19ವರ್ಷದ ಯುವಕನ ಮದುವೆಯಾದ ಯುವತಿ ವಿರುದ್ಧ ಎಫ್‌ಐಆರ್

| N/A | Published : Sep 21 2025, 02:00 AM IST / Updated: Sep 21 2025, 09:27 AM IST

legal rights in marriage that every women should know before going to knot

ಸಾರಾಂಶ

ಅಪ್ರಾಪ್ತೆಯನ್ನು ಮದುವೆಯಾಗುವ ಯುವಕನ ವಿರುದ್ಧ ಪ್ರಕರಣ ದಾಖಲಾಗುವುದು ಸಾಮಾನ್ಯ. ಆದರೆ, ಮದುವೆಯ ವಯಸ್ಸಿಗೆ ಬಾರದ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ವಿರುದ್ಧ ಪ್ರಕರಣ ದಾಖಲು ಮಾಡಿರುವ ಅಪರೂಪದ ಘಟನೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ರಾಮನಗರ: ಅಪ್ರಾಪ್ತೆಯನ್ನು ಮದುವೆಯಾಗುವ ಯುವಕನ ವಿರುದ್ಧ ಪ್ರಕರಣ ದಾಖಲಾಗುವುದು ಸಾಮಾನ್ಯ. ಆದರೆ, ಮದುವೆಯ ವಯಸ್ಸಿಗೆ ಬಾರದ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ವಿರುದ್ಧ ಪ್ರಕರಣ ದಾಖಲು ಮಾಡಿರುವ ಅಪರೂಪದ ಘಟನೆ ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಜು.11ರಂದು ಮಾಗಡಿ ತಾಲೂಕಿನ ಆಲೂರು ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸೋಮನತ್ತನಹಳ್ಳಿ ಗ್ರಾಮದ ಸೌಮ್ಯ(19) ,ಇದೇ ತಾಲೂಕಿನ ವಸಂತಕುಮಾರ್(19)ನನ್ನು ವಿವಾಹವಾಗಿದ್ದರು.

ಆದರೆ, ಬಾಲ್ಯವಿವಾಹ ನಿಷೇಧ ಕಾಯಿದೆ- 2006ರ ಪ್ರಕಾರ ಮದುವೆಯಾಗಲು ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ತುಂಬಿರಬೇಕು. ಈ ಪ್ರಕರಣದಲ್ಲಿ ಯುವಕನಿಗೆ 19 ವರ್ಷ ವಯಸ್ಸು ತುಂಬದ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನನ್ನು ವಿವಾಹವಾಗಿರುವುದಾಗಿ ಯುವತಿ ಹಾಗೂ ಇವರ ಮದುವೆಗೆ ಅವಕಾಶ ಮಾಡಿಕೊಟ್ಟ ಆಲೂರು ಚೌಡೇಶ್ವರಿ ದೇವಾಲಯದ ಅರ್ಚಕನ ವಿರುದ್ಧ ಮಾಗಡಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುದೂರು ಪೊಲೀಸ್‌ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಘಟನೆಯ ವಿವರ:

ಚನ್ನರಾಯಪಟ್ಟಣ ತಾಲೂಕಿನ ಅಕ್ಕಪಕ್ಕದ ಗ್ರಾಮದವರಾದ ಸೌಮ್ಯ ಮತ್ತು ವಸಂತಕುಮಾರ್ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಸೌಮ್ಯಳಿಗೆ ಅವರ ಮನೆಯವರು ಬೇರೆ ಹುಡುಗನನ್ನು ಹುಡುಕಿ ಮದುವೆ ನಿಗದಿ ಮಾಡಿದ್ದರಿಂದ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದ ಈ ಇಬ್ಬರು ಪ್ರೇಮಿಗಳು ಮದುವೆಯಾಗಲು ನಿರ್ಧರಿಸಿ 11-7-2025ರಂದು ಮಾಗಡಿ ತಾಲೂಕು ಕುದೂರು ಹೋಬಳಿಯ ಆಲೂರು ಚೌಡೇಶ್ವರಿ ದೇವಾಲಯದಲ್ಲಿ ವಿವಾಹವಾಗಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಹಾಸನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದಾಗ ಇವರಿಬ್ಬರು ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಕಾನೂನು ಪ್ರಕಾರ ಯುವಕನಿಗೆ ಮದುವೆಯ ವಯಸ್ಸು ಆಗದ ಹಿನ್ನೆಲೆಯಲ್ಲಿ ಈಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಮಾಗಡಿ ತಾಲೂಕು ಶಿಶುಅಭಿವೃದ್ಧಿ ಯೋಜನಾಧಿಕಾರಿಗೆ ನೋಟೀಸ್ ಜಾರಿಮಾಡಿದ್ದಾರೆ.

ಹಾಸನ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದಿಂದ ರವಾನೆಯಾದ ದಾಖಲೆಗಳು ಹಾಗೂ ಮದುವೆಯಾಗಿದ್ದ ದೇವಾಲಯಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಇವರಿಬ್ಬರು ಮದುವೆಯಾಗಿರುವುದು ಹಾಗೂ ಯುವಕ ಅಪ್ರಾಪ್ತನಾಗಿರುವುದು ಖಚಿತವಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕುದೂರು ಪೊಲೀಸರು ತನಿಖೆ ವಿಚಾರಣೆ ಕೈಗೊಂಡಿದ್ದಾರೆ.

Read more Articles on