ಸಾರಾಂಶ
ಮತ್ಸ್ಯ ಕ್ಷಾಮಕ್ಕೆ ಅವೈಜ್ಞಾನಿಕ ಬುಲ್ ಟ್ರಾಲ್, ಲೈಟ್ ಫಿಶಿಂಗ್ ಕಾರಣ ಎನ್ನುವುದು ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರ ಆರೋಪವಾಗಿದೆ.
ಕಾರವಾರ: ಭರಪೂರ ಮೀನು ಸಿಗುವ ದಿನಗಳಲ್ಲಿ ಮೀನಿನ ಬರ ಎದುರಾಗಿದ್ದರಿಂದ ಯಾಂತ್ರೀಕೃತ ಮೀನುಗಾರಿಕೆ ಸ್ಥಗಿತಗೊಂಡಿದೆ. ಈ ಸಮಯದಲ್ಲಿ ರಾಶಿ ರಾಶಿ ಮೀನುಗಳನ್ನು ಹೊತ್ತು ತರಬೇಕಿದ್ದ ಬೋಟುಗಳು ಸಮುದ್ರಕ್ಕಿಳಿದರೆ ಬೋಟ್ ಮಾಲೀಕರು ವೆಚ್ಚ ಮಾಡುವ ಅರ್ಧದಷ್ಟು ಮೀನು ಸಿಗುತ್ತಿಲ್ಲ.
ರಾಜ್ಯದ ಕರಾವಳಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಆದೇಶದಂತೆ ಜೂನ್‌ನಿಂದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆ ಬಂದ್ ಮಾಡಲಾಗುತ್ತದೆ. ಈ ಅವಧಿ ಮತ್ಸ್ಯ ಸಂತಾನೋತ್ಪತ್ತಿ ಸಮಯವಾದ್ದರಿಂದ ಮೀನುಗಾರಿಕೆಗೆ ಅವಕಾಶವಿರುವುದಿಲ್ಲ. ಪ್ರತಿವರ್ಷದಂತೆ ಪ್ರಸಕ್ತ ಸಾಲಿನಲ್ಲಿ ಕೂಡಾ ಆಗಸ್ಟ್ ೧ರಿಂದ ಮೀನುಗಾರಿಕೆ ಆರಂಭಿಸಿದ್ದು, ಆರಂಭದಲ್ಲಿ ಉತ್ತಮವಾಗಿ ಮತ್ಸ್ಯಬೇಟೆ ನಡೆದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಆಳ ಸಮುದ್ರಕ್ಕೆ ತೆರಳಿದರೂ ಬೋಟುಗಳಿಗೆ ಮೀನುಗಳೇ ಸಿಗದೇ ವಾಪಸ್ ಆಗುತ್ತಿದೆ. ಯಾಂತ್ರೀಕೃತ ಬೋಟ್‌ಗಳು ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಒಂದು ಬೋಟಿಗೆ ಡೀಸೆಲ್, ಕಾರ್ಮಿಕರು ಸೇರಿದಂತೆ ಅಂದಾಜು ಒಂದು ಲಕ್ಷ ರು. ವರೆಗೂ ಖರ್ಚಾಗುತ್ತದೆ. ಆದರೆ ಸಮುದ್ರದಲ್ಲಿ ಕೇವಲ ₹೨೫ ರಿಂದ ೩೦ ಸಾವಿರ ಆಗುವಷ್ಟು ಮಾತ್ರ ಮೀನುಗಳು ಸಿಗುತ್ತಿದ್ದು, ಇದರಿಂದ ಬೋಟ್ ಮಾಲೀಕರಿಗೆ ನಷ್ಟವಾಗುತ್ತಿದೆ. ಕಾರಣ ಬೋಟ್‌ಗಳನ್ನು ಮೀನುಗಾರಿಕೆಗೆ ಕಳಿಸದೇ ಬಂದರಿನಲ್ಲೇ ಲಂಗರು ಹಾಕಿ ನಿಲ್ಲಿಸುತ್ತಿದ್ದಾರೆ. ಬರಪೂರ ಮೀನು ಸಿಗುವ ದಿನಗಳಲ್ಲಿ ಮೀನಿನ ಬರ ಎದುರಾಗಿದೆ.ಪ್ರತಿವರ್ಷ ಈ ಅವಧಿಯಲ್ಲಿ ಬಂಗುಡೆ, ಸೀಗಡಿ, ಲೆಪ್ಪೆ ಒಳಗೊಂಡು ಬೇರೆ ಬೇರೆ ಜಾತಿಯ ಸಾಕಷ್ಟು ಮೀನುಗಳು ಸಿಗುತ್ತಿದ್ದವು. ಇದರಿಂದ ಉತ್ತಮ ಮೀನುಗಾರಿಕೆಯಾಗುವ ಮೂಲಕ ಹೆಚ್ಚಿನ ಆದಾಯ ಗಳಿಸಿ ಸಾಲ ಮಾಡಿ ಬಲೆ, ಬೋಟ್ ಇತ್ಯಾದಿ ಖರೀದಿಸಿದ್ದ ಮೀನುಗಾರರು ಸಾಲ ತೀರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮೀನುಗಾರಿಕೆ ಆರಂಭವಾದ ಐದಾರು ತಿಂಗಳಲ್ಲೇ ಮತ್ಸ್ಯ ಕ್ಷಾಮ ಎದುರಾಗಿದೆ. ಬೋಟ್‌ಗೆ ಹಾಕುವ ಇಂಧನದ ವೆಚ್ಚವೂ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೀನುಗಾರಿಕೆ ಸ್ಥಗಿತ ಮಾಡುವುದು ಅನಿವಾರ್ಯವಾಗಿದೆ. ಮತ್ಸ್ಯ ಕ್ಷಾಮಕ್ಕೆ ಅವೈಜ್ಞಾನಿಕ ಬುಲ್ ಟ್ರಾಲ್, ಲೈಟ್ ಫಿಶಿಂಗ್ ಕಾರಣ ಎನ್ನುವುದು ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರ ಆರೋಪವಾಗಿದೆ. ರಾಜ್ಯ, ಕೇಂದ್ರ ಸರ್ಕಾರ ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಆಗ್ರಹವಾಗಿದೆ. ಮೀನುಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿರುವ ಸಾಂಪ್ರದಾಯಿಕ ಮೀನುಗಾರರು ಮತ್ಸ್ಯಕ್ಷಾಮದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.ಮತ್ಸ್ಯ ಕ್ಷಾಮ: ಸಾಲ ಮಾಡಿ ಬೋಟ್ ಖರೀದಿಸಿ ಮೀನುಗಾರಿಕೆ ಮಾಡಲಾಗುತ್ತದೆ. ಆದರೆ ಸಮುದ್ರಕ್ಕೆ ತೆರಳಿದರೆ ಖರ್ಚೆಲ್ಲಾ ಹೋಗಿ ಲಾಭ ಆಗುವಷ್ಟು ಮೀನು ಸಿಗದೇ ನಷ್ಟವಾಗುತ್ತಿದೆ. ಬೋಟ್ ಸಮುದ್ರಕ್ಕೆ ಕಳಿಸದೇ ಲಂಗರು ಹಾಕಿದರೆ ನಷ್ಟವನ್ನಾದರೂ ತಪ್ಪಿಸಬಹುದು. ಈಗಲೇ ಮತ್ಸ್ಯ ಕ್ಷಾಮ ಕಾಡಲು ಆರಂಭಿಸಿದೆ ಎಂದು ಬೋಟ್ ಮಾಲೀಕ ದೇವರಾಜ ತಾಂಡೇಲ್ ತಿಳಿಸಿದರು.