ಬೆಳೆಗಳ ರಕ್ಷಣೆಗೆ ಮೊದಲ ಆದ್ಯತೆ: ಸಿದ್ದರಾಮಯ್ಯ

| Published : Nov 01 2023, 01:00 AM IST

ಸಾರಾಂಶ

ಬೆಳೆಗಳ ರಕ್ಷಣೆಗೆ ಮೊದಲ ಆದ್ಯತೆ: ಸಿದ್ದರಾಮಯ್ಯತಪ್ಪು ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶಕರಿಗೆ ಸಿಎಂ ತರಾಟೆ
- ತಪ್ಪು ಮಾಹಿತಿ ನೀಡಿದ ಜಂಟಿ ಕೃಷಿ ನಿರ್ದೇಶಕರಿಗೆ ಸಿಎಂ ತರಾಟೆ - ಶಾಸಕರ ಬೇಡಿಕೆಗಳಿಗೆ ಕೂಡಲೇ ಸ್ಪಂದನೆ ಕನ್ನಡಪ್ರಭ ವಾರ್ತೆ ಮಂಡ್ಯ ಪ್ರಸ್ತುತ ರೈತರು ಬಿತ್ತನೆ ಮಾಡಿರುವ ಬೆಳೆಗಳ ರಕ್ಷಣೆಗೆ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು. ಮುಂದಿನ ಬೆಳೆಗೆ ನೀರು ಕೊಡಲು ಸಾಧ್ಯವಿಲ್ಲದ ಕಾರಣ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ಅಗತ್ಯವಿರುವಷ್ಟು ನೀರು ಪೂರೈಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದರು. ಮಂಗಳವಾರ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾವೇರಿ ಕೊಳ್ಳದ ಬೆಳೆಗಳಿಗೆ ನೀರು ಹರಿಸುವ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆಗೆ ಬಂದಾಗ ಬೆಳೆ ರಕ್ಷಣೆಗೆ ಆದ್ಯ ಗಮನಹರಿಸಬೇಕು ಎಂದರು. ಕೆಆರ್‌ಎಸ್‌ನಿಂದ ನೀರು ಹರಿಸಿದರೂ ಮದ್ದೂರು, ಮಳವಳ್ಳಿ ಪ್ರದೇಶಕ್ಕೆ ನೀರು ಹೋಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ನಮಗೆ ಜಮೀನಿಗೆ ನೀರು ಬೇಡ, ಕೆರೆ ನೀರು ತುಂಬಿಸಿಕೊಡುವಂತೆ ಮನವಿ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಳವಳ್ಳಿ ತಾಲೂಕಿನಲ್ಲಿ ಎಷ್ಟು ಕೆರೆಗಳಿವೆ, ಎಷ್ಟು ಕೆರೆ ತುಂಬಿಸಿದ್ದೀರಾ ಎಂದಾಗ, ಮಳವಳ್ಳಿಯಲ್ಲಿ 35 ಕೆರೆಯಿದ್ದು, 23 ಕೆರೆ ನೀರು ತುಂಬಿಸಿದ್ದೇವೆ ಎಂದು ಅಧಿಕಾರಿ ಹೇಳಿದಾಗ, ಮೊದಲು ಎಲ್ಲಾ ಕೆರೆಗೆ ನೀರು ತುಂಬಿಸುವಂತೆ ಸೂಚನೆ ನೀಡಿದರು। ತಪ್ಪು ಮಾಹಿತಿ- ಜಂಟಿ ಕೃಷಿ ನಿರ್ದೇಶಕರಿಗೆ ತರಾಟೆ: ಬೆಳೆ ಇಳುವರಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರನ್ನು ಸಿಎಂ ಸಭೆಯಲ್ಲೇ ತರಾಟೆ ತೆಗೆದುಕೊಂಡರು. ಮುಖ್ಯಮಂತ್ರಿಗಳು ಬೆಳೆ ಇಳುವರಿ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಕೇಳಿದಾಗ, ರಾಜ್ಯದ ಸರಾ ಸರಿಗಿಂತ ಜಿಲ್ಲೆಯ ಇಳುವರಿ ಹೆಚ್ಚಾಗಿದೆ ಎಂದು ಅಶೋಕ್‌ ಉತ್ತರಿಸಿದರು. ಇದರಿಂದ ಗರಂ ಆದ ಸಿಎಂ, ಬಾಯಿಗೆ ಬಂದಂತೆ ಹೇಳಬೇಡ. ಯಾವ ಬೇಸಿಸ್ ಮೇಲೆ ಮಾಹಿತಿ ನೀಡುತ್ತಿದ್ದೀಯಾ. ನನ್ನ ಬಳಿ ಇಡೀ ರಾಜ್ಯದ ಮಾಹಿತಿ ಇದೆ. ನೀನು ಹೇಳುತ್ತಿರುವುದಕ್ಕೆ ಏನಾದ್ರೂ ರಿಪೋರ್ಟ್‌ ತಂದಿದ್ದೀಯಾ ಎಂದು ಗದರಿದರು. ಈ ವೇಳೆ ಸಿಎಂಗೆ ಉತ್ತರಿಸಲಾಗದೆ ತಡಬಡಾಯಿಸಿದರು. ಎಕನಾಮಿಕ್ ಸರ್ವೆ ಅಂದ್ರೆ ಗೊತ್ತಾ ನಿನಗೆ. ಅದರಲ್ಲಿ ರಾಜ್ಯದ ಕೃಷಿ ಇಳುವರಿ ಬಗ್ಗೆ ಮಾಹಿತಿ ಇದೆ. ಅದನ್ನು ಓದಿದ್ದೀಯಾ. ಒಬ್ಬ ಕೃಷಿ ಅಧಿಕಾರಿಯಾಗಿ ಎಕನಾಮಿಕ್ ಸರ್ವೆಯನ್ನೇ ನೀನು ಓದಿಲ್ಲ. ಇನ್ನು ಜೆಡಿ (ಜಂಟಿ ಕೃಷಿ ನಿರ್ದೇಶಕ)ಯಾಗಿ ನೀನು ಏನು ಕೆಲಸ ಮಾಡ್ತಾ ಇದಿಯಾ. ಏನೂ ಗೊತ್ತಿಲ್ಲದೆ ಸಚಿವರಿಗೆ ಎನು ಸಲಹೆ ಕೊಡ್ತಿಯಾ. ನಿನಗೆ ಶಿಕ್ಷೆ ಕೊಡಬಹುದಲ್ಲವ. ಮಣ್ಣು ಫಲವತ್ತತ್ತೆ ಕಳೆದುಕೊಳ್ಳುತ್ತಿದೆ. ಅದಕ್ಕೆ ಏನು‌ ಪರಿಹಾರ ಮಾಡಿದ್ದೀಯಾ, ಏನು ಕೆಲಸ ಮಾಡ್ತಿದ್ದಿಯಾ ಎಂದು ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು. ಏಕೆ ಸುಳ್ಳು ಹೇಳುತ್ತೀಯಾ? ಕೃಷಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಪೂರೈಸುತ್ತಿರುವ ಬಗ್ಗೆ ಮಾಹಿತಿ ನೀಡಿದ ಸೆಸ್ಕ್‌ ಅಧಿಕಾರಿಗಳು, ಸರ್ಕಾರದ ಸುತ್ತೋಲೆ ಪ್ರಕಾರ 5 ಗಂಟೆ ತ್ರಿ-ಫೇಸ್ ಕರೆಂಟ್ ಕೊಡುತ್ತಿದ್ದೇವೆ ಎಂದಾಗ, ಮಧ್ಯ ಪ್ರವೇಶಿಸಿದ ಸಚಿವ ಚಲುವರಾಯಸ್ವಾಮಿ, ಕೇವಲ ಮೂರು ಗಂಟೆ ಮಾತ್ರ ಕರೆಂಟ್‌ ಕೊಡುತ್ತಿದ್ದಾರೆ ಎಂದಾಗ, ಸಚಿವರ ಮಾತಿಗೆ ಶಾಸಕ ರಮೇಶ್‌ ಬಂಡಿಸಿದ್ದೇಗೌಡರು ದನಿಗೂಡಿಸಿದರು. ಈ ವೇಳೆ ಸಿಎಂ ಯಾಕ್ರೀ ಸುಳ್ಳು ಹೇಳ್ತಿದ್ದೀರಿ ಎಂದಾಗ, ಸಾಹೇಬ್ರು ಮುಂದೆ ನಿಜಾ ಹೇಳಿ, ಕೆಪಿಟಿಸಿಎಲ್‌ಗೆ ಕರೆಂಟ್ ಸಪ್ಲೇಗೆ ಹೇಳ್ತಾರೆ ಎಂದು ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಆದರೂ ಸೆಸ್ಕ್‌ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡದೆ ಸಬೂಬು ಹೇಳಿದರು. ಶಾಸಕರು ನೀಡುತ್ತಿರುವ ಮಾಹಿತಿ ಸರಿಯಾಗಿದ್ದರೆ ನಿಮ್ಮನ್ನು ಸಸ್ಪೆಂಡ್ ಮಾಡ್ತೀನಿ ಎಂದ ಸಿಎಂ ಗದರಿದರು. ಒಂದು ಬೋರ್ ವೆಲ್ ಹಾಕಿಸಿಕೊಡಿ: ನಾಲ್ಕು ತಿಂಗಳಿಂದ ಮಂಡ್ಯ ನಗರದ ಹೊಸಹಳ್ಳಿಯಲ್ಲಿ ನೀರಿನ ಸಮಸ್ಯೆ ಇದೆ. ಅಧಿಕಾರಿಗಳಿಗೆ ಹೇಳುತ್ತಲೇ ಇದ್ದೇನೆ. ಆದರೂ ಇಲ್ಲಿಯವರೆಗೆ ಬೋರ್‌ವೆಲ್‌ ಕೊರೆಸಿಲ್ಲ ಎಂದು ಶಾಸಕ ರವಿಕುಮಾರ್‌ ಸಿಎಂ ಎದುರು ಅಳಲು ವ್ಯಕ್ತಪಡಿಸಿದರು. ಒಂದು ಬೋರ್ ವೆಲ್ ವಿಚಾರ ಸಭೆಯಲ್ಲಿ ಪ್ರಸ್ತಾಪ ಮಾಡುವ ದೊಡ್ಡ ವಿಚಾರವ. ಬೋರ್‌ವೆಲ್ ಕೊರೆಸಿ ಎಂದು ಸಚಿವ ಚಲುವರಾಯಸ್ವಾಮಿ ಡೀಸಿಗೆ ಸೂಚಿಸಿದರು. ಇದಾದ ಬಳಿಕವೂ ದೊಡ್ಡ ಮಟ್ಟದಲ್ಲಿ ಬೋರ್ ವೆಲ್ ಬಗ್ಗೆ ಚರ್ಚೆಯಾಯಿತು. ಈ ವಿಚಾರವಾಗಿ ಸಿಎಂ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯನ್ನು ತರಾಟೆ ತೆಗೆದುಕೊಂಡರು. ನರೇಂದ್ರಸ್ವಾಮಿ ಮನವಿಗೆ ಸಿಎಂ ಸಭೆಯಲ್ಲೇ ಸ್ಪಂದನೆ: ಮಳವಳ್ಳಿ ಕುಡಿಯುವ ನೀರು ಯೋಜನೆ ವಿಚಾರವಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯನವರು ಇಲಾಖಾ ಕಾರ್ಯದರ್ಶಿಗೆ ಕರೆ ಮಾಡಿ ಏನು ಸಮಸ್ಯೆ ಇದೆ ಎನ್ನುವುದನ್ನು ಪರಿಶೀಲಿಸಿ ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಅಲ್ಲದೇ, ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ತನಿಖೆ ಕುರಿತಂತೆ ಈ‌ ಹಿಂದೆಯೇ ತನಿಖೆಗೆ ಆದೇಶ ಮಾಡಿದ್ದೇನೆ. ಕಾಮಗಾರಿ ಪೂರ್ಣಗೊಳ್ಳದೆ ಗುತ್ತಿಗೆದಾರ ಯೋಜನೆಯನ್ನು ಹ್ಯಾಂಡ್ ಓವರ್ ಮಾಡಿದ್ದಾನೆ. ಮೊದಲು ಅವನನ್ನ ಬ್ಲಾಕ್ ಲೀಸ್ಟ್ ಗೆ ಸೇರಿಸು ಎಂದು ಏರು ಧ್ವನಿಯಲ್ಲಿಯೇ ಮುಖ್ಯ ಅಭಿಯಂತರರಿಗೆ ಸಿಎಂ ಸೂಚನೆ ಕೊಟ್ಟರಲ್ಲದೆ, ತನಿಖೆ ಮಾಡುವಂತೆಯೂ ತಾಕೀತು ಮಾಡಿದರು. ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್‌, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಕೆ.ಎಂ.ಉದಯ್‌, ಹೆಚ್‌.ಟಿ.ಮಂಜು, ವಿಧಾನಪರಿಷತ್‌ ಸದಸ್ಯರಾದ ದಿನೇಶ್‌ ಗೂಳಿಗೌಡ, ಮಧು ಜಿ.ಮಾದೇಗೌಡ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್‌ ಜಿಪಂ ಸಿಇಓ ಶೇಖ್‌ ತನ್ವೀರ್‌ ಆಸಿಫ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಇತರರಿದ್ದರು.