ಎಂಎಲ್ಎಗೂ ಮೊದಲೇ ಎಂಪಿಯಾಗಲು ಯತ್ನಿಸಿದ್ದ ಸಿದ್ದರಾಮಯ್ಯ

| Published : Apr 03 2024, 01:31 AM IST

ಸಾರಾಂಶ

9 ಬಾರಿ ಶಾಸಕ, ತಲಾ ಎರಡು ಬಾರಿ ಸಿಎಂ, ಡಿಸಿಎಂ, ವಿಪಕ್ಷ ನಾಯಕ:ನಂತರ 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಲೋಕದಳ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ತಕ್ಕಡಿ ಗುರುತಿನಿಂದ ವಿಧಾನಸಭೆಗೆ ಪ್ರಥಮ ಬಾರಿ ಆಯ್ಕೆ. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾಪಕ್ಷ ಸರ್ಕಾರ ಅಸ್ತಿತ್ವಕ್ಕೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನ, ನಂತರ ರೇಷ್ಮೆ ಮಂತ್ರಿ. 1985 ರಲ್ಲಿ ಜನತಾಪಕ್ಷದ ಟಿಕೆಟ್ ಮೇಲೆ ಎರಡನೇ ಬಾರಿ ವಿಧಾನಸಭೆಗೆ. ಹೆಗಡೆ ಸಂಪುಟದಲ್ಲಿ ಪಶುಸಂಗೋಪನಾ ಮಂತ್ರಿ. ಹೆಗಡೆ ರಾಜೀನಾಮೆ ನಂತರ ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಮಂತ್ರಿ

ಮೊದಬಾರಿ 1980 ರಲ್ಲಿ ಮೈಸೂರಿನಿಂದ,

ಎರಡನೇ ಬಾರಿ 1991 ರಲ್ಲಿ ಕೊಪ್ಪಳದಿಂದ ಪ್ರಯತ್ನ, ಅಲ್ಪಮತಗಳಿಂದ ಸೋಲು

---

ಫೋಟೋ 25ಎ.ಜೆಪಿಜಿ

-------

ಅಂಶಿ ಪ್ರಸನ್ನಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯಅವರು ವಿಧಾನಸಭಾ ಚುನಾವಣೆಗೆ ಮೊದಲೇ ಲೋಕಸಭೆಗೆ ಹೋಗಲು ಯತ್ನಿಸಿದ್ದರು!

ಹೌದು, ಅವರು 1978 ರಲ್ಲಿ ಮೈಸೂರು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿದ್ದರು. ನಂತರ 1980 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಜನತಾಪಕ್ಷ (ಎಸ್) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಅವರಿಗೆ ದೊರೆತಿದ್ದು ಕೇವಲ 8,327 ಮತಗಳು ಮಾತ್ರ!

ಆ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ನ ಎಂ. ರಾಜಶೇಖರಮೂರ್ತಿ ಅವರು 1,95,724 ಮತಗಳನ್ನು ಪಡೆದು ಆಯ್ಕೆಯಾಗಿದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್- ಯು ಅಭ್ಯರ್ಥಿ ತುಳಸಿದಾಸಪ್ಪ ಅವರಿಗೆ 1,12,688, ಜನತಾಪಕ್ಷದ ಎಂ.ಎಸ್. ಗುರುಪಾದಸ್ವಾಮಿ ಅವರಿಗೆ 71,491 ಮತಗಳು ದೊರೆತಿದ್ದವು.

ಎರಡು ಬಾರಿ ಶಾಸಕರಾಗಿ, ಮೂರು ಬಾರಿ ಮಂತ್ರಿಯಾಗಿ, ಮೂರನೇ ಚುನಾವಣೆಯಲ್ಲಿ ಸೋತ ನಂತರ ಅಂದರೆ 1991 ರಲ್ಲಿ ಉತ್ತರ ಕರ್ನಾಟಕದ ಕೊಪ್ಪಳದಿಂದ ಜನತಾದಳದ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧಿಸಿದ್ದರು. ಕಾಂಗ್ರೆಸ್ನ ಬಸವರಾಜ ಪಾಟೀಲ್ ಅನ್ವರಿ ಎದುರು 11,197 ಮತಗಳ ಅಂತರದಿಂದ ಸೋತರು. ಅನ್ವರಿಗೆ ಅವರಿಗೆ 2,41,176, ಸಿದ್ದರಾಮಯ್ಯ ಅವರಿಗೆ 2,29,979 ಮತಗಳು ದೊರೆತಿದ್ದವು. ಇದಾದ ನಂತರ ಅವರು ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಪ್ರಯತ್ನ ಮಾಡಲಿಲ್ಲ.

9 ಬಾರಿ ಶಾಸಕ, ತಲಾ ಎರಡು ಬಾರಿ ಸಿಎಂ, ಡಿಸಿಎಂ, ವಿಪಕ್ಷ ನಾಯಕ:ನಂತರ 1983 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಲೋಕದಳ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ತಕ್ಕಡಿ ಗುರುತಿನಿಂದ ವಿಧಾನಸಭೆಗೆ ಪ್ರಥಮ ಬಾರಿ ಆಯ್ಕೆ. ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಜನತಾಪಕ್ಷ ಸರ್ಕಾರ ಅಸ್ತಿತ್ವಕ್ಕೆ. ಕನ್ನಡ ಕಾವಲು ಸಮಿತಿ ಅಧ್ಯಕ್ಷ ಸ್ಥಾನ, ನಂತರ ರೇಷ್ಮೆ ಮಂತ್ರಿ. 1985 ರಲ್ಲಿ ಜನತಾಪಕ್ಷದ ಟಿಕೆಟ್ ಮೇಲೆ ಎರಡನೇ ಬಾರಿ ವಿಧಾನಸಭೆಗೆ. ಹೆಗಡೆ ಸಂಪುಟದಲ್ಲಿ ಪಶುಸಂಗೋಪನಾ ಮಂತ್ರಿ. ಹೆಗಡೆ ರಾಜೀನಾಮೆ ನಂತರ ಎಸ್.ಆರ್. ಬೊಮ್ಮಾಯಿ ಸಂಪುಟದಲ್ಲಿ ಸಾರಿಗೆ ಮಂತ್ರಿ.

1989ರ ಚುನಾವಣೆ ವೇಳೆಗೆ ಜನತಾಪಕ್ಷ ಇಬ್ಭಾಗ. ಚಾಮುಂಡೇಶ್ವರಿಯಲ್ಲಿ ಜನತಾದಳದಿಂದ ಸಿದ್ದರಾಮಯ್ಯ, ಸಮಾಜವಾದಿ ಜನತಾಪಕ್ಷದಿಂದ ಮಾವಿನಹಳ್ಳಿ ಸಿದ್ದೇಗೌಡ ಸ್ಪರ್ಧೆ, ಕಾಂಗ್ರೆಸ್‌ನ ಎಂದ ಎ. ರಾಜಶೇಖರಮೂರ್ತಿ ಗೆಲುವು.

1994 ರ ವೇಳೆಗೆ ಜನತಾ ಬಣಗಳು ಒಗ್ಗೂಡಿದ್ದವು. ಸಿದ್ದರಾಮಯ್ಯ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆ. ಎಚ್.ಡಿ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಖಾತೆ ಮಂತ್ರಿ.

1996 ಜೂ.1 ರಂದು ದೇವೇಗೌಡರು ಪ್ರಧಾನಿಯಾಗಬೇಕಾಗಿ ಬಂದಿತು. ಆಗ ರಾಜ್ಯದಲ್ಲಿ ಜೆ.ಎಚ್. ಪಟೇಲ್ ಮುಖ್ಯಮಂತ್ರಿ. ಸಿದ್ದರಾಮಯ್ಯ ಮೊದಲ ಬಾರಿ ಉಪ ಮುಖ್ಯಮಂತ್ರಿ.

1999ರ ವೇಳೆಗೆ ಮತ್ತೆ ಜನತಾದಳ ವಿಘಟನೆ. ಸಿದ್ದರಾಮಯ್ಯ ಅವರು ದೇವೇಗೌಡರ ಜೆಡಿಎಸ್ ಜೊತೆ ಉಳಿದು, ನಾಲ್ಕನೇ ಬಾರಿ ಅಭ್ಯರ್ಥಿ. ಆದರೆ ಕಾಂಗ್ರೆಸಿನ ಎ.ಎಸ್. ಗುರುಸ್ವಾಮಿ ಎದುರು ಸೋತರು.

2004 ರಲ್ಲಿ ನಾಲ್ಕನೇ ಬಾರಿಗೆ ಜೆಡಿಎಸ್ ಟಿಕೆಟ್ ಮೇಲೆ ವಿಧಾನಸಭೆಗೆ ಆಯ್ಕೆ. ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ. ಎನ್. ಧರಂಸಿಂಗ್ ಮುಖ್ಯಮಂತ್ರಿ. ಹಣಕಾಸು, ಅಬ್ಕಾರಿ ಖಾತೆಯೊಂದಿಗೆ ಸಿದ್ದರಾಮಯ್ಯ ಎರಡನೇ ಬಾರಿ ಉಪ ಮುಖ್ಯಮಂತ್ರಿ. ಹುಬ್ಬಳ್ಳಿ ಅಹಿಂದ ಸಮಾವೇಶ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೊಂದಿಗೆ ವಿರಸ, ಡಿಸಿಎಂ ಸ್ಥಾನದಿಂದ ವಜಾ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರ್ಪಡೆ. 2006ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್ನ ಶಿವಬಸಪ್ಪ ಎದುರು ಕೂದಲೆಳೆಯ 257 ಮತಗಳ ಅಂತರದಲ್ಲಿ ಗೆಲವು. ಐದನೇ ಬಾರಿ ವಿಧಾನಸಭೆ ಪ್ರವೇಶ.

2008 ರಲ್ಲಿ ಹೊಸದಾಗಿ ರಚನೆಯಾದ ವರುಣದಿಂದ ಸ್ಪರ್ಧೆ. ಆರನೇ ಬಾರಿ ಆಯ್ಕೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು. ಒಂದು ವರ್ಷದ ನಂತರ ಪ್ರತಿಪಕ್ಷ ನಾಯಕ. 2013 ರಲ್ಲಿ ಏಳನೇ ಬಾರಿ ವಿಧಾನಸಭೆಗೆ ಆಯ್ಕೆ. ಮುಖ್ಯಮಂತ್ರಿ ಗಾದಿ. 2018 ರಲ್ಲಿ ವರುಣ ಬದಲು ಮತ್ತೆ ಚಾಮುಂಡೇಶ್ವರಿಯಿಂದ ಸ್ಪರ್ಧೆ. ಜೆಡಿಎಸ್ನ ಜಿ.ಟಿ. ದೇವೇಗೌಡರ ಎದುರು ಸೋಲು. ಆದರೆ ಬಾಗಲಕೋಟೆಯಿಂದ ಬಾದಾಮಿಯಿಂದ ಗೆಲವು. ಎಂಟನೇ ಬಾರಿ ವಿಧಾನಸಭೆ ಪ್ರವೇಶ. ಹದಿನಾಲ್ಕು ತಿಂಗಳ ನಂತರ ಎರಡನೇ ಬಾರಿ ಪ್ರತಿಪಕ್ಷ ನಾಯಕ. 2023 ರಲ್ಲಿ ಮತ್ತೆ ವರುಣದಿಂದ ಸ್ಪರ್ಧಿಸಿ, ಒಂಭತ್ತನೇ ಬಾರಿ ವಿಧಾನಸಭೆಗೆ. ಈಗ ಎರಡನೇ ಬಾರಿ ಮುಖ್ಯಮಂತ್ರಿ.