ಸಾರಾಂಶ
ಶಿರಸಿ:
ಗುಡ್ಡಗಾಡಿನಿಂದ ಆವೃತವಾಗಿ ಸಂಪರ್ಕ ಕೊರತೆ ಎದುರಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಗೆ ಈಗ ಹೊಸ ಆಶಾಕಿರಣ ಮೂಡಿದೆ. ಜಪಾನಿನಲ್ಲಿ ಜನಪ್ರಿಯವಾಗಿರುವ ಅತ್ಯಾಧುನಿಕ ಕೇಬಲ್ ಮುಕ್ತ ವೈಫೈ ತಂತ್ರಜ್ಞಾನವನ್ನು ಬಿಎಸ್ಎನ್‌ಎಲ್ ಮತ್ತು ಜಿಎನ್ಎ ಇಂಡಿಯಾ, ಜಪಾನ್‌ನ ವೆಲ್ ಸೊಕ್ ದೇಶದಲ್ಲೇ ಶಿರಸಿಯಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡುತ್ತಿದೆ.ಸಂಸದ ಅನಂತಕುಮಾರ ಹೆಗಡೆ ಅವರ ಪ್ರಯತ್ನದಿಂದಾಗಿ ಈ ಹೊಸ ತಂತ್ರಜ್ಞಾನ ಮೊದಲು ನಮ್ಮ ಜಿಲ್ಲೆಗೆ ಆಗಮಿಸಿದೆ. ಭಾರತ್ ಏರ್ ಫೈ ಹೆಸರಿನಲ್ಲಿ ಜನತೆಯ ಸೇವೆಗೆ ಸಜ್ಜಾಗಲಾಗುತ್ತಿದೆ. ಈ ತಂತ್ರಜ್ಞಾನದ ಬಳಕೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಮುಂದಡಿ ಇಡಲಾಗಿದೆ.
ಕಾರ್ಯಾಚರಣೆ ಹೇಗೆ?:ಭಾರತ್ ಏರ್ ಫೈ ಕೇಬಲ್ ರಹಿತವಾಗಿರಲಿದೆ. ತ್ವರಿತ ಇಂಟರ್‌ನೆಟ್ ಒದಗಿಸುವ ಭಾರತ್ ಏರ್ ಫೈ ವೇಗದ ಇಂಟರ್ನೆಟ್ ಜತೆಗೆ ಕಡಿಮೆ ಖರ್ಚಿನಲ್ಲಿ ಬಳಸಲು ಸಾಧ್ಯತೆ ಇದೆ. ಈಗಾಗಲೇ ಶಿರಸಿಯ ಟಿಎಸ್ಎಸ್, ಕೆಡಿಸಿಸಿ ಬ್ಯಾಂಕ್, ಟಿಆರ್ ಸಿ ಭಾಗದಲ್ಲಿ ಪ್ರಾಯೋಗಿಕವಾಗಿ ಅವಳವಡಿಕೆ ಮಾಡಲಾಗಿದೆ. ಶಿರಸಿಯ ಜನತೆ ವೆಬ್‌ಸೈಟ್‌ನಲ್ಲಿ ಭಾರತ್ ಏರ್ ಫೈ ಎಂದು ದಾಖಲಿಸಿ ಹೆಸರು, ಮೊಬೈಲ್ ನಂಬರ್ ಮೇಲ್ ಐಡಿ ಕೊಟ್ಟು ಒಟಿಪಿ ದಾಖಲಿಸಿದ ಬಳಿಕ ಬಳಕೆ ಮಾಡಿಕೊಳ್ಳಬಹುದಾಗಿದೆ. ಶೀಘ್ರವೇ ಯಾಣ, ಸಾತೊಡ್ಡಿ ಸೇರಿದಂತೆ ವಿವಿಧೆಡೆ ಅಳವಡಿಕೆ ಮಾಡಲಿದ್ದು, ತ್ವರಿತವಾಗಿ ಜಿಲ್ಲೆಯ ಎಲ್ಲೆಡೆ ಈ ಸೌಲಭ್ಯ ಒದಗಿಸುತ್ತೇವೆ ಎನ್ನುತ್ತಾರೆ ತಂತ್ರಜ್ಞರು.
ಭಾರತ್ ಸಂಚಾರ ನಿಗಮದ ಜತೆಗೆ ಒಡಂಬಡಿಕೆ ಮಾಡಿಕೊಂಡು ತರಂಗಾಂತರಂಗಳನ್ನು ಹೆಚ್ಚುವರಿಯಾಗಿ ಒದಗಿಸುವ ಹಾಗೂ ಇಡೀ ವೈಫೈ ವ್ಯವಸ್ಥೆಯನ್ನು ಕಿಲೋಮೀಟರ್ ತನಕ ಬಳಸಲು ಯೋಗ್ಯವಾಗಿಸುವ ತಂತ್ರಜ್ಞಾನ ಇದಾಗಿದೆ. ಕಚೇರಿ ಹಾಗೂ ಮನೆ ಒಂದು ಕಿಮೀ ಅಂತರದಲ್ಲಿ ಇದ್ದರೆ ಕಚೇರಿ ವೈಫೈ ಮನೆಗೂ ಬಳಸಲು ಅವಕಾಶ ಒದಗಿಸಲಿದೆ ಎಂಬುದು ಇದರ ವಿಶೇಷವಾಗಿದೆ.ಈ ಕುರಿತಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಎನ್‌ಎ ಇಂಡಿಯಾದ ಸಿಇಒ ನಾಗರಾಜ್, ಆರಂಭಿಕ ಮೂರು ತಿಂಗಳ ಕಾಲ ಸಾರ್ವಜನಿಕರು ಪ್ರಾಯೋಗಿಕವಾಗಿ ಉಚಿತವಾಗಿ ಬಳಕೆ ಮಾಡಲು ಅವಕಾಶ ನೀಡುತ್ತಿದ್ದೇವೆ ಎಂದರು.
ಲೆಕ್ಕ ಪರಿಶೋಧಕ ರವೀಂದ್ರ ಭಟ್ಟ, ನಿರ್ದೇಶಕ ಜಪಾನಿನ ಇಥೋ ಎಶಿಗುರೊ, ರಘು ಶಿವರಾಮಯ್ಯ, ವೆಲ್‌ಸನ್ ನಿರ್ದೇಶಕ ಎಂದೋ, ವಿಷಯ ತಜ್ಞ ಕ್ವಾಕ್ ಇದ್ದರು.ಸವಾಲಾಗಿ ಸ್ವೀಕಾರ
ರಾಜ್ಯದಲ್ಲಿಯೇ ಅತಿ ಹೆಚ್ಚು ಮೊಬೈಲ್ ಟಾವರ್ ಇರುವ ಹಾಗೂ ಅತಿ ಹೆಚ್ಚು ಸಂಪರ್ಕ ಕೊರತೆ ಇರುವ ಜಿಲ್ಲೆ ಉತ್ತರ ಕನ್ನಡ ಆಗಿದೆ. ಪ್ರತಿ ಹಳ್ಳಿಯೂ ಗುಡ್ಡಗಾಡಿನಿಂದ ಆವೃತವಾಗಿರುವುದೇ ಇದಕ್ಕೆ ಸಮಸ್ಯೆ. ಇಂಟರ್‌ನೆಟ್ ಮತ್ತು ಸಂಪರ್ಕಕ್ಕಾಗಿ ನಿರ್ಮಿಸಿರುವ ಮೊಬೈಲ್ ಗೋಪುರಗಳ ಸಿಗ್ನಲ್ ಹೆಚ್ಚಿನ ವ್ಯಾಪ್ತಿ ಪ್ರದೇಶ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದ 4ಜಿ ಸ್ಯಾಚುರೇಶನ್ ಯೋಜನೆಯಡಿ ಈ ಸಂಪರ್ಕ ಕಲ್ಪಿಸುವ ಯತ್ನ ನಡೆದಿತ್ತಾದರೂ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಬಿಎಸ್‌ಎನ್‌ಎಲ್‌ಗೆ ಹಳ್ಳಿಗಳಲ್ಲಿ ನೀಡಿದ್ದ ಜಾಗ ವಾಪಸ್ ಪಡೆದಿದ್ದಾರೆ. ಇದರಿಂದಾಗಿ ಈ ಯೋಜನೆಯೂ ಹಳ್ಳ ಹಿಡಿದಿತ್ತು. ಈಗ ನಡೆದಿರುವ ಭಾರತ್ ಏರ್ ಫೈ ತಂತ್ರಜ್ಞಾನ ಈಗಾಗಲೇ ಜಪಾನ್‌ನಲ್ಲಿ ಯಶಸ್ವಿಯಾಗಿದೆ. ಗುಡ್ಡಗಾಡಿನ ಪ್ರದೇಶವಾದ ಉತ್ತರಕನ್ನಡವನ್ನು ಸವಾಲಾಗಿ ಸ್ವೀಕರಿಸಿ ಈ ತಂತ್ರಜ್ಞಾನವನ್ನು ಇಲ್ಲಿ ಪ್ರಯೋಗಿಸುತ್ತಿದ್ದೇವೆ ಎನ್ನುತ್ತಾರೆ ಜಿಎನ್‌ಎ ಇಂಡಿಯಾದ ಟೆಕ್ನಿಕಲ್ ಡೈರೆಕ್ಟರ್, ಜಪಾನಿನ ಐಷಿಗುರೊ.