ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಷ್ಟ್ರೀಯ ಆಹಾರ, ಆರ್ಥಿಕ ಭದ್ರತೆ ‘ಮತ್ಸ್ಯ ಸಂಪದ’ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ರೈತರು ಈ ಯೋಜನೆಯ ಪಡೆದುಕೊಂಡು ದೇಶವನ್ನು ಆಹಾರ, ಆರ್ಥಿಕ ಭದ್ರತೆಯತ್ತ ಕೊಂಡೊಯ್ಯಬೇಕು ಎಂದು ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕಾ ಕಾಲೇಜಿನ ವಿಸ್ತರಣಾ ನಿರ್ದೇಶಕ ಡಾ. ಎನ್.ಎ. ಪಾಟೀಲ್ ಹೇಳಿದ್ದಾರೆ.ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಮಂಗಳವಾರ ಮತ್ಸ್ಯ ಸಂಪದ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವಲ್ಲಿ ಮೀನುಗಾರಿಕಾ ವಲಯ ಮುಂಚೂಣಿಯಲ್ಲಿದೆ. ಅಲ್ಲದೆ, ದೇಶದ ಜಿಡಿಪಿಗೆ ಶೇ.1ರಷ್ಟು ಕೊಡುಗೆಯನ್ನು ಮೀನುಗಾರಿಕಾ ವಲಯ ನೀಡುತ್ತಿದೆ. ಮೀನುಗಾರರ ಅಭಿವೃದ್ಧಿ ಮೂಲಕ ದೇಶದ ಅಭಿವೃದ್ಧಿ ಹಾಗೂ ಅಪೌಷ್ಟಿಕತೆ ನಿವಾರಣೆಯ ಗುರಿ ಹೊಂದಲಾಗಿದೆ ಎಂದರು.ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಿದ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಡಾ.ಎಲ್. ನರಸಿಂಹ ಮೂರ್ತಿ, ಮೀನು ಅತ್ಯಂತ ಪರಿಪೂರ್ಣ ಆಹಾರ. ದೇಶದಲ್ಲಿ ಪ್ರಸ್ತುತ ಶೇ.70ಕ್ಕೂ ಅಧಿಕ ಮಾಂಸಾಹಾರಿಗಳಿದ್ದು, ಅವರಲ್ಲಿ ಎಷ್ಟು ಮಂದಿ ಮೀನು ಆಹಾರ ಸೇವನೆ ಮಾಡುವವರು, 2047ರ ಹೊತ್ತಿಗೆ ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಮತ್ಸ್ಯಾಹಾರ ಉತ್ಪಾದನೆ ಆಗಬೇಕು ಇತ್ಯಾದಿ ಅಂಶಗಳನ್ನು ಗಮನದಲ್ಲಿಸಿರಿಕೊಂಡು ಮೀನುಗಾರಿಕಾ ವಲಯದಲ್ಲಿ ಆಗಬೇಕಾಗಿರುವ ಬದಲಾವಣೆಗಳು, ರೈತರಿಗೆ ಏನು ಅಗತ್ಯವಿದೆ ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ವರದಿಯನ್ನು ಸಲ್ಲಿಸಿದರೆ ಮುಂದಿನ ಯೋಜನೆಗಳನ್ನು ರೂಪಿಸುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸ್ಥಳೀಯ ಕಾರ್ಪೊರೇಟರ್ ಭರತ್ ಕುಮಾರ್, ಎಸ್.ಎಂ. ಶಿವಪ್ರಕಾಶ್, ವಿವೇಕ್ ಆರ್., ಡಾ.ಟಿ.ಎನ್. ರಾಜೇಶ್, ಡಾ. ಟಿ.ಜೆ. ರಮೇಶ್, ಡಾ. ವಿಜಯ ಕುಮಾರ್, ಡಾ. ಕೆ.ಬಿ. ರಾಜಣ್ಣ, ಡಾ. ಮಂಜಪ್ಪ ಎನ್. ಇದ್ದರು. ಇದೇ ಸಂದರ್ಭ ಕಾಲೇಜಿನ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎಚ್.ಎನ್. ಆಂಜನೇಯಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ. ವಿಜಯ ಕುಮಾರ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎ.ಟಿ. ರಾಮಚಂದ್ರ ನಾಯ್ಕ್ ಸ್ವಾಗತಿಸಿದರು.
ಕಾರ್ಯಕ್ರಮದ ಅಂಗವಾಗಿ ವಿಜ್ಞಾನಿಗಳಿಂದ ರೈತರೊಡನೆ ಸಂವಾದ ಕಾರ್ಯಕ್ರಮ, ವಿಷಯಾಧಾರಿತ ವೈಜ್ಞಾನಿಕ ಮಾಹಿತಿಗಳು ಮತ್ತು ಜಲಕೃಷಿಯಲ್ಲಿ ನವೀನ ತಂತ್ರಜ್ಞಾನದ ಪರಿಚಯ, ರೈತರ ಕೃಷಿ ಹೊಂಡಗಳಲ್ಲಿ ಮೀನು ಸಾಕಣೆಗೆ ಸೂಕ್ತವಾದ ಮೀನಿನ ತಳಿಗಳ ಪರಿಚಯ ಮತ್ತು ನಿರ್ವಹಣೆ ಮಾಹಿತಿ ಮೊದಲಾದ ಕಾರ್ಯಕ್ರಮಗಳ ಜತೆಗೆ ಮೀನುಗಾರಿಕೆಗೆ ಅಗತ್ಯವಾದ ಸಲಕರಣೆಗಳು, ಅವಿಷ್ಕಾರಗಳು, ಉತ್ಪನ್ನಗಳ ಪ್ರದರ್ಶನ ಮಳಿಗೆಗಳ ಮೂಲಕ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.