಗಿದೆ. ಆದರೆ, 60 ರಿಂದ 70 ಸಾವಿರ ರು. ಮಾತ್ರ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಬೇಸರದಿಂದ ನುಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈಗಿರುವ ವ್ಯವಸ್ಥೆಯೊಳಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಂಡ ಸಂಗ್ರಹ ಮಾಡುವುದು ಕಷ್ಟಕರವಾಗಿದೆ. ಹೊಸ ವಿಧಾನಗಳನ್ನು ಅಳವಡಿಸುವ ಅವಶ್ಯಕತೆ ಇದೆ. ಆ ಬಗ್ಗೆ ಚಿಂತಿಸಿ ದಂಡ ವಸೂಲಿಗೆ ನೂತನ ಕ್ರಮ ಅನುಸರಿಸಬೇಕಿದೆ ಎಂದರು.
ಸಂಚಾರಿ ನಿಯಮ ಉಲ್ಲಂಘನೆಯಿಂದ ಸಂಗ್ರಹವಾಗುವ ದಂಡದ ಹಣವನ್ನು ರಸ್ತೆ ಸುರಕ್ಷತಾ ಸಮಿತಿ ರೂಪಿಸುವ ಕಾಮಗಾರಿಗಳಿಗೆ ವೆಚ್ಚ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ರಸ್ತೆ ಸುರಕ್ಷತಾ ಸಮಿತಿಯು ಸಭೆಯ ನಡಾವಳಿಯನ್ನು ಕೇಂದ್ರ ಕಚೇರಿಗೆ ಅಥವಾ ಸರ್ಕಾರಕ್ಕೆ ಕಳುಹಿಸುವಾಗ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಂಡರ್ ಪಾಸ್ ನಿರ್ಮಾಣ, ಸರ್ವಿಸ್ ರಸ್ತೆಯಲ್ಲಿ ಒಳಚರಂಡಿ ನಿರ್ಮಾಣದ ಉಳಿದ ಕೆಲಸಗಳು, ರಸ್ತೆಯಲ್ಲಿ ಬೇಕಿರುವ ಹೆಚ್ಚುವರಿ ಸಂಚಾರಿ ನಿಯಮ ಫಲಕಗಳ ಬಗ್ಗೆ ನಮೂದಿಸಿ ಕಳುಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಅಪಘಾತ ಸಂಭವಿಸುವ ವಲಯಗಳಲ್ಲಿ ಸಂಚಾರಿ ನಿಯಮದ ಬೋರ್ಡ್‌ಗಳ ಅಳವಡಿಕೆ, ಸಿಗ್ನಲ್ ಲೈಟ್ ಗಳ ದುರಸ್ತಿ, ನಿರ್ವಹಣೆ ಹಾಗೂ ಅಳವಡಿಕೆ, ಸಿ.ಸಿ.ಟಿವಿ ಅಳವಡಿಕೆಗೆ ಸಂಬಂಧಿಸಿದಂತೆ ಯೋಜನೆ ಸಿದ್ಧಪಡಿಸಿದ್ದು, ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹರ್ಷ, ಕೆ.ಎಸ್.ಆರ್.ಟಿ.ಸಿ ಜಿಲ್ಲಾ ನಿಯಂತ್ರಕ ನಾಗರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಉಪಸ್ಥಿತರಿದ್ದರು.