ಗಿರಿಯಲ್ಲಿ ಬೆಂಕಿ: ಸುಟ್ಟು ಕರಕಲಾದ ಹುಲ್ಲುಗಾವಲು

| Published : Mar 26 2024, 01:03 AM IST

ಸಾರಾಂಶ

ದತ್ತಪೀಠದ ಸಮೀಪದಲ್ಲಿರುವ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಒಣಗಿದ್ದ ಹುಲ್ಲುಗಾವಲು ಸುಟ್ಟು ಕರಕಲಾಯಿತು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದತ್ತಪೀಠದ ಸಮೀಪದಲ್ಲಿರುವ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಒಣಗಿದ್ದ ಹುಲ್ಲುಗಾವಲು ಸುಟ್ಟು ಕರಕಲಾಯಿತು.ಮಧ್ಯಾಹ್ನ ಸುಮಾರು 1.45ರ ವೇಳೆಗೆ ದತ್ತಪೀಠದ ಹೊರ ವಲಯದಲ್ಲಿರುವ ಹೋಮದ ಶೆಡ್‌ನ ಬಳಿ ಗಾಳಿ ಕೆರೆ ಮಾರ್ಗ ದಲ್ಲಿ ಬೆಂಕಿ ಕಾಣಿಸಿಕೊಂಡಿತು. ಗಾಳಿ ಇದ್ದರಿಂದ ಕೂಡಲೇ ಬೆಂಕಿ ಆವರಿಸಿಕೊಂಡಿತು. ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಉರುಸ್‌ ಆಚರಣೆಗಾಗಿ ಮುಸ್ಲಿಂ ಸಮುದಾಯದವರು ದತ್ತಪೀಠಕ್ಕೆ ಆಗಮಿಸಿ ಅಲ್ಲಲ್ಲಿ ತಾತ್ಕಾಲಿಕವಾಗಿ ಶೆಡ್‌ ನಿರ್ಮಿಸುತ್ತಿದ್ದಾರೆ.ಶೆಡ್‌ ನಿರ್ಮಿಸಿರುವ ಪ್ರದೇಶವನ್ನು ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಭಕ್ತರು ಬೇರೆಡೆಗೆ ಸ್ಥಳಾಂತರಗೊಂಡರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿಯ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದ್ದಂತೆ ಆಗ್ನಿ ಶಾಮಕದಳದವರು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು.ಹುಣ್ಣಿಮೆ ಪೂಜೆಗಾಗಿ ದತ್ತಪೀಠಕ್ಕೆ ತೆರಳಿದ್ದ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ ಮುಖಂಡರು ಮಾತನಾಡಿ, ಉರುಸ್‌ ಆಚರಣೆಗೆ ಬರುವವರು ಬೆಟ್ಟದಲ್ಲಿ ಶೆಡ್ ನಿರ್ಮಾಣ ಮಾಡಿ ಅಲ್ಲೇ ಅಡುಗೆ ಮಾಡುತ್ತಿದ್ದಾರೆ. ಹಾಗಾಗಿ ಬೆಂಕಿ ಅವಘಡ ಸಂಭವಿಸುವ ಸಾಧ್ಯತೆ ಇದ್ದರಿಂದ ಶೆಡ್‌ ನಿರ್ಮಾಣಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದೆಂದು ಆಗ್ರಹಿಸಿದರು.ಸ್ಥಳದಲ್ಲಿ ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್‌ ಡಾ. ಸುಮಂತ್‌, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆ ವೃತ್ತ ನಿರೀಕ್ಷಕ ಸಚಿನ್‌ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು. 25 ಕೆಸಿಕೆಎಂ 8ದತ್ತಪೀಠದ ಸಮೀಪದ ಗುಡ್ಡದಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತು.