ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ಸೆ.24 ರಿಂದ ಎರಡು ದಿನಗಳ ಕಾಲ ಮೇಳೈಸುವ ಜಾನಪದ ಕಲಾ ಮೇಳದಲ್ಲಿ ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ.ಸೆ.24 ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಮಟ್ಟದ 46ನೇ ಶ್ರೀಕಾಲಭೈರವೇಶ್ವರ ಜಾನಪದ ಕಲಾ ಮೇಳವನ್ನು ಉದ್ಘಾಟಿಸಿದ ಬಳಿಕ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಎಚ್.ಎಂ.ವೆಂಕಟಪ್ಪ, ಸಮಾಜ ಸೇವಾ ಕ್ಷೇತ್ರದಿಂದ ಎನ್.ಜಿ.ನಾರಾಯಣ, ಕ್ರೀಡಾ ಕ್ಷೇತ್ರದ ಸಾಧಕ ಡಾ.ಸಿ.ಹೊನ್ನಪ್ಪಗೌಡ, ಕೃಷಿ ಮತ್ತು ಪರಿಸರ ಕ್ಷೇತ್ರದಿಂದ ಡಾ.ಎಲ್.ಹನುಮಯ್ಯ ಮತ್ತು ಜಾನಪದ ಕ್ಷೇತ್ರದ ಸಾಧಕ ಜಿ.ಡಿ.ತಿಮ್ಮಯ್ಯ ಅವರಿಗೆ 50 ಸಾವಿರ ನಗದು ಸೇರಿದಂತೆ ನೆನಪಿನ ಕಾಣಿಕೆ ಪ್ರಶಸ್ತಿ ಫಲಕಗಳನ್ನೊಳಗೊಂಡ ಈ ವರ್ಷದ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ ಶ್ರೀಕ್ಷೇತ್ರದಿಂದ ನಿರ್ಮಲಾನಂದನಾಥಶ್ರೀಗಳು ಗೌರವಿಸುವರು.ಇದೇ ವೇಳೆ ಕಲರವದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಲಿರುವ ಸಹಸ್ರಾರು ಸಂಖ್ಯೆಯ ಜಾನಪದ ಕಲಾವಿದರು ತಾವು ಕಲಿತಿರುವ ಗ್ರಾಮೀಣ ಸೊಗಡಿನ ಕಲೆಯನ್ನು ಪ್ರದರ್ಶಿಸುವ ಮೂಲಕ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಆಶಯವನ್ನು ಈಡೇರಿಸಲಿದ್ದಾರೆ.
ಮುತ್ತಿನ ಪಾಲಕಿ ಉತ್ಸವ-ತೆಪ್ಪೋತ್ಸವ:ಅದೇ ದಿನ ಸಂಜೆ 8.30ಗಂಟೆಗೆ ಶ್ರೀಕ್ಷೇತ್ರದ ಜೋಡಿ ರಸ್ತೆಯಲ್ಲಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ಸರ್ವಾಲಂಕೃತ ಮುತ್ತಿನ ಪಾಲಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆಯಲಿದ್ದು ನಂತರ ಶ್ರೀ ಕಾಲ ಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಲಿದೆ.
ಶ್ರೀಗುರು ಸಂಸ್ಮರಣೋತ್ಸವ:ಸೆ.25ರ ಗುರುವಾರ ಬೆಳಗ್ಗೆ 9.30ಕ್ಕೆ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ 52ನೇ ವಾರ್ಷಿಕ ಪಟ್ಟಾಭೀಷೇಕ ಮಹೋತ್ಸವ, ಶ್ರೀಗುರು ಸಂಸ್ಮರಣೋತ್ಸವ ಹಾಗೂ ರಾಜ್ಯಮಟ್ಟದ 46ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭ ನಡೆಯಲಿದೆ.