ಶ್ರೀ ಕಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ಅಳವಡಿಸಿದ್ದ ತ್ರಿಶೂಲ ಹಿಡಿದು ನಿಂತಿರುವ ಭಂಗಿಯ ಶಿವನ ಚಿತ್ರದ ಫ್ಲೆಕ್ಸ್‌ಗೆ ಶುಕ್ರವಾರ ತಡರಾತ್ರಿ ಅನ್ಯಧರ್ಮೀಯ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಶನಿವಾರ ಬೆಳಗ್ಗೆಯಿಂದಲೇ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾದ ಘಟನೆ ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿ ಗ್ರಾಮದಲ್ಲಿ ನಡೆದಿದೆ.

- ಸಾಸ್ವೇಹಳ್ಳಿ ಸಾಮರಸ್ಯಕ್ಕೆ ಕೊಳ್ಳಿಯಿಟ್ಟ ಮತಾಂಧರ ವಿರುದ್ಧ ಕಠಿಣ ಕ್ರಮಕ್ಕೆ ಪಟ್ಟು । ಮಾಜಿ ಸಚಿವ ರೇಣುಕಾಚಾರ್ಯ ಭೇಟಿ

- - - - ಬಂಧಿತ, ಆತನ ಸಹಚರರು ಮಾದಕ ವ್ಯಸನಿಗಳೆಂದು ದಾರಿ ತಪ್ಪಿಸುವ ಯತ್ನಕ್ಕೆ ಕಿಡಿ - ಅನ್ಯ ಧರ್ಮೀಯರು ಅಗಸಿ ಬಾಗಿಲಿಗೆ ಅಳವಡಿಸಿದ್ದ ಧ್ವಜ, ಕಂಬ ತೆರವಿಗೂ ಪಟ್ಟು

- ಮಾಜಿ ಸಚಿವ ರೇಣುಕಾಚಾರ್ಯ ಭೇಟಿ, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ತಾಕೀತು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಕಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಅಂಗವಾಗಿ ಅಳವಡಿಸಿದ್ದ ತ್ರಿಶೂಲ ಹಿಡಿದು ನಿಂತಿರುವ ಭಂಗಿಯ ಶಿವನ ಚಿತ್ರದ ಫ್ಲೆಕ್ಸ್‌ಗೆ ಶುಕ್ರವಾರ ತಡರಾತ್ರಿ ಅನ್ಯಧರ್ಮೀಯ ಕೆಲ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಶನಿವಾರ ಬೆಳಗ್ಗೆಯಿಂದಲೇ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾದ ಘಟನೆ ಹೊನ್ನಾಳಿ ತಾಲೂಕು ಸಾಸ್ವೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಾಸ್ವೇಹಳ್ಳಿಯ ಶ್ರೀ ಕಲ್ಲೇಶ್ವರ ಸ್ವಾಮಿ ಕಾರ್ತಿಕೋತ್ಸವ ಡಿ.8ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶ್ರೀ ಶಿವನ ಫ್ಲೆಕ್ಸ್‌ ಗ್ರಾಮದಲ್ಲಿ ಅಳವಡಿಸಲಾಗಿತ್ತು. ಕಳೆದ ತಡರಾತ್ರಿ ಅನ್ಯ ಧರ್ಮೀಯರಾದ ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ಶಿವನ ಚಿತ್ರದ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ್ದಾರೆ.

ಹಿಂದೂಗಳ ಆರಾಧ್ಯ ದೈವ ಶ್ರೀ ಶಿವನ ಫ್ಲೆಕ್ಸ್‌ನ ಚಿತ್ರಕ್ಕೆ ಕಳೆದ ರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಶಿವನ ಚಿತ್ರದ ಬಲಗಾಲಿನಿಂದ ಬಲಗೈ, ಬಲ ಎದೆ ಭಾಗದವರೆಗಿನ ಚಿತ್ರವು ಸುಟ್ಟಿದೆ. ಶನಿವಾರ ಬೆಳಗ್ಗೆ ವಿಷಯ ಗೊತ್ತಾಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರಿಗೆ ಸೇರಿದರು. ಅಲ್ಲದೇ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಶಿವು ಹುಡೇದ ಸೇರಿದಂತೆ ಅನೇಕರು ಸಹ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಈ ಕುರಿತು 112 ಪೊಲೀಸ್ ಸಹಾಯವಾಣಿ ಹಾಗೂ ಹೊನ್ನಾಳಿ ಪೊಲೀಸರಿಗೆ ಗ್ರಾಮಸ್ಥರು ವಿಷಯ ಮುಟ್ಟಿಸಿದರು.

ಸ್ಥಳಕ್ಕೆ ಧಾವಿಸಿದ ರೇಣುಕಾಚಾರ್ಯ ಇತರರು ಶಿವನ ಚಿತ್ರಕ್ಕೆ ಬೆಂಕಿ ಇಟ್ಟು, ಸಾಮರಸ್ಯ ಕದಡಲು ಯತ್ನಿಸಿರುವ, ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ದುಷ್ಕರ್ಮಿಗಳು ಯಾರೇ ಆಗಿದ್ದರೂ ತಕ್ಷಣವೇ ಅಂತಹವರನ್ನು ಪತ್ತೆ ಮಾಡಿ, ಬಂಧಿಸಬೇಕು. ಜೊತೆಗೆ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಎಎಸ್‌ಪಿ ಸ್ಯಾಮ್ ವರ್ಗೀಸ್, ಸಿಪಿಐ ಸುನೀಲಕುಮಾರ, ಎಸ್ಐ ಅವರಿಗೆ ಒತ್ತಾಯ ಮಾಡಿದರು.

ರೇಣುಕಾಚಾರ್ಯ, ಹಿಂದು ಮುಖಂಡರು, ಗ್ರಾಮಸ್ಥರು ಫ್ಲೆಕ್ಸ್‌ಗೆ ಬೆಂಕಿ ವಿಚಾರ ಸಂಬಂಧ ಗ್ರಾಮದ ಅನ್ಯಕೋಮಿನ ಮುಖಂಡನ ಜೊತೆಗೆ ವಾಗ್ವಾದಕ್ಕಿಳಿದರು. ಗ್ರಾಮದ ಅಗಸಿ ಬಾಗಿಲಿಗೆ ಹಾಕಿರುವ ಅನ್ಯ ಕೋಮಿನ ಧ್ವಜ ತಕ್ಷಣವೇ ತೆರವುಗೊಳಿಸುವಂತೆ ಪಟ್ಟುಹಿಡಿದರು. ಪೊಲೀಸ್ ಇಲಾಖೆ ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೇ, ಹಿಂದೂಗಳ ಆರಾಧ್ಯ ದೈವ. ಶಿವನ ಭಾವಚಿತ್ರಕ್ಕೆ ಬೆಂಕಿ ಹಚ್ಚಿದವರನ್ನು ಬಂಧಿಸುವಂತೆ ಪಟ್ಟು ಹಿಡಿದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅನ್ಯ ಕೋಮಿನವರು ತಮ್ಮ ಕೋಮಿನ ಧ್ವಜವನ್ನು ತಾವೇ ತೆರವುಗೊಳಿಸಿದರು.

ಶಿವನ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಸುಹೇಲ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಸಹಕರಿಸಿದ ಇತರರ ಹೆಸರನ್ನು ಆರೋಪಿ ಬಾಯಿ ಬಿಟ್ಟಿದ್ದು, ಇತರೆ ಆರೋಪಿಗಳಿಗೂ ಪೊಲೀಸರು ಶೋಧ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

ಗ್ರಾಮಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಪುತ್ರ, ಕಾಂಗ್ರೆಸ್ ಯುವ ಮುಖಂಡ ಭೇಟಿ ನೀಡಿ, ಗ್ರಾಮಸ್ಥರು ಶಾಂತಿ ಕಾಪಾಡಿಕೊಂಡು ಹೋಗುವಂತೆ ಎರಡೂ ಕಡೆಯವರಿಗೆ ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ಡಿ.ಎಸ್.ಸುರೇಂದ್ರಗೌಡ ಮಾತನಾಡಿ, ಸಾಮರಸ್ಯ ಕದಡುವ ಕೆಲಸ ಯಾರೂ ಮಾಡದಂತೆ ಮನವಿ ಮಾಡಿದರು.

- - -

(ಕೋಟ್‌) * ಗಾಂಜಾ ಘಾಟು: ಶಿವನ ಭಾವಚಿತ್ರಕ್ಕೆ ಬೆಂಕಿಹಚ್ಚಿದ ದುಷ್ಕರ್ಮಿಗಳು ಗಾಂಜಾ ಸೇವಿಸುತ್ತಾರೆ. ಕಿಡಿಗೇಡಿಗಳು ಅಂತೆಲ್ಲಾ ಅನ್ಯಕೋಮಿನವರು ಸುದ್ದಿ ಹರಡುವ ಮೂಲಕ ದುಷ್ಕರ್ಮಿಗಳನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಆಗಬೇಕು. ಈಗ ಬಂಧಿತನ ಜೊತೆಗೆ ಆತನ ಜೊತೆಗೆ ಯಾರಿದ್ದಾರೆ, ಯಾರು ಪ್ರಚೋದನೆ ನೀಡಿದ್ದಾರೆಂಬ ಬಗ್ಗೆಯೂ ತನಿಖೆಯಾಗಿ, ಕ್ರಮ ಆಗಬೇಕು.

- ಗ್ರಾಮಸ್ಥರು, ಸಾಸ್ವೇಹಳ್ಳಿ.

- - -

(ಬಾಕ್ಸ್‌) ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಕೋಮು ಸೌಹಾರ್ದ ಎಂಬ ನೆಪದಲ್ಲಿ ಹಿಂದುಗಳನ್ನು ಹತ್ತಿಕ್ಕಲೆಂದೇ ಪ್ರಚೋದನಾಕಾರಿ ಭಾಷಣ, ಕೋಮು ಸಾಮರಸ್ಯ ಪ್ರಚೋದಿಸುವವರಿಗೆ 3 ವರ್ಷ ಕಠಿಣ ಶಿಕ್ಷೆ, ಈ ಕೃತ್ಯವು ಆ ವ್ಯಕ್ತಿಯಿಂದ ಮರುಕಳಿಸಿದರೆ 7 ವರ್ಷ ಕಠಿಣ ಶಿಕ್ಷೆ, ₹1 ಲಕ್ಷ ದಂಡ ವಿಧಿಸುವ ಮಸೂದೆ ಮಂಡಿಸಿದೆ. ಸಾಸ್ವೇಹಳ್ಳಿಯಲ್ಲಿ ಶಿವನ ಚಿತ್ರಕ್ಕೆ ಬೆಂಕಿ ಇಟ್ಟು, ಸಾಮರಸ್ಯ ಕದಡಿದ ಮತಾಂಧರ ವಿರುದ್ಧ ಇದೇ ರೀತಿ ಕಠಿಮ ಕ್ರಮ ಆಗಬೇಕು. ಪೊಲೀಸರು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು.

- ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.

- - -