ಸಾರಾಂಶ
ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಬಾಕಿ ಇರುವ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿಗೆ ಮೊದಲ ದಿನವೇ ರಾಜಧಾನಿಯಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದೇ ದಿನದಲ್ಲಿ 1.48 ಲಕ್ಷ ಪ್ರಕರಣಗಳು ವಿಲೇವಾರಿಯಾಗಿದ್ದು, 4.18 ಕೋಟಿ ರು. ದಂಡ ವಸೂಲಿ ಆಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಲ್ಲಿ ಬಾಕಿ ಇರುವ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿಗೆ ಮೊದಲ ದಿನವೇ ರಾಜಧಾನಿಯಲ್ಲಿ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದೇ ದಿನದಲ್ಲಿ 1.48 ಲಕ್ಷ ಪ್ರಕರಣಗಳು ವಿಲೇವಾರಿಯಾಗಿದ್ದು, 4.18 ಕೋಟಿ ರು. ದಂಡ ವಸೂಲಿ ಆಗಿದೆ.ಸಂಚಾರ ನಿಯಮ ಉಲ್ಲಂಘನೆಯ ಹಳೇ ಪ್ರಕರಣಗಳಲ್ಲಿ ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಲು ಸೆ.19 ವರೆಗೆ ದಂಡ ಪಾವತಿಗೆ ಸರ್ಕಾರ ಶೇ,50 ರಷ್ಟು ರಿಯಾಯಿತಿ ನೀಡಿದೆ. ಈ ರಿಯಾಯಿತಿ ಅವದಿ ಶನಿವಾರದಿಂದ ಆರಂಭವಾಗಿದ್ದು, ಮೊದಲ ದಿನವೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಗರ ಜಂಟಿ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಮೊದಲ ದಿನ 1,48,747 ಪ್ರಕರಣಗಳಲ್ಲಿ 4,18,20,500 ರು. ದಂಡ ಸಂಗ್ರಹವಾಗಿದೆ. ಈ ಚಲನ್ ರಿಯಾಯಿತಿಯನ್ನು ನಾಗರಿಕರು ಸದುಪಯೋಪಡಿಸಿಕೊಂಡು ಪ್ರಕರಣ ವಿಲೇವಾರಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.ದಂಡ ಪಾವತಿ ಎಲ್ಲೆಲ್ಲಿ?
ದಂಡ ಪಾವತಿಗೆ ನಾಗರಿಕರಿಗೆ ಪೊಲೀಸರು ಅವಕಾಶ ಕಲ್ಪಿಸಿದ್ದಾರೆ. ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್, ಬೆಂಗಳೂರು ಪೊಲೀಸರ ಬಿಟಿಪಿ ಆಸ್ತ್ರಂ ಆ್ಯಪ್, ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್ ಸೈಟ್‌ನಲ್ಲಿ ಸಹ ದಂಡ ಪಾವತಿಸಬಹುದು. ಅಲ್ಲದೆ ಸ್ಥಳೀಯ ಸಂಚಾರ ಠಾಣೆ ಹಾಗೂ ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ)ದಲ್ಲಿ ಕೂಡ ವಾಹನ ನೋಂದಣಿ ಸಂಖ್ಯೆ ಪರಿಶೀಲಿಸಿ ಮಾಹಿತಿ ಪಡೆದು ದಂಡ ಪಾವತಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.3 ಕೋಟಿ ಕೇಸ್, 1 ಸಾವಿರ ಕೋಟಿ ದಂಡ ಬಾಕಿ
ಕಳೆದ ಏಳು ವರ್ಷಗಳ ಅವಧಿಯಲ್ಲಿ ನಗರದಲ್ಲಿ ಸುಮಾರು ಮೂರು ಕೋಟಿ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ 1 ಸಾವಿರ ಕೋಟಿ ದಂಡ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.2019ರಿಂದ 2025 (ಆಗಸ್ಟ್)ವರೆಗೆ ಮಾತ್ರ ಪ್ರಕರಣಗಳನ್ನು ಲೆಕ್ಕ ಹಾಕಲಾಗಿದೆ. ಇದರಲ್ಲಿ ಮೂರು ಕೋಟಿ ಪ್ರಕರಣಗಳು ಪತ್ತೆಯಾಗಿದೆ. ಈಗ ರಿಯಾಯಿತಿಯನ್ನು ಸದ್ಬಳಕೆ ಮಾಡಿಕೊಂಡು ಹಳೇ ಪ್ರಕರಣಗಳಲ್ಲಿ ದಂಡ ಪಾವತಿಸಿ ಇತ್ಯರ್ಥಪಡಿಸಿಕೊಳ್ಳಬೇಕು. ಕಳೆದ ಬಾರಿ ಸಹ ರಿಯಾಯಿತಿ ನೀಡಿದಾಗ ಕೋಟಿಗೂ ಮಿಗಿಲಾದ ಪ್ರಕರಣಗಳು ವಿಲೇವಾರಿ ಆಗಿದ್ದವು ಎಂದು ತಿಳಿಸಿದ್ದಾರೆ.