ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ: ಶಾಸಕ ಕಾಮತ್ ವಿರುದ್ಧ ಎಫ್ಐಆರ್

| Published : Mar 04 2025, 12:36 AM IST

ಸಾರಾಂಶ

ಬ್ರಹ್ಮಕಲಶೋತ್ಸವದ ಸ್ವಯಂ ಸೇವಕನಾಗಿದ್ದ ಕಾಂಗ್ರೆಸ್ ಕಾರ್ಯಕರ್ತನ ‘ಕೈ ಕಾಲು ಮುರಿಯಿರಿ’ ಎಂದು ದುಷ್ಪ್ರೇರಣೆ ನೀಡಿದ ಆರೋಪದ ಮೇಲೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಶಕ್ತಿನಗರದಲ್ಲಿ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವದ ಸ್ವಯಂ ಸೇವಕನಾಗಿದ್ದ ಕಾಂಗ್ರೆಸ್ ಕಾರ್ಯಕರ್ತನ ‘ಕೈ ಕಾಲು ಮುರಿಯಿರಿ’ ಎಂದು ದುಷ್ಪ್ರೇರಣೆ ನೀಡಿದ ಆರೋಪದ ಮೇಲೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಪದವು ಶಕ್ತಿನಗರದ ಶ್ರೀಕೃಷ್ಣ ಭಜನಾ ಮಂದಿರದ ಬ್ರಹ್ಮಕಲಶೋತ್ಸವದಲ್ಲಿ ಭಾನುವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ.

ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ, ಸ್ಥಳೀಯ ಮುಖಂಡ ಯಶವಂತ ಪ್ರಭು ಎಂಬವರು ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿದ್ದರು. ಭಾನುವಾರ ರಾತ್ರಿ ನಡೆದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ಯಶವಂತ ಪ್ರಭು, ಆಶಾಲತಾ, ದಯಾನಂದ ನಾಯ್ಕ್ ಅವರನ್ನು ಉದ್ದೇಶಿಸಿ, ‘ದೇವಸ್ಥಾನಕ್ಕೆ ಕಲ್ಲು ಹೊಡೆಯುವ ನಿಮಗೆ ಇಲ್ಲೇನು ಕೆಲಸ’ ಎಂದು ಕೇಳಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಶಾಸಕರ ಈ ಹೇಳಿಕೆಯ ಕುರಿತಾಗಿ ಪ್ರಶ್ನಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರಾದ ಅಶ್ವಿತ್‌ ಕೊಟ್ಟಾರಿ, ಮಣಿ, ಜಯಪ್ರಕಾಶ್‌ ಹಾಗೂ ಇತರ ಏಳೆಂಟು ಮಂದಿ ಸೇರಿಕೊಂಡು ಯಶವಂತ ಪ್ರಭು ಅವರೆ ತಲೆ ಮತ್ತು ಕಾಲಿಗೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು, ಅಂಗಿ ಹರಿದು ಜೀವಬೆದರಿಕೆ ಹಾಕಿದ್ದಾರೆ. ಈ ಸಂದರ್ಭ ಸ್ಥಳದಲ್ಲಿದ್ದ ಶಾಸಕ ವೇದವ್ಯಾಸ ಕಾಮತ್ ಅವರು ಆರೋಪಿಗಳಿಗೆ ‘ಆತನ ಕೈಕಾಲು ಮುರಿಯಿರಿ’ ಎಂದು ದುಷ್ಪ್ರೇರಣೆ ನೀಡಿದ್ದಾರೆ ಎಂದು ಎಫ್ಐಆರ್‌ನಲ್ಲಿ ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ ಆರೋಪದ ಮೇಲೆ ಅಶ್ವಿತ್ ಕೊಟ್ಟಾರಿ, ಮಣಿ, ಜಯಪ್ರಕಾಶ್, ದುಷ್ಪ್ರೇರಣೆ ನೀಡಿದ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರತಿದೂರು ದಾಖಲು: ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಕಾರ್ಯಕರ್ತ ಯಶವಂತ ಪ್ರಭು ಮೇಲೆ ಪ್ರತಿದೂರು ದಾಖಲಾಗಿದೆ. ಘಟನೆಯ ಸಂದರ್ಭ ತನ್ನ ಮೇಲೆ ಹಲ್ಲೆ ಮತ್ತು ಜಾತಿ ನಿಂದನೆ ಮಾಡಲಾಗಿದೆ ಎಂದು ಮಣಿ ಎಂಬ ವ್ಯಕ್ತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.