ಸಾರಾಂಶ
2024ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೊಂದಿಕೊಂಡಿರುವ ಅಂತರಾಜ್ಯ ಗಡಿ ಜಿಲ್ಲೆಗಳಲ್ಲಿ ಅಕ್ರಮಗಳು ನಡೆಯದಂತೆ ತಡೆಗಟ್ಟ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮಟ್ಟದ ಸಭೆಯಲ್ಲಿ ನಡೆದ ಚರ್ಚೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಗೆ ಹೊಂದಿಕೊಂಡಿರುವ ಅಂತರಾಜ್ಯ ಗಡಿ ಜಿಲ್ಲೆಗಳಲ್ಲಿ ಅಕ್ರಮವಾಗಿ ಸಾಗಿಸುವ, ದಾಸ್ತಾನು ಮಾಡುವ ಹಣ ಹಾಗೂ ಅಕ್ರಮವಾಗಿ ಖರೀದಿಸುವ ಮದ್ಯ ಹಾಗೂ ಇನ್ನಿತರ ವಸ್ತುಗಳ ವಿವರಗಳ ಬಗ್ಗೆ ಸುಳಿವು ಸಿಕ್ಕ ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಲ್ಲಿನ ಜಿಲ್ಲೆಗಳ ಅಧಿಕಾರಿಗಳ ಸಹಕಾರ ಕೋರಿದರು. 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂತಾ ರಾಜ್ಯ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಚುನಾವಣಾ ಪೂರ್ವ ಸಭೆ ನಡೆಸಿ ಚುನಾವಣೆ ಸಂಬಂಧ ಪರಸ್ಪರ ಮಾಹಿತಿ ಹಂಚಿಕೊಂಡು ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸುವ ಕುರಿತು ಚರ್ಚಿಸಿದರು.ಅಕ್ರಮ ಚಟುವಟಿಕೆ ತಡೆಗಟ್ಟಿ
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಮತ್ತು ಅನ್ನಮಯ್ಯ ಜಿಲ್ಲೆಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಅಂತಾ ರಾಜ್ಯ ಗಡಿ ಜಿಲ್ಲೆಗಳಾಗಿವೆ, ಅಲ್ಲಿಯೂ ಮುಂಬರುವ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯುವ ಸಂಬಂಧ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿ ಅಂತಾರಾಜ್ಯ ಗಡಿ ಜಿಲ್ಲೆಗಳಾದ ಸತ್ಯಸಾಯಿ ಮತ್ತು ಅನ್ನಮಯ್ಯ ಜಿಲ್ಲೆಗಳ ಅಧಿಕಾರಿಗಳಿಂದ ಪರಸ್ಪರ ಸಹಕಾರ ಕೋರಿದರು.ಚೆಕ್ ಪೋಸ್ಟ್ ತೆರೆಯಲು ಮನವಿ
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಮಾತನಾಡಿ, ತಮ್ಮ ಜಿಲ್ಲೆಗಳಲ್ಲಿ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿರುವವರ, ಸೂಕ್ಷ್ಮ ಪ್ರದೇಶಗಳ ವಿವರವನ್ನು ಒದಗಿಸುವಂತೆ ಮನವಿ ಮಾಡಿದರು. ಚೆಕ್ ಪೋಸ್ಟ್ ಗಳನ್ನು ತೆರೆಯಲು ಅಗತ್ಯ ಸಹಕಾರ ನೀಡುವಂತೆ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಯಲು ಜಂಟಿ ಕಾರ್ಯಚರಣೆ, ದಾಳಿಗಳನ್ನು ನಡೆಸಲು ಅಂತಾ ರಾಜ್ಯ ಗಡಿ ಜಿಲ್ಲೆಗಳ ಅಧಿಕಾರಿಗಳಲ್ಲಿ ಮನವಿ ಮಾಡಿದರುದರು.ಈ ಸಂದರ್ಭದಲ್ಲಿ ಸತ್ಯಸಾಯಿ ಜಿಲ್ಲೆಯ ಜಿಲ್ಲಾಧಿಕಾರಿ ಪಿ. ಅರುಣ್ ಬಾಬು, ಪೊಲೀಸ್ ವರಿಷ್ಠಾಧಿಕಾರಿ ಮಾಧವ್ ರೆಡ್ಡಿ ಹಾಗೂ ಅನ್ನಮಯ್ಯ ಜಿಲ್ಲೆಯ ಜಿಲ್ಲಾಧಿಕಾರಿ ಅಭಿಶಿಕ್ಷತ್ ಕಿಶೋರ್, ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ರಾವ್, ಪೆನುಗೊಂಡ ಉಪವಿಭಾಗಾಧಿಕಾರಿ ಅಪೂರ್ವ ಭಾರತ್, ಚಿಕ್ಕಬಳ್ಳಾಪುರ ಜಿಲ್ಲೆಯ ಜಿಪಂ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಡಿ. ಎಚ್.ಅಶ್ವಿನ್ ಇದ್ದರು.