ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಹಗರಣ ಸಂಬಂಧ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು : ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಹಗರಣ ಸಂಬಂಧ ನಿಗಮದ ಮಾಜಿ ಪ್ರಧಾನ ವ್ಯವಸ್ಥಾಪಕ ಡಾ.ಬಿ.ಕೆ.ನಾಗರಾಜಪ್ಪ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನ ವಶಕ್ಕೆ ಪಡೆದಿದ್ದಾರೆ.
ಇ.ಡಿ. ಅಧಿಕಾರಿಗಳು ಶುಕ್ರವಾರ ನಾಗರಾಜಪ್ಪ, ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ಮತ್ತು ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರಿಗೆ ಸೇರಿದ 10 ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಬ್ಯಾಂಕ್ ಖಾತೆಗಳ ವಿವರ, ಸ್ಥಿರಾಸ್ತಿ-ಚರಾಸ್ತಿಗಳು, ಸಂಬಂಧಿಕರ ಹೆಸರಿನಲ್ಲಿ ಸಂಪಾದನೆ ಮಾಡಿದ್ದ ಆಸ್ತಿ ಮತ್ತಿತರ ದಾಖಲೆಗಳು ಲಭ್ಯವಾಗಿದ್ದವು. ಈ ಬಗ್ಗೆ ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದ ಕಾರಣ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರು. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.