ಅಗ್ನಿ ದುರಂತ ಆಗದಂತೆ ಪಟಾಕಿ ವ್ಯಾಪಾರಸ್ಥರು ಜಾಗ್ರತೆ ವಹಿಸಲಿ

| Published : Oct 01 2024, 01:19 AM IST / Updated: Oct 01 2024, 01:20 AM IST

ಅಗ್ನಿ ದುರಂತ ಆಗದಂತೆ ಪಟಾಕಿ ವ್ಯಾಪಾರಸ್ಥರು ಜಾಗ್ರತೆ ವಹಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು, ಮೈಸೂರು ಇತರೆಡೆ ಅಗ್ನಿ ಅವಘಡ ಸಂಭವಿಸಿದ್ದು ಕಣ್ಣ ಮುಂದೆಯೇ ಇದೆ. ಪಟಾಕಿ ವ್ಯಾಪಾರಸ್ಥರು ದುಡಿಮೆ ಜೊತೆಗೆ ತಮ್ಮ ಹಾಗೂ ಸಾರ್ವಜನಿಕರ ಸುರಕ್ಷತೆ ಕಡೆಗೂ ಹೆಚ್ಚು ಗಮನ ಹರಿಸಬೇಕು ಎಂದು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬಸ್‌ ನಿಲ್ದಾಣ ತೆರವಾದಲ್ಲಿ ಹೈಸ್ಕೂಲ್ ಮೈದಾನದಲ್ಲೇ ಮಳಿಗೆಗಳ ಸ್ಥಾಪನೆಗೆ ಸಚಿವರಿಂದ ಕ್ರಮ: ದಿನೇಶ ಶೆಟ್ಟಿ ಅಭಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಂಗಳೂರು, ಮೈಸೂರು ಇತರೆಡೆ ಅಗ್ನಿ ಅವಘಡ ಸಂಭವಿಸಿದ್ದು ಕಣ್ಣ ಮುಂದೆಯೇ ಇದೆ. ಪಟಾಕಿ ವ್ಯಾಪಾರಸ್ಥರು ದುಡಿಮೆ ಜೊತೆಗೆ ತಮ್ಮ ಹಾಗೂ ಸಾರ್ವಜನಿಕರ ಸುರಕ್ಷತೆ ಕಡೆಗೂ ಹೆಚ್ಚು ಗಮನ ಹರಿಸಬೇಕು ಎಂದು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಹೇಳಿದರು.

ನಗರದ ಬಿ.ಎಸ್. ಚನ್ನಬಸಪ್ಪ ಕಾಲೇಜಿನಲ್ಲಿ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘ, ಅಗ್ನಿಶಾಮಕ ದಳ ಇಲಾಖೆಯಿಂದ ಜಿಲ್ಲಾ ಪಟಾಕಿ ವರ್ತಕರಿಗೆ ಸೋಮವಾರ ಹಮ್ಮಿಕೊಂಡಿದ್ದ ಸುರಕ್ಷತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜನರಿಗಾಗಿ, ನಿಮಗಾಗಿ ಪಟಾಕಿ ವ್ಯಾಪಾರಿಗಳು ಸುರಕ್ಷತೆಯ ಕಡೆಗೂ ಆದ್ಯತೆ ನೀಡಬೇಕು ಎಂದರು.

ಈ ಹಿಂದೆ ದೀಪಾವಳಿ ಹಬ್ಬದ ವೇಳೆ ಬೆಂಗಳೂರಿನ ಅಗ್ನಿ ಅವಘಡದಿಂದ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡುವುದಕ್ಕೆ ಕಷ್ಟವಾಗಿತ್ತು. ಬಾತಿ ಸಮೀಪದ ಅಂಗಡಿ ಹಾಕಲು ಸೂಚಿಸಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಪಟಾಕಿ ವರ್ತಕರು ಅಳಲು ತೋಡಿಕೊಂಡರು. ಆಗ ಮತ್ತೆ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟರು ಎಂದು ತಿಳಿಸಿದರು.

ಪಟಾಕಿ ವ್ಯಾಪಾರಕ್ಕೆ ಈ ಸಲವೂ ಹೈಸ್ಕೂಲ್ ಮೈದಾನದಲ್ಲಿ ವ್ಯವಸ್ಥೆ ಕಲ್ಪಿಸಲು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕ್ರಮ ಕೈಗೊಳ್ಳುತ್ತಾರೆ. ಅಷ್ಟು ಹೊತ್ತಿಗೆ ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸಲಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಪೂರ್ಣವಾಗಿ, ಖಾಸಗಿ ಬಸ್ ನಿಲ್ದಾಣ ಅರ್ಧ ತೆರವಾಗಬಹುದು. ಈ ಹಿನ್ನೆಲೆ ಈ ವರ್ಷವೂ ಹೈಸ್ಕೂಲ್ ಮೈದಾನದಲ್ಲೇ ಪಟಾಕಿ ಮಳಿಗೆಗಳನ್ನು ಸ್ಥಾಪಿಸೋಣ ಎಂದು ಹೇಳಿದರು.

ಕಾರ್ಯಾಗಾರಕ್ಕೆ ಅಧಿಕಾರಿಗಳೂ ಬಂದಿದ್ದರೆ, ಪಟಾಕಿ ವರ್ತಕರು ಅಂಗಡಿ ಹಾಕಿದಾಗ ತೊಂದರೆ ಕೊಡುವುದೂ ತಪ್ಪುತ್ತಿತ್ತು. ಅಧಿಕಾರಿಗಳು ಸಹ ಪಟಾಕಿ ವರ್ತಕರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಪಟಾಕಿಯಲ್ಲಿ ಹೆಚ್ಚು ಲಾಭವಿದೆ ಎಂದು ಜನ ಅಂದುಕೊಳ್ಳುತ್ತಾರೆ. ಅಂದುಕೊಂಡಷ್ಟು ಸುಲಭದ ದುಡಿಮೆ ಇದಲ್ಲ. ಅದನ್ನು ಅನುಭವಿಸಿದವರಿಗೆ ಏನು ಕಷ್ಟವೆಂಬುದು ಗೊತ್ತಾಗುತ್ತದೆ ಎಂದು ವಿವರಿಸಿದರು.

ಉಪ ಮೇಯರ್ ಶಾಂತಕುಮಾರ ಸೋಗಿ ಮಾತನಾಡಿ, ಪಟಾಕಿ ಅಂಗಡಿ ಅಗ್ನಿ ಅವಘಡಗಳಿಂದ ಗಂಭೀರ ಸಮಸ್ಯೆಗಳಾದ ನಿದರ್ಶನಗಳಿವೆ. ಈ ಹಿನ್ನೆಲೆ ಕಾರ್ಯಾಗಾರ ಸದ್ಬಳಕೆ ಮಾಡಿಕೊಳ್ಳಬೇಕು. ವ್ಯಾಪಾರದ ವೇಳೆ ಸುರಕ್ಷೆತೆಗೆ ಒತ್ತು ನೀಡಿ. ಪಟಾಕಿ ವರ್ತಕರು, ಪಟಾಕಿ ಕಾರ್ಮಿಕರು, ಮತ್ತು ಕುಟುಂಬ ವರ್ಗದವರು ವಿಮೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಸಿ.ಶ್ರೀನಿವಾಸ ಭಟ್ಸಿ, ಪಟಾಕಿ ವರ್ತಕರು ಮುಂಚೆ ಬೆಂಗಳೂರು, ಮೈಸೂರಿಗೆ ಹೋಗಿ ತರಬೇತಿ ಪಡೆದು ಬರಬೇಕಿತ್ತು. ದಾವಣಗೆರೆಯಲ್ಲಿ ಇದೇ ಮೊದಲು ಪಟಾಕಿ ವರ್ತಕರಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ಮತ್ತು ಪರವಾನಗಿ ನೀಡಲಾಗುವುದು. ಅಂಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನೀರು, ಮರಳು, ಅಗ್ನಿ ನಿವಾರಕ ಪರಿಸರ ಸದಾ ಸನ್ನದ್ಧವಾಗಿಟ್ಟುಕೊಳ್ಳಿ ಎಂದು ಮನವಿ ಮಾಡಿದರು.

ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಗುರು ಮಾಗಾನಹಳ್ಳಿ, ಕಾರ್ಯದರ್ಶಿ ಐನಳ್ಳಿ ಶಿವದೇವ್, ಅಗ್ನಿಶಾಮಕ ದಳದ ಪ್ರಾದೇಶಿಕ ಅಧಿಕಾರಿ ಎಂ.ಎಚ್.ನಾಗೇಶ, ಜಿಲ್ಲಾ ಅಗ್ನಿಶಾಮಕ ದಳದ ಜಿಲ್ಲಾಧಿಕಾರಿ ಬಿ.ಆರ್. ಅಶೋಕ ಕುಮಾರ, ಐನಳ್ಳಿ ಶಿವಕುಮಾರ, ಶ್ರೀಕಾಂತ ಬಗರೆ, ಮುನಿಸ್ವಾಮಿ ಇತರರು ಇದ್ದರು.

- - - ಕೋಟ್ಸ್ಪಟಾಕಿಯಿಂದ ಹಾವೇರಿಯಲ್ಲಿ ಕಳೆದ ವರ್ಷ ಆರು ಜನ ಮೃತಪಟ್ಟರು. ದಾವಣಗೆರೆಯಲ್ಲಿ ಕೂಡ ಒಬ್ಬರು ಸಾವನ್ನಪ್ಪಿದ್ದರು. ಒಂದು ಸಣ್ಣ ತಪ್ಪಿನಿಂದ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಅಗತ್ಯಯೂ ಇದೆ. ಹಾಗಾಗಿ ದೀಪಾವಳಿ ಹಬ್ಬವು ಎಲ್ಲರ ಮನೆ, ಮನ ಬೆಳಗುವ ಹಬ್ಬವಾಗಿ ಆಚರಣೆಯಾಗಬೇಕು

- ಪಿ.ಸಿ.ಶ್ರೀನಿವಾಸ ಭಟ್, ಅಧ್ಯಕ್ಷ, ಜಿಲ್ಲಾ ಪಟಾಕಿ ವರ್ತಕರ ಸಂಘ

ಕಾರ್ಯಾಗಾರದಲ್ಲಿ ಬೆಂಕಿ, ಎಲೆಕ್ಟ್ರಾನಿಕ್ ಹಾಗೂ ಪಟಾಕಿ, ಸ್ಫೋಟದ ಕುರಿತಂತೆ ಮುನ್ನೆಚ್ಚರಿಕೆ ಕುರಿತು ತರಬೇತಿ ನೀಡಲಾಗುತ್ತದೆ. ಪಟಾಕಿ ವ್ಯಾಪಾರಕ್ಕೆ ಮಾತ್ರವಲ್ಲದೇ, ದಿನನಿತ್ಯದ ಜೀವನಕ್ಕೂ ಸಹ ಇಂತಹ ತರಬೇತಿಯಿಂದ ಆಗಲಿದೆ. ಬೆಂಕಿಯ ಜೊತೆಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು. ಜಾಗ್ರತೆ ವಹಿಸಿದರೆ ಮಾತ್ರ ಜ್ಯೋತಿ. ಇಲ್ಲವಾದರೆ ಅದು ಜ್ವಾಲೆ ಎಂಬ ಅರಿವು ಎಲ್ಲರಿಗೂ ಇರಬೇಕು. ಇಂಧನ, ಶಾಖ ಹಾಗೂ ಗಾಳಿ ಇದ್ದಾಗ ಮಾತ್ರ ಬೆಂಕಿ ಹೊತ್ತಿಕೊಳ್ಳುತ್ತದೆ, ಹೆಚ್ಚು ವ್ಯಾಪಕವಾಗುತ್ತದೆ

- ಎಂ.ಎನ್.ನಾಗೇಶ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ

- - - -30ಕೆಡಿವಿಜಿ5: ದಾವಣಗೆರೆ ಬಿಎಸ್ ಚನ್ನಬಸಪ್ಪ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುರಕ್ಷತಾ ಕಾರ್ಯಾಗಾರವನ್ನು ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಉದ್ಘಾಟಿಸಿದರು. ಉಪ ಮೇಯರ್‌ ಶಾಂತಕುಮಾರ ಸೋಗಿ, ಸಂಘದ ಅಧ್ಯಕ್ಷ ಪಿ.ಸಿ.ಶ್ರೀನಿವಾಸ ಭಟ್ ಇತರರು ಇದ್ದರು.