ಕಡಿಮೆ ಖರ್ಚಿನಲ್ಲಿ ಉಪ ಕಸುಬಾಗಿ ಮೀನು ಕೃಷಿ ಲಾಭದಾಯಕ

| Published : Dec 16 2023, 02:00 AM IST

ಕಡಿಮೆ ಖರ್ಚಿನಲ್ಲಿ ಉಪ ಕಸುಬಾಗಿ ಮೀನು ಕೃಷಿ ಲಾಭದಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಜೊತೆಗೆ ಉಪ ಕಸುಬಾಗಿ ಮೀನು ಕೃಷಿಯು ಅತ್ಯಂತ ಸೂಕ್ತವಾಗಿದೆ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರು ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ ನಡೆದ ಮೂರು ದಿನಗಳ ಮೀನುಕೃಷಿ, ಭಾರತೀಯ ಗೆಂಡೆ ಮೀನು ಮರಿಗಳ ಉತ್ಪಾದನೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹೇಳಿದರು.

ಭಾರತೀಯ ಗೆಂಡೆ ಮೀನು ಮರಿಗಳ ಉತ್ಪಾದನೆ ಕುರಿತ ತರಬೇತಿ ಉದ್ಘಾಟಿಸಿ ಕುಲಪತಿ ಆರ್ ಸಿ ಜಗದೀಶ್

ಕನ್ನಡಪ್ರಭ ವಾರ್ತೆ ಹಿರಿಯೂರು

ಕೃಷಿ ಜೊತೆಗೆ ಉಪ ಕಸುಬಾಗಿ ಮೀನು ಕೃಷಿಯು ಅತ್ಯಂತ ಸೂಕ್ತವಾಗಿದೆ ಎಂದು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅಭಿಪ್ರಾಯಪಟ್ಟರು.

ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಪ್ರಾಯೋಜಕತ್ವದಲ್ಲಿ ತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ ನಡೆದ ಮೂರು ದಿನಗಳ ಮೀನುಕೃಷಿ, ಭಾರತೀಯ ಗೆಂಡೆ ಮೀನು ಮರಿಗಳ ಉತ್ಪಾದನೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆದರೆ ಪೌಷ್ಟಿಕ ಆಹಾರದ ಕೊರತೆ ನಮ್ಮ ದೇಶದಲ್ಲಿ ಇನ್ನೂ ಇದೆ. ಮನುಷ್ಯನ ದೇಹದ ಹಲವಾರು ಕಾಯಿಲೆಗಳಿಗೆ ಅದರಲ್ಲೂ ಹೃದಯ ಸಂಬಂಧಿತ ಕಾಯಿಲೆಗಳಿಗೆ ಮೀನಿನ ಆಹಾರ ಅತ್ಯಂತ ಸೂಕ್ತವಾಗಿದ್ದು, ರೈತರು ತಮ್ಮ ಕೃಷಿ ಜೊತೆಗೆ ಮೀನುಕೃಷಿಯನ್ನು ಉಪಕಸುಬಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೀನು ಕೃಷಿಯು ಸರಳ, ಕಡಿಮೆ ಶ್ರಮ ಮತ್ತು ಕಡಿಮೆ ಬಂಡವಾಳದಿಂದ ಮಾಡಬಹುದಾಗಿದ್ದು, ಲಭ್ಯವಿರುವ ಅಲ್ಪ ನೀರಿನ ಸಂಪನ್ಮೂಲಗಳನ್ನು ಬಳಸಿಕೊಂಡು ವಿವಿಧ ತಳಿಯ ಮೀನುಗಳನ್ನು ಉತ್ಪಾದನೆ ಮಾಡುವುದರ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ರೈತರು ಇದರಿಂದ ನಿರಂತರ ಆದಾಯವನ್ನು ಕಾಣಬಹುದು. ಕಳೆದ ಎರಡು ವರ್ಷಗಳಲ್ಲಿ ಭಾರತವು ವಿದೇಶಗಳಿಗೆ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ಅತೀ ಹೆಚ್ಚು ರಫ್ತು ಮಾಡಿದ್ದು, ರೈತರು ಮೀನುಕೃಷಿಗೆ ಅತೀ ಹೆಚ್ಚು ಒಲವು ತೋರಿರುವುದರ ಸಂಕೇತವಾಗಿದೆ. ಕೇಂದ್ರ ಸರ್ಕಾರವು ಮೀನುಕೃಷಿ ಉತ್ತೇಜಿಸುವ ಸಲುವಾಗಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಸುರೇಶ ಏಕಬೋಟೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ತಮ್ಮ ಮೂಲ ಕೃಷಿಯೊಂದಿಗೆ ಮೀನುಕೃಷಿಯನ್ನು ಕೈಗೊಂಡಿರುವುದು ಅತ್ಯಂತ ಸ್ವಾಗತಾರ್ಹ. ರೈತರು ಮೂರು ದಿನಗಳ ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗ ಡಾ.ಓ.ಕುಮಾರ್ ಮಾತನಾಡಿ, ಮೀನು ಮರಿಗಳ ಉತ್ಪಾದನೆ ಮತ್ತು ಮೀನುಕೃಷಿಯ ಲಾಭದಾಯಕತೆಯ ಕುರಿತು ರೈತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು.

-----------------------

ಚಿತ್ರ 1

ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ ನಡೆದ ಮೂರು ದಿನಗಳ ಮೀನುಕೃಷಿ, ಭಾರತೀಯ ಗೆಂಡೆ ಮೀನು ಮರಿಗಳ ಉತ್ಪಾದನೆ ಕುರಿತ ತರಬೇತಿ ಕಾರ್ಯಕ್ರಮವನ್ನು ಕುಲಪತಿ ಡಾ.ಆರ್.ಸಿ.ಜಗದೀಶ್ ಉದ್ಘಾಟಿಸಿದರು.