ಹೋಟೆಲ್‌ವೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗರಬಾವಿಯ ಮಾಳಗಾಳದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೋಟೆಲ್‌ವೊಂದರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗರಬಾವಿಯ ಮಾಳಗಾಳದಲ್ಲಿ ನಡೆದಿದೆ.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ರಾಜಕುಮಾರ್‌ (45) ಮೃತಪಟ್ಟ ಕಾರ್ಮಿಕ. ಗಾಯಗೊಂಡು ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ಮಾಳಗಾಳ ಸಮೀಪದಲ್ಲಿರುವ ದುರ್ಗಾಶ್ರೀ ಗ್ರ್ಯಾಂಡ್‌ ರೆಸ್ಟೋರೆಂಟ್‌ನ ನೆಲ ಮಹಡಿಯಲ್ಲಿ ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮೊದಲನೆ ಮಹಡಿಯಲ್ಲಿ ಮಲಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದು ಸುಮಾರು 2 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

ಒಬ್ಬ ಸಾವು, ನಾಲ್ವರಿಗೆ ಗಾಯ:

ಅಗ್ನಿ ಅವಘಡ ಸಂಬಂಧಿಸಿದ ವೇಳೆ ಹೋಟೆಲ್‌ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮೊದಲನೇ ಮಹಡಿಯಲ್ಲಿ ಗಾಢ ನಿದ್ರೆಯದ್ದರು. ಬೆಂಕಿಯ ಜ್ವಾಲೆಗಳು ಜೋರಾಗಿ ಮೊದಲನೆ ಮಹಡಿಗೂ ವ್ಯಾಪಿಸಿದ್ದಲ್ಲದೆ, ದಟ್ಟ ಹೊಗೆ ಆವರಿಸಿತ್ತು. ಇದರಿಂದಾಗಿ ಕಾರ್ಮಿಕರು ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿದ್ದರು. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರು ಕಿಟಕಿಗಳ ಗಾಜುಗಳನ್ನು ಒಡೆದು ಕಾರ್ಮಿಕರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪೈಕಿ ಅತಿಯಾದ ಹೊಗೆ ಸೇವನೆಯಿಂದಾಗಿ ಅಸ್ವಸ್ಥರಾಗಿದ್ದ ರಾಜ್‌ಕುಮಾರ್‌ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಜೈಭೀಮ್‌, ಶಿವಾನಂದ್‌, ಸತೀಶ್‌ ಸೇರಿ ಮತ್ತೊಬ್ಬ ಕಾರ್ಮಿಕ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಹೋಟೆಲ್‌ನ ಲಕ್ಷಾಂತರ ರು.

ಮೌಲ್ಯದ ವಸ್ತುಗಳು ನಷ್ಟ

ಪೀಠೋಪಕರಣಗಳು, ರೆಫ್ರಿಜರೇಟರ್‌ಗಳು, ಓವನ್‌ಗಳು, ಟೇಬಲ್‌ಗಳು, ಫ್ಯಾನ್‌ಗಳು ಸೇರಿ ಇತರೆ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಹೋಟೆಲ್‌ ವಿಶ್ವನಾಥ್‌ ಎಂಬುವರಿಗೆ ಸೇರಿದ್ದಾಗಿದ್ದು, ಸುಮಾರು 12 ವರ್ಷದಿಂದ ಹೋಟೆಲ್‌ ನಡೆಸುತ್ತಿದ್ದರು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಕಾಣಿಸಿಕೊಂಡಿರುವುದು ಪ್ರಾಥಮಿಕ ತನಿಖೆ ವೇಳೆ ಕಂಡು ಬಂದಿದೆ. ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು, ಸೋಕೋ ಟೀಂನವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ನಿರ್ಲಕ್ಷ್ಯ ತೋರಿದ ಆರೋಪದ ಮೇರೆಗೆ ಹೋಟೆಲ್‌ ಮಾಲೀಕರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.