ಸಾರಾಂಶ
ನಾಡಿನಲ್ಲಿ ಮೊಟ್ಟಮೊದಲು ಸಾಮಾನತೆಯನ್ನು ಹುಟ್ಟು ಹಾಕಿದ ಬಸವಣ್ಣ ಕಾಯಕ ದಾಸೋಹದ ಮೂಲಕ ಸಮಾಜವನ್ನು ಪ್ರೀತಿಸಿದವರು. ಅವರ ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ: ನಾಡಿನಲ್ಲಿ ಮೊಟ್ಟಮೊದಲು ಸಾಮಾನತೆಯನ್ನು ಹುಟ್ಟು ಹಾಕಿದ ಬಸವಣ್ಣ ಕಾಯಕ ದಾಸೋಹದ ಮೂಲಕ ಸಮಾಜವನ್ನು ಪ್ರೀತಿಸಿದವರು. ಅವರ ವಚನ ಸಾಹಿತ್ಯ ಎಂದೆಂದಿಗೂ ಪ್ರಸ್ತುತ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿರುವ ಅವರ ಭಾವಚಿತ್ರದ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಸವಾದಿ ಶರಣರ ಆಶಯಗಳೆಲ್ಲವು ನಮ್ಮ ಸಂವಿಧಾನದಲ್ಲಿಯೇ ಇವೆ. ವಚನ ಮತ್ತು ಸಂವಿಧಾನದ ಧ್ಯೇಯೋದ್ದೇಶಗಳು ಒಂದೇ ಆಗಿದ್ದು,12 ನೇ ಶತಮಾನದಲ್ಲಿಯೆ ಬಸವಣ್ಣನವರು ಸ್ತ್ರೀಯರಿಗೆ ಸ್ವಾತಂತ್ರ ನೀಡುವ ಮೂಲಕ ಸಮಾನತೆ ಸಂದೇಶ ಸಾರಿದ್ದರು. ಈಗ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ರಾಜ್ಯ ಸರ್ಕಾರ ಅವರಿಗೆ ಗೌರವನ್ನು ನೀಡಿದೆ ಎಂದರು.ಸಂಶೋಧಕ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿ, ಬಸವಣ್ಣ ಈ ನಾಡಿನ ಅಸ್ಮಿತೆ. ಅವರು ಒಬ್ಬ ವಚನಕಾರ, ಸಂಶೋಧಕ, ತತ್ವಜ್ಞಾನಿ, ವಿಜ್ಞಾನಿ ಎಲ್ಲವೂ ಆಗಿದ್ದರು. ಸಮಾನತೆ, ದಾಸೋಹ, ಕಾಯಕ ಏಕದೇವೋಪಾಸನೆ, ಸಯನ್ವಯ, ಸ್ತ್ರೀಯರಿಗೆ ಗೌರವ ಮತ್ತು ಸ್ವಾತಂತ್ರ್ಯ ನೀಡಿದ ಮೊದಲ ಸಾಮಾಜಿಕ ಹರಿಕಾರರಾಗಿ ಈ ನಾಡನ್ನು ಬೆಳಸಿದವರು ಎಂದರು.
ಸ್ಥಳೀಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಅಶೋಕ ಮನಗೂಳಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಕ್ಷೇತ್ರಶಿಕ್ಷಣಾಧಿಕಾರಿ ಆರೀಫ ಬಿರಾದಾರ, ಸರಕಾರಿ ನೌಕರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಗ್ರೇಡ್-2 ತಹಸೀಲ್ದಾರ ಇಂದಿರಾಬಾಯಿ ಬಳಗಾನೂರ, ಬಸವದಳದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ಸಿದ್ದಬಸವ ಕುಂಬಾರ ಸೇರಿ ಇತರರು ಇದ್ದರು.ತಹಸೀಲ್ದಾರ ಯಟವಟ್ಟು-ವೇದಿಕೆ ಮೇಲೆ ಮಹಿಳಾ ಅಧಿಕಾರಿಗಳಿಗೆ ಕುಳಿತುಕೊಳ್ಳಲು ತಹಶೀಲ್ದಾರ ಹಿರೇಮಠ ಅವಕಾಶ ನೀಡದ ಹಿನ್ನಲೆಯಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಚ್ಚೆತ್ತ ತಹಸೀಲ್ದಾರ್ ಗ್ರೇಡ್-2 ತಹಶೀಲ್ದಾರ ಇಂದಿರಾಬಾಯಿ ಬಳಗಾನೂರಗೆ ವೇದಿಕೆಗೆ ಅವಕಾಶ ಕಲ್ಪಿಸಿಕೊಡಲಾಯಿತು.