ಸಾರಾಂಶ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತುಂಗಭದ್ರಾ ನದಿ ತೀರದ ಹಳ್ಳಿಗಳಲ್ಲಿ ಮೀನುಗಳನ್ನು ಹಿಡಿದು, ಅದರ ಆದಾಯದಲ್ಲೇ ಬದುಕು ಕಟ್ಟಿಕೊಂಡಿದ್ದ 18 ಬಡ ಮೀನುಗಾರ ಕುಟುಂಬಗಳ ಜೀವನಕ್ಕೆ ಮರಳು ಅಕ್ರಮ ದಂಧೆ ಕುತ್ತು ತಂದಿದೆ.ತಾಲೂಕಿನ ಹಿರೇಬನ್ನಿಮಟ್ಟಿಯಲ್ಲಿ ತುಂಗಭದ್ರಾ ನದಿ ಹರಿಯುತ್ತಿದೆ. ಅನಾದಿ ಕಾಲದಿಂದಲೂ ಇಲ್ಲಿನ ಅನೇಕ ಕುಟುಂಬಗಳು ಮೀನು ಹಿಡಿಯುವ ಕಾಯಕದಲ್ಲಿ ತೊಡಗಿಕೊಂಡಿದ್ದು, ಅದರಿಂದ ತಮ್ಮ ಮಕ್ಕಳ ಶಿಕ್ಷಣ, ಆಹಾರ ಸೇರಿದಂತೆ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ನಿತ್ಯ 2 ಸಾವಿರವರೆಗೆ ಆದಾಯ ಪಡೆಯುತ್ತಿದ್ದ ಈ ಕುಟುಂಬಗಳ ಬದುಕು ಬೀದಿಪಾಲಾಗಿ ದೂರದೂರಿಗೆ ಕೂಲಿ ಅರಿಸಿ ಹೋಗುತ್ತಿದ್ದಾರೆ. ಇದಕ್ಕೆಲ್ಲ ಮರಳು ಅಕ್ರಮ ದಂಧೆಯೇ ಕಾರಣವಾಗಿದೆ ಎಂದು ಮೀನುಗಾರ ಕುಟುಂಬಗಳು ಆರೋಪಿಸುತ್ತಿವೆ.
ನಿತ್ಯ ಸಂಜೆ ನದಿ ನೀರಿನಲ್ಲಿ ಮೀನಿನ ಬೇಟೆಗಾಗಿ ಮೀನುಗಾರರು ಬಲೆ ಬಿಟ್ಟು ಬರುತ್ತಾರೆ. ಆದರೆ ರಾತ್ರಿ, ಹಗಲು ಹೊತ್ತಿನಲ್ಲಿಯೂ ಮರಳು ಅಕ್ರಮ ದಂಧೆಗೆ ಬಳಕೆಯಾಗುವ ಬಿದಿರಿನ ತೆಪ್ಪ, ಕಬ್ಬಿಣದ ತೆಪ್ಪಗಳ ಹಾವಳಿಗೆ ಬಲೆಗಳು ಹರಿದು ಹೋಗುತ್ತಿವೆ. ಅಲ್ಪ ಸ್ವಲ್ಪ ಬಲೆಯಲ್ಲಿ ಸಿಲುಕಿದ್ದ ಮೀನುಗಳು ಕೂಡ ಅಕ್ರಮ ಮರಳು ಎತ್ತುವವರೇ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ನಮ್ಮ ಬಲೆಗಳು ಹಾನಿಯಾಗುವ ಜತೆಗೆ ನಮಗೆ ಕೆಲಸ ಇಲ್ಲದಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ನಮ್ಮ ನೋವು ಆಲಿಸುತ್ತಿಲ್ಲ ಎನ್ನುತ್ತಾರೆ ಮೀನುಗಾರರು.ಮರಳು ಅಕ್ರಮ ದಂಧೆ ಪ್ರಶ್ನಿಸಿದವರಿಗೆ ಧಮ್ಕಿ ಹಾಕುವ ಈ ದಂಧೆಕೋರರು, ನಮ್ಮನ್ನು ನೀವು ಏನು ಮಾಡಿಕೊಳ್ಳಲು ಆಗುವುದಿಲ್ಲ. ಮರಳು ಕಳ್ಳತನ ಮಾಡುವ ಜತೆಗೆ ಮೀನುಗಾರಿಕೆ ವೃತ್ತಿಗೂ ಕಂಟಕ ತಂದಿದ್ದಾರೆ. ಇದರಿಂದ ನಮ್ಮ ಬದುಕು ಬರ್ಬಾದ್ ಆಗಿ ಹೋಗಿದೆ. ಮೀನುಗಾರಿಕೆ ನಂಬಿ ಜೀವನ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೆ ಮಹಿಳಾ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದೇವೆ. ವಾರ ಹಣ ಪಾವತಿ ಮಾಡಲು ನಾವು ಹರಸಾಹಸ ಪಡುತ್ತಿದ್ದೇವೆ ಎನ್ನುತ್ತಾರೆ ಮೀನುಗಾರರು.
ಬದುಕಿಗೆ ಆಸರೆಯಾಗಿ:ನದಿಯಲ್ಲಿ ಮೀನಿನ ಬೇಟೆಗಾಗಿ ₹5ರಿಂದ 6 ಸಾವಿರ ಮೌಲ್ಯದ ಬಲೆಗಳನ್ನು ತಂದು ಬಿಡುತ್ತೇವೆ. ಆದರೆ ಮರಳು ಅಕ್ರಮ ದಂಧೆಕೋರರು ಬಿದಿರಿನ ಬಂಬುಗಳ ಮೂಲಕ ಹಾಳು ಮಾಡುವುದು ಅಲ್ಲದೇ ಮೀನು ಇಲ್ಲದಂತೆ ಮಾಡಿದ್ದಾರೆ. ನಮ್ಮ ಬದುಕನ್ನು ಕಿತ್ತುಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿ ನಮ್ಮ ಬದುಕಿಗೆ ಆಸರೆಯಾಗಬೇಕು ಎನ್ನುತ್ತಾರೆ ಮೀನುಗಾರ ಏರಿಮನಿ ಹುಸೇನ್ ಪೀರ್.
ಮೀನುಗಾರಿಕೆಗೆ ಅಡ್ಡಿಯಾಗಿರುವ ಮರಳು ಅಕ್ರಮ ದಂಧೆ ಹಗಲು ರಾತ್ರಿ ಎಗ್ಗಿಲ್ಲದೇ ನಡೆಯುತ್ತಿದೆ. ಮರಳು ಅಕ್ರಮ ದಂಧೆಗೆ ಉತ್ತರಪ್ರದೇಶ ಮೂಲದ ಕಾರ್ಮಿಕರು ನಮಗೆ ಧಮ್ಕಿ ಹಾಕುವ ಜತೆಗೆ ಮೀನಿನ ಬಲೆ, ನದಿ ದಂಡೆಯಲ್ಲಿರುವ ಮೀನಿನ ಬುಟ್ಟಿಗಳನ್ನು ಹಾಳು ಮಾಡುತ್ತಿದ್ದಾರೆ ಎನ್ನುತ್ತಾರೆ ಹಿರೇಹಡಗಲಿ ಮೀನುಗಾರರ ಸಂಘದ ನಿರ್ದೇಶಕ ಏರಿಮನಿ ಗೌಸಸಾಹೇಬ.ಹಿರೇಬನ್ನಿಮಟ್ಟಿ ಗ್ರಾಮದ ನದಿ ತೀರಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಆಲಿಸಿ ಅವರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ತಹಸೀಲ್ದಾರ್ ಸಂತೋಷಕುಮಾರ.